ಗುಂಡ್ಲುಪೇಟೆ ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಬೋಧಿರತ್ನ ಬಂತೇಜಿ, ಸಿ.ಎಸ್.ನಿರಂಜನಕುಮಾರ್, ಎಚ್.ಎಸ್.ನಂಜುಂಡಪ್ರಸಾದ್, ಎಚ್.ಎನ್.ಬಸವರಾಜು, ಡಾ.ನವೀನ್ ಮೌರ್ಯ, ಗೋಪಾಲ್ ಇದ್ದರು.
- ಶಾಸಕ ಎಚ್.ಎಂ.ಗಣೇಶ್ ಪ್ರಸಾದ್
- ಕೋಟೆಕೆರೆ ಗ್ರಾಮ
ಗುಂಡ್ಲುಪೇಟೆ: ಡಾ.ಅಂಬೇಡ್ಕರ್ ಅವರ ಮೂರ್ತಿ ನಿರ್ಮಿಸುವ ಬದಲು ಪ್ರತಿ ದಿನವೂ ಅವರು ಹಾಕಿಕೊಟ್ಟ ದಾರಿಯಲ್ಲಿ ಮುನ್ನಡೆಯುವುದರಿಂದ ನಮ್ಮ ಜೀವನ ಸಾರ್ಥಕವಾಗುತ್ತದೆ ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ತಾಲೂಕಿನ ಕೋಟೆಕೆರೆ ಗ್ರಾಮದಲ್ಲಿ ಶನಿವಾರ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಮಾತ್ರ ಸಮಾಜ ಹಾಗೂ ಸಮುದಾಯಗಳ ಅಭಿವೃದ್ದಿ ಸಾಧ್ಯ ಎಂದು ಅಂಬೇಡ್ಕರ್ ಹೇಳಿದ್ದರು. ಆದ್ದರಿಂದ ಅವರು ಹಾಕಿಕೊಟ್ಟ ದಾರಿಯಲ್ಲಿ ಸಾಗುವುದರಿಂದ ಮಾತ್ರ ಅಭಿವೃದ್ದಿ ಸಾಧ್ಯ ಎಂದರು.
ಜಿಲ್ಲೆಯ ಅಭಿವೃದ್ಧಿಗೆ ಬಿ.ರಾಚಯ್ಯ, ಶ್ರೀನಿವಾಸಪ್ರಸಾದ್, ಧ್ರುವನಾರಾಯಣ ಮುಂತಾದವರು ತಮ್ಮದೇ ಆದ ವಿಶೇಷ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ಮಾಜಿ ಶಾಸಕ ಸಿ.ಎಸ್. ನಿರಂಜನ್ ಕುಮಾರ್ ಮಾತನಾಡಿ, ಅಂಬೇಡ್ಕರರು ತಮ್ಮ ಜೀವಮಾನವನ್ನು ತ್ಯಾಗ ಮಾಡಿ ದೇಶಕ್ಕೆ ಸಂವಿಧಾನವನ್ನು ಅರ್ಪಣೆ ಮಾಡಿದ್ದಾರೆ. ಅವರ ಪ್ರತಿಮೆ ಬಹಳಷ್ಟು ಗ್ರಾಮಗಳಲ್ಲಿ ನಿರ್ಮಾಣವಾಗುತ್ತಿವೆ. ಯುವ ಸಮೂಹ ಉನ್ನತ ಶಿಕ್ಷಣ ಪಡೆಯುವ ಮೂಲಕ ಸಮ ಸಮಾಜ ನಿರ್ಮಾಣ ಮಾಡುವುದರ ಕಡೆಗೆ ಸಾಗಬೇಕು ಎಂದರು.
ನಳಂದ ಬುದ್ಧ ವಿಹಾರದ ಬೋಧಿರತ್ನ ಬಂತೇಜಿ, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಬಸವರಾಜು, ಬೆಂಗಳೂರಿನ ಐಎಎಸ್ ಅಕಾಡೆಮಿ ನಿರ್ದೇಶಕ ಡಾ.ಶಿವಕುಮಾರ್, ವಿರಶೈವ ಲಿಂಗಾಯಿತ ಮಹಾಸಭಾ ತಾಲೂಕು ಅಧ್ಯಕ್ಷ ರವಿ ಕಮರಹಳ್ಳಿ, ಮುಖಂಡರಾದ ಮಹದೇವಸ್ವಾಮಿ, ರಂಗಸ್ವಾಮಿ, ಡಾ.ನವೀನ್ ಮೌರ್ಯ, ಗೋಪಾಲ್, ಸುಭಾಷ್ ಮಾಡ್ರಹಳ್ಳಿ ಸೇರಿದಂತೆ ಹಲವರು ಇದ್ದರು.