ಚಾಮರಾಜನಗರದ ಡಾ.ರಾಜ್‌ಕುಮಾರ್ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಭಗವಾನ್ ಮಹಾವೀರರ ಜಯಂತಿ ಕಾರ್ಯಕ್ರಮವನ್ನು ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ ಉದ್ಘಾಟಿಸಿದರು. ಸುರೇಶ್ ಋಗ್ವೇದಿ, ಕೆ.ಪಿ.ಉಲ್ಲಾಸ್, ಪರುಶುರಾಮ ಛಲವಾದಿ, ರಾಜು ಇದ್ದರು.
- ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ಅಭಿಮತ
ಚಾಮರಾಜನಗರ: ಪ್ರಪಂಚದಲ್ಲಿ ಯುದ್ಧ, ಭ್ರಷ್ಟಾಚಾರ ಹೆಚ್ಚಾಗುತ್ತಿರುವ ಕಾಲಘಟ್ಟದಲ್ಲಿ ಭಗವಾನ್ ಮಹಾವೀರರ ತತ್ವಾದರ್ಶಗಳು ಸಮಾಜಕ್ಕೆ ಸಹಕಾರಿಯಾಗಿದೆ ಎಂದು ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಭಾನುವಾರ ನಗರದ ಡಾ.ರಾಜ್‌ಕುಮಾರ್ ರಂಗಮಂದಿರಲ್ಲಿ ಆಯೋಜಿಸಿದ್ದ ಭಗವಾನ್ ಮಹಾವೀರ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಭಗವಾನ್ ಮಹಾವೀರರರು 6ನೇ ಶತಮಾನದಲ್ಲಿ ಬಿಹಾರದ ರಾಜ ಮನೆತನದಲ್ಲಿ ಸಿದ್ಧಾರ್ಥ ಮತ್ತು ತ್ರಿಶಾಲ ದಂಪತಿಗೆ ಜನ್ಮತಾಳಿದರು. 12 ವರ್ಷ ತಪಸ್ಸು ಮಾಡಿ ಜ್ಞಾನ ಪಡೆದರು. ಸತ್ಯ ಮತ್ತು ಜ್ಞಾನವನ್ನು ಹುಡುಕಲು ಪ್ರಯತ್ನ ಮಾಡಿದರು. ಜೀವನದಲ್ಲಿ ಅಹಿಂಸೆ, ಸತ್ಯ, ಬ್ರಹ್ಮಚಾರ್ಯ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂಬುದನ್ನು ಸಾರುವ ಮೂಲಕ ತಿಳಿ ಹೇಳಿದರು ಎಂದರು.
ಸಕಲ ಪ್ರಾಣಿಗಳಿಗೂ ಜೀವಿಸಲು ಹಕ್ಕಿದೆ ಎಂದು ಶಾಂತಿ ಬೋಧನೆ ಸಾರಿದರು. ಅವರು ಯಾವುದೇ ಗದ್ದಲ ಗಲಾಟೆಗಳಿಗೆ ಅವಕಾಶ ನೀಡಲಿಲ್ಲ. ಇಂತಹ ಮಹಾನ್ ವ್ಯಕ್ತಿಯ ತತ್ವ, ಆದರ್ಶ, ಚಿಂತನೆಗಳನ್ನು ಪಾಲನೆ ಮಾಡಬೇಕಿದೆ. ದೇಶದ ಜನರು ಅತ್ಯಂತ ಶಾಂತಿ ಪ್ರಿಯರಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್, ಕನಕದಾಸ ಇತರ ಮಹಾವೀರರು ನೆಲೆಸಿದ ನಾಡು ಇದಾಗಿದೆ. ನನ್ನಿಂದ ಇನ್ನೊಬ್ಬರಿಗೆ ತೊಂದರೆಯಾಗಬಾರದು ಎನ್ನುವ ದಾರಿಯಲ್ಲಿ ಸಾಗಬೇಕಾಗಿದೆ. ಆಗ ಶಾಂತಿ, ನೆಮ್ಮದಿ, ಸುಖದ ಬದುಕು ಸಿಗಲಿದೆ ಎಂದು ಹೇಳಿದರು.
ಸಂಸ್ಕೃತಿ ಚಿಂತಕ ಸುರೇಶ್ ಋಗ್ವೇದಿ ಮಾತನಾಡಿ, ಭಗವಾನ್ ಮಹಾವೀರ ಜಯಂತಿಯನ್ನು ವಿಶ್ವದೆಲ್ಲೆಡೆ ಆಚರಣೆ ಮಾಡಲಾಗುತ್ತಿದೆ. ಜಗತ್ತು ವಿಜ್ಞಾನದಲ್ಲಿ ಅಪಾರ ಅಭಿವೃದ್ಧಿ ಸಾಧಿಸಿದೆ. ಆರ್ಥಿಕ ಮುನ್ನಡೆ ಅಹಂಕಾರದ ಮೂಲ ಎನ್ನಲಾಗುತ್ತದೆ. ನಾನತ್ವದ ಚಿಂತನೆಯಲ್ಲಿ ಇಡೀ ಜಗತ್ತು ಇಂದು ಅಲ್ಲೋಲ ಕಲ್ಲೋಲವಾಗಿದೆ. ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಅಮೆರಿಕ, ಇಸ್ರೇಲ್ ಮತ್ತು ಇರಾನ್ ಯುದ್ಧದಿಂದ ಅಶಾಂತಿ ನಿರ್ಮಾಣವಾಗಿದೆ. ಶಾಂತಿಯೇ ಜಗತ್ತಿನ ಬಹುದೊಡ್ಡ ಸಂಪತ್ತು ಎಂದು ಸಾರುವ ಮೂಲಕ ಇಡೀ ಜಗತ್ತು ಅಹಿಂಸೆಗೆ ಪರಿತಪಿಸುತ್ತಿದೆ ಎಂದು ತಿಳಿಸಿದರು.
ಪ್ರಸ್ತುತ ಮನುಷ್ಯನಿಗೆ ಆಂತರಿಕವಾದ ಶಾಂತಿ ಅತ್ಯಂತ ಅಗತ್ಯವಾಗಿದೆ. ಮಾನವರ ಬದುಕಿನಲ್ಲಿ ಧ್ಯಾನದ ಮೂಲಕ ಶಾಂತಿ ದೊರೆಯುತ್ತದೆ ಎಂಬ ಪರಮ ಸತ್ಯವನ್ನು ಹೇಳಿದರು. ಆಗರ್ಭ ಶ್ರೀಮಂತರಾಗಿದ್ದ ವರ್ಧಮಾನ ಅವರು ಇಡೀ ಜಗತ್ತನ್ನೇ ಬೆಳಗುವಂತೆ ಬೆಳೆದರು ಎಂದರು.
30ನೇ ವಯಸ್ಸಿನಲ್ಲಿ ಯಾರು ಅಜ್ಞಾನಕ್ಕೆ ಒಳಗಾಗುತ್ತಾರೋ ಅವರು ವಿವೇಕ ಪಡೆಯಲು ಸಾಧ್ಯವಾಗುವುದಿಲ್ಲ. ಅಹಿಂಸೆಗಾಗಿ 12 ವರ್ಷಕ್ಕೂ ಹೆಚ್ಚು ಕಾಲ ಧ್ಯಾನಸ್ಥರಾಗುತ್ತಾರೆ. ಆ ಮೂಲಕ ಅಹಿಂಸೆಯ ಮಾರ್ಗವನ್ನು ಬೋಧಿಸಿದರು. ಎಲ್ಲರಲ್ಲೂ ಪರಮಾತ್ಮನನ್ನು ಕಾಣುವ ಸರಳ ತತ್ವವನ್ನು ಬೋಧಿಸಿದರು. ಅಹಿಂಸೆ, ಸತ್ಯ, ಕಳ್ಳತನ ಮಾಡದಿರುವುದು, ಬ್ರಹ್ಮಚರ್ಯ ಹಾಗೂ ಅಪರಿಗ್ರಹ ಎಂಬ ಪಂಚವ್ರತ ಆಚರಣೆಯನ್ನು ಬೋಧಿಸಿದರು ಎಂದು ವಿವರಿಸಿದರು.
ಭಾರತ ಅತ್ಯಂತ ಪುಣ್ಯಭೂಮಿಯಾಗಿದು ಬುದ್ಧ, ಬಸವ ಹಾಗೂ ಇತರ ಭಾರತದ ಗ್ರಂಥಗಳಿಗೆ ಅತ್ಯಂತ ಹೆಚ್ಚಿನ ಮಹತ್ವವಿದೆ. ಇಂತಹ ಪುಣ್ಯಭೂಮಿಯಲ್ಲಿ ಜನಿಸಿದ ವರ್ಧಮಾನ ಮಹಾವೀರರು ವಿಶ್ವಕ್ಕೆ ಬೆಳಕಾಗಿದ್ದಾರೆ. ಅವರ ಸಂದೇಶಗಳು ಜಗತ್ತಿಗೆ ಶಾಂತಿ ಮತ್ತು ಸಹನೆಯ ದಾರಿಯನ್ನು ತೋರುತ್ತದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ಯಾರಿಗೂ ಕೂಡ ಧ್ಯಾನ ಮಾಡುವ ವ್ಯವಧಾನವೂ ಇಲ್ಲದಂತಾಗಿದೆ. ಎಷ್ಟೋ ಜನರು ಮೌನದಲ್ಲಿ ಪರಮಾತ್ಮನನ್ನು ಕಾಣುತ್ತಾರೆ. ವರ್ಧಮಾನ ಮಹಾವೀರ ಜೀವನ ಸಾಧನೆಯನ್ನು ಹಲವಾರು ಕವಿಗಳು, ಸಾಹಿತಿಗಳು ದಾಖಲಿಸಿದ್ದಾರೆ. ಹಾಗಾಗಿ ಆಧ್ಯಾತ್ಮಿಕ ಶಕ್ತಿಯ ಮೂಲಕ ನೈತಿಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕಾಗಿದೆ ಎಂದರು.
ಮಹಾವೀರರ ಆದರ್ಶ, ಚಿಂತನೆಗಳು ಅತ್ಯಂತ ಅಗತ್ಯವಾಗಿದೆ. ಆ ಮೂಲಕ ಮಾನವ ಜನ್ಮವನ್ನು ಪರಿಪೂರ್ಣಗೊಳಿಸಿಕೊಳ್ಳಬೇಕಿದೆ. ಅಹಂಕಾರದ ಪರಮಾವಧಿಯಿಂದ ಯುದ್ಧ, ಕದನಗಳು ನಡೆಯುತ್ತಿದೆ. ಅದಕ್ಕೆಲ್ಲ ವರ್ಧಮಾನ ಮಹಾವೀರರ ಚಿಂತನೆಗಳಲ್ಲಿ ಪರಿಹಾರವಿದೆ. 2 ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಜೈನಧರ್ಮದ ಕುರುಹುಗಳು ಲಭ್ಯವಾಗಿದೆ. ಕನಕಗಿರಿ, ಉಮ್ಮತ್ತೂರು, ಕೆಳಸೂರು, ಬೇಗೂರು, ಚಾಮರಾಜನಗರ ಹಾಗೂ ಇನ್ನಿತರೆ ಕಡೆಗಳಲ್ಲಿ ಜೈನ ಬಸದಿಗಳು ಇದೆ ಎಂದರು.
ಭಗವಾನ್ ಮಹಾವೀರು ಹಾಗೂ 24 ತೀರ್ಥಂಕರರು ಜೈನಧರ್ಮದ ಸಾರವನ್ನು ವಿಸ್ತಾರ ಮಾಡಿದ್ದಾರೆ. ಹಲವಾರು ಶ್ವೇತಂಬರರು ಹಾಗೂ ದಿಗಂಬರರು ಬಂದು ಹೋಗಿದ್ದಾರೆ. ರಾಜ್ಯದ ಹಲವಾರು ಐತಿಹಾಸಿಕ ಸ್ಥಳಗಳಲ್ಲಿ ಮೂಡಿಬಂದಿರುವ ವಾಸ್ತುಶಿಲ್ಪದಲ್ಲಿ ಜೈನ ಚಿಂತನೆಯ ಸಾರ ಅಡಗಿದೆ. ನಾವೆಲ್ಲರೂ ಜಗತ್ತಿನ ಶಾಂತಿಗಾಗಿ ಭಗವಾನ್ ಮಹಾವೀರರ ಚಿಂತನೆಗಳನ್ನು ಅಳವಡಿಸಿಕೊಳ್ಳಬೇಕಿದೆ ಎಂದರು.
ಸಮುದಾಯದ ಮುಖಂಡ ಕೆ.ಪಿ.ಉಲ್ಲಾಸ್ ಮಾತನಾಡಿ, ತನ್ನನ್ನು ತಾನು ಅರಿತವರಿಗೆ ಮೋಕ್ಷ ದೊರೆಯುತ್ತದೆ. ನಮ್ಮ ಸಮಾಜದ 24 ತೀರ್ಥಂಕರರು ಮೋಕ್ಷವನ್ನು ಪಡೆದುಕೊಂಡಿದ್ದಾರೆ. ಜೈನ ಧರ್ಮವನ್ನು ವೃಷಭ ತೀರ್ಥಂಕರರಾಗಿದ್ದಾರೆ. ಜೈನಧರ್ಮಕ್ಕೆ ಅವನತಿ ಎಂಬುದಿಲ್ಲ. ದೇಶವನ್ನು ಸದೃಢವಾಗಿ ಅಹಿಂಸೋ ಪರಮೋಧರ್ಮ ಎಂಬ ಕೊಡುಗೆಯನ್ನು ನೀಡಿದೆ. ನಮ್ಮ ಧರ್ಮದಲ್ಲೇ ಮಹಾತ್ಮ ಗಾಂಧೀಜಿ ಚಿಂತನೆಗಳು ಅಡಕವಾಗಿದೆ ಎಂದು ಹೇಳಿದರು.
ಬೆಳ್ಳಿರಥದಲ್ಲಿ ಭಾವಚಿತ್ರ ಮೆರವಣಿಗೆ
ಜಿಲ್ಲಾಡಳಿತ ವತಿಯಿಂದ ಆಯೋಜಿಸಿದ್ದ ಭಗವಾನ್ ಶ್ರೀಮಹಾವೀರ ಜಯಂತಿ ಅಂಗವಾಗಿ ನಗರದಲ್ಲಿ ಮಹಾವೀರರ ಭಾವಚಿತ್ರವನ್ನು ಬೆಳ್ಳಿ ರಥದಲ್ಲಿ ಮೆರವಣಿಗೆ ನಡೆಯಿತು. ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಪೌರಾಯುಕ್ತ ಪರುಶುರಾಮ ಛಲವಾದಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜು ಮಹಾವೀರರ ಭಾವಚಿತ್ರ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಶ್ರೀಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಸಾಗಿ ವೇದಿಕೆ ಕಾರ್ಯಕ್ರಮ ನಡೆದ ವರನಟ ಡಾ.ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಅಂತ್ಯವಾಯಿತು. ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ರಾಜಮನೆತನದಲ್ಲಿ ಜನಿಸಿ ಆ ಬಳಿಕ ಒಬ್ಬ ಸನ್ಯಾಸಿಯಾಗಿ ಜಗತ್ತಿಗೆ ಶಾಂತಿಯನ್ನು ಸಾರಿದವರು ಭಗವಾನ್ ಮಹಾವೀರ. ಪ್ರಸ್ತುತ ಸಂದರ್ಭದಲ್ಲಿ ಅಗತ್ಯಕ್ಕೆ ಮೀರಿ ನಾವು ಆಸ್ತಿ, ಅಂತಸ್ತು ಗಳಿಸುತ್ತಿದ್ದೇವೆ. ಇದರ ನಡುವೆ ಮಹಾವೀರರ ಆದರ್ಶಗಳನ್ನು ಅಳವಡಿಸಿಕೊಂಡು ಸಾಗಬೇಕು.
— ಮಹಮದ್ ಅಸ್ಗರ್ (ಮುನ್ನಾ), ಚುಡಾ ಅಧ್ಯಕ್ಷ, ಚಾಮರಾಜನಗರ