ಯಳಂದೂರು ಸಮೀಪದ ಮಸಣಾಪುರ ಗ್ರಾಮದಲ್ಲಿ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಶಾಸಕ ಎ.ಆರ್. ಕೃಷ್ಣಮೂರ್ತಿ, ಮಹೇವಸ್ವಾಮಿ, ಎಚ್.ವಿ. ಚಂದ್ರು ಇತರರಿದ್ದರು.
- ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ
ಯಳಂದೂರು: ಉಪ್ಪಾರರು ಶಿಕ್ಷಣವನ್ನು ಅಭಿವೃದ್ಧಿಯ ಅಸ್ತ್ರವಾಗಿ ಬಳಸಿಕೊಂಡು ತಾವು ಆರ್ಥಿಕವಾಗಿ, ಸಾಮಾಜಿಕವಾಗಿ ಸಲಬರಾಗಬೇಕು. ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು. ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಬೇಕು ಎಂದು ಶಾಸಕ ಎ.ಆರ್. ಕೃಷ್ಣಮೂರ್ತಿ ಕರೆ ನೀಡಿದರು.
ಚಾಮರಾಜನಗರ ತಾಲೂಕಿನ ಮಸಣಾಪುರ ಗ್ರಾಮದ ಉಪ್ಪಾರ ಬಡಾವಣೆಯಲ್ಲಿ ಶನಿವಾರ ಆಯೋಜಿಸಿದ್ದ ಮಹರ್ಷಿ ಭಗೀರಥ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯದಲ್ಲಿ ಡಿ. ದೇವರಾಜು ಅರಸು ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯ ಹಾವನೂರು ವರದಿ ಹಾಗೂ ದೇಶದಲ್ಲಿ ವಿ.ಪಿ. ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ಮಂಡಲ್ ಆಯೋಗದಿಂದ ದೇಶ ಹಾಗೂ ರಾಜ್ಯದಲ್ಲಿ ಹಿಂದುಳಿದ ವರ್ಗಗಳಿಗೆ ಹೆಚ್ಚಿನ ಅನುಕೂಲವಾಗಿದೆ. ಆದರೆ ಉಪ್ಪಾರ ಸಮುದಾಯ ಶಿಕ್ಷಣದಿಂದ ಹೆಚ್ಚು ವಂಚಿತವಾಗಿದೆ. ಬಾಲ್ಯವಿವಾಹದಂತಹ ಪದ್ಧತಿ ಇನ್ನೂ ಕೆಲವೆಡೆ ಜೀವಂತವಾಗಿದೆ. ಇದು ಸಂಪೂರ್ಣವಾಗಿ ನಿಲ್ಲಬೇಕು. ಈ ಸಮುದಾಯಗಳ ಬಡಾವಣೆಗಳು, ಭವನಗಳಿಗೆ ಹೆಚ್ಚಿನ ಅನುದಾನವನ್ನು ನೀಡಿದ್ದೇನೆ. ನಮ್ಮ ಜಿಲ್ಲೆಯಲ್ಲಿ ಈ ಜನಾಂಗದ ಅನೇಕರು ರಾಜಕೀಯದಲ್ಲಿ ಇದ್ದಾರೆ. ಇದನ್ನು ಇನ್ನಷ್ಟು ಗಟ್ಟಿಗೊಳಿಸುವ ಕೆಲಸವಾಗಬೇಕು. ನನಗೆ ರಾಜಕೀಯವಾಗಿ ಈ ಬಾರಿಯ ಚುನಾವಣೆಯಲ್ಲಿ ಪುನರ್‌ಜನ್ಮ ನೀಡಿದ ಸಮುದಾಯಲ್ಲಿ ಇದೂ ಕೂಡ ಒಂದಾಗಿದ್ದು ನನ್ನ ಅವಧಿಯಲ್ಲಿ ಈ ಸಮುದಾಯಕ್ಕೆ ಇನ್ನಷ್ಟು ಅನುದಾನ ನೀಡಿ ಅಭಿವೃದ್ಧಿಗೆ ನಿಮ್ಮ ಜನಸೇವಕನಾಗಿ ಶ್ರಮಿಸುತ್ತೇನೆ ಎಂದರು.
ಮುಖ್ಯ ಭಾಷಣಕಾರ ಗೌಡಹಳ್ಳಿ ಮಹೇಶ್ ಮಾತನಾಡಿ, ಕರ್ನಾಟಕದಲ್ಲಿ 25 ರಿಂದ 40 ಲಕ್ಷ ಜನ ಉಪ್ಪಾರರು ಇದ್ದಾರೆ. ಆದರೆ ಸರ್ಕಾರ ದಾಖಲೆಗಳ ಪ್ರಕಾರ 7.5 ಲಕ್ಷ ಜನಸಂಖ್ಯೆ ಇದೆ ಎಂದಿದೆ. ಈ ಬಗ್ಗೆ ಪರಿಷ್ಕರಣೆಯಾಗಬೇಕು. ಈ ಜನಾಂಗದಲ್ಲಿ ಶೇ 13. ರಷ್ಟು ಪುರುಷರು ಶೇ. 8 ರಷ್ಟು ಮಹಿಳೆಯರು ಮಾತ್ರ ಶಿಕ್ಷಿತರಾಗಿದ್ದಾರೆ. ಶೇ. 50 ರಷ್ಟು ಕೂಲಿ ಕಾರ್ಮಿಕರಿದ್ದಾರೆ. ಶೇ. 30 ರಷ್ಟು ಮಂದಿ ಇನ್ನೂ ಕೂಡ ಕಚ್ಚಾ ಮನೆಗಳಲ್ಲೇ ವಾಸವಾಗಿದ್ದಾರೆ. ಆತಂಕಕಾರಿ ವಿಷಯವಾಗಿದ್ದು ಎಲ್ಲರೂ ಶಿಕ್ಷಿತರಾಗಬೇಕು. ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ಕೆಲಸ ಗಿಟ್ಟಿಸಿಕೊಳ್ಳಬೇಕು. ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕು. ಸರ್ಕಾರದಿಂದ ಸಿಗುವ ಸೌಲಭ್ಯಗಳ ಸದುಪಯೋಗ ಪಡೆದುಕೊಳ್ಳಬೇಕೆಂದರು.
ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್, ಜಿಪಂ ಮಾಜಿ ಅಧ್ಯಕ್ ಮಹದೇವಶೆಟ್ಟಿ ಮಾತನಾಡಿದರು.
ಇದೇ ಸಂದರ್ಭದಲ್ಲಿ ಗ್ರಾಮದ ಎಲ್ಲ ಸಮುದಾಯದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಶೆಟ್ಟಿ ಸರಗೂರಯ್ಯ ಮಠದ ಮಹೇವಸ್ವಾಮಿ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಎಚ್.ವಿ. ಚಂದ್ರು, ಕೊಳ್ಳೇಗಾಲ ತಾಲೂಕು ಅಧ್ಯಕ್ಷ ರಾಜೇಂದ್ರ, ಕೃಷಿ ಪತ್ತಿನ ಸಹಕಾರ ಸಂಘದ ಕೊಳ್ಳೇಗಾಲದ ಮಾಜಿ ಅಧ್ಯಕ್ಷ ಎಸ್. ರಮೇಶ್, ಪಿಡಿಒ ಮಮತಾ, ಸುಂದ್ರಣ್ಣ, ಬಸವರಾಜು, ಜಿಯಾವುಲ್ಲಾಖಾನ್, ಮುನೀರ್, ಶಿವನಂಜಯ್ಯ, ಬಿ. ರೇವಣ್ಣ, ವಿಜಯ್, ಕೃಷ್ಣ, ಶ್ರೀನಿವಾಸ್, ಶೇಷಣ್ಣ, ಮಣಿಕಂಠ, ಮಹದೇವ, ಸಣ್ಣಮಾದಶೆಟಿ, ಕಮರವಾಡಿ ರೇವಣ್ಣ, ನಟರಾಜು ಇತರರಿದ್ದರು.