ಹನೂರಿನಲ್ಲಿ ಆಯೋಜಿಸಿದ್ದ ಪ್ರಾಣಿಸಖಿ ತರಬೇತಿ ಕಾರ್ಯಾಗಾರವನ್ನು ಬಿಇಒ ಮಹೇಶ್ ಉದ್ಘಾಟಿಸಿದರು. ವೆಂಕಟೇಶ್, ಅಶೋಕ್, ಮಲ್ಲಿಕಾರ್ಜುನ, ಮಂಜುಳಾ ಇತರರು ಇದ್ದರು.
- ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಸೂಚನೆ
- ಪ್ರೌಢಶಾಲಾ ಶಿಕ್ಷಕರಿಗೆ ತರಬೇತಿ ಕಾರ್ಯಾಗಾರ
ಹನೂರು: ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಶಾಲೆಗಳಲ್ಲಿ ಜಾರಿಗೊಳಿಸುವ ಪ್ರಾಣಸಖಿ ಕಾರ್ಯಕ್ರಮವನ್ನು ಕಡ್ಡಾಯವಾಗಿ ಅನುಷ್ಠಾನಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಹೇಶ್ ಹೇಳಿದರು.
ಪಟ್ಟಣದ ಬಿಆರ್‌ಸಿ ಸಭಾಂಗಣದಲ್ಲಿ ಶನಿವಾರ ಪ್ರೌಢಶಾಲಾ ಶಿಕ್ಷಕರಿಗೆ ಪ್ರಾಣಸಖಿ ಕಾಯಕ್ರಮ ಕುರಿತು ಆಯೋಜಿಸಿದ್ದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಾಣಸಖಿ ಕಾರ್ಯಕ್ರಮವು ಚಾ.ನಗರ ಜಿಲ್ಲೆಯಲ್ಲಿ ಮಾತ್ರ ಹದಿಹರಯದ ಹೆಣ್ಣು ಮಕ್ಕಳ ಸಮಗ್ರ ಅಭಿವೃದ್ಧಿಗೆ ಜಿಲ್ಲಾಡಳಿತ ಜಾರಿಗೆ ತಂದಿರುವ ವಿನೂತನ ಯೋಜನೆಯಾಗಿದೆ. ಹೆಣ್ಣು ಮಕ್ಕಳ ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆ ತಡೆ, ಆತ್ಮ ವಿಶ್ವಾಸ, ಯೋಗಕ್ಷೇಮ ಸೇರಿದಂತೆ ಸಮಗ್ರ ಅಭಿವೃದ್ಧಿಯನ್ನು ಒಳಗೊಂಡಿದೆ. 10ರಿಂದ 19 ವಯಸ್ಸಿನ ಹೆಣ್ಣು ಮಕ್ಕಳಲ್ಲಿ ಆರೋಗ್ಯ, ಪೌಷ್ಟಿಕ ಆಹಾರ ಸೇವನೆಯ ಬಗ್ಗೆ ಅರಿವಿನ ಕೊರತೆ ಇದೆ. ಬಾಲ್ಯ ವಿವಾಹದ ಒತ್ತಡ ಹಾಗೂ ಭಾವೆನಗಳನ್ನು ಮುಕ್ತವಾಗಿ ಅಭಿವ್ಯಕ್ತ ಪಡಿಸಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದ್ದರಿಂದ ಪ್ರಾಣಿಸಖಿ ಕಾರ್ಯಕ್ರಮವನ್ನು ಶಾಲೆಯಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸುವುದರಿಂದ ಹೆಣ್ಣು ಮಕ್ಕಳ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ. ಸರ್ವಾಂಗೀಣ ಬೆಳವಣಿಗೆಗೆ ಅಗತ್ಯವಾದ ಜ್ಞಾನ, ಕೌಶಲ ಹಾಗೂ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಜತೆಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ ಹೊಂದಲು ಸಹಕಾರಿಯಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಈ ಬಗ್ಗೆ ಮನದಟ್ಟು ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬಿಆರ್‌ಸಿ ವೆಂಕಟೇಶ್, ಶಿಕ್ಷಣ ಸಂಯೋಜಕರಾದ ಅಶೋಕ್, ಚಿನ್ನಪ್ಪಯ್ಯ, ಡಿಡಿಪಿಐ ಕಚೇರಿಯ ಮಂಜುಳಾ, ಮಲ್ಲಿಕಾರ್ಜುನ ಇತರರು ಇದ್ದರು.