ಮಲೆಮಹದೇಶ್ವರ ಬೆಟ್ಟದಲ್ಲಿ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು.
- ಮಹಾರಥೋತ್ಸವಕ್ಕೆ ಹರಿದುಬಂದ ಲಕ್ಷಾಂತರ ಭಕ್ತರು
- ವಿಜೃಂಭಣೆಯಿಂದ ನಡೆದ ಆಚರಣೆ
: ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಜಾತ್ರಾ ಮಹೋತ್ಸವದ ಅಂಗವಾಗಿ ಬುಧವಾರ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಮಹಾ ರಥೋತ್ಸವವು ವಿಜೃಂಭಣೆಯಿಂದ ನೆರವೇರಿತು. ಈ ಮೂಲಕ ಮಹಾ ಶಿವರಾತ್ರಿ ಜಾತ್ರೆ ಸಂಪನ್ನಗೊಂಡಿತು.
ರಥೋತ್ಸವದ ಹಿನ್ನಲೆ ದೇಗುಲದಲ್ಲಿ ಬೆಳಗ್ಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅವರ ಸಮ್ಮುಖದಲ್ಲಿ ಮಾದಪ್ಪನಿಗೆ ಏಕವಾರು ರುದ್ರಾಭಿಷೇಕ, ಬಿಲ್ವಾರ್ಚನೆ, ಪಂಚಾಮೃತ ಅಭಿಷೇದೊಂದಿಗೆ ಮಹಾ ಮಂಗಳಾರತಿ ಬೆಳಗಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೇಡಗಂಪಣ ಅರ್ಚಕರು ತೇರಿಗೆ ಬ್ರಹ್ಮದಾರದ ಪೂಜೆ ನೆರವೇರಿಸಿ ಅರಿಶಿನ ದಾರವನ್ನು ಕಟ್ಟಿ ತಳಿಗೆ ಮನೆಯ ಪೂಜೆಯನ್ನು ನೆರವೇರಿಸಿದರು. ಸ್ವಾಮಿಯ ಮೂರ್ತಿಯನ್ನು ಬಿಳಿ ಕುದುರೆ ವಾಹನದಲ್ಲಿ ಕೂರಿಸಿ ಛತ್ರಿ, ಚಾಮರ ಹಾಗೂ ಮಂಗಳವಾದ್ಯದೊಂದಿಗೆ ದೇಗುಲ ಹಾಗೂ ತೇರಿನ ಸುತ್ತಲು 3 ಬಾರಿ ಪ್ರದಕ್ಷಿಣೆ ಹಾಕಲಾಯಿತು. ಶಿವ ಪಾರ್ವತಿಯ ಉತ್ಸವ ಮೂರ್ತಿಯನ್ನು ಸಾಲೂರು ಶ್ರೀಗಳ ಸಮ್ಮುಖದಲ್ಲಿ ಬಿಲ್ವಾರ್ಚನೆ, ಧೂಪ, ದೀಪಾಧಾರತಿ ಹಾಗೂ ಮಹಾ ಮಂಗಳಾರತಿ ನೆರವೇರಿಸಿ ಬೂದು ಕುಂಬಳಕಾಯಿ ಹೊಡೆದು ದೃಷ್ಠಿ ತೆಗೆಯಲಾಯಿತು. ಬೇಡಗಂಪಣ ಸಮುದಾಯದ 101 ಹೆಣ್ಣು ಮಕ್ಕಳಿಂದ ಬೆಲ್ಲದ ಆರತಿ ಬೆಳಗಿದ ನಂತರ 10.35ರಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.
ಸಂಪನ್ನಗೊಂಡ ಮಹಾ ರಥೋತ್ಸವ: ದೇಗುಲದ ಮುಖ್ಯದ್ವಾರದ ಆವರಣದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂಧಿಧ್ವಜಕಂಬ ಹಾಗೂ ಮಂಗಳ ವಾದ್ಯದೊಂದಿಗೆ ತೇರನ್ನು ದೇಗುಲದ ಸುತ್ತಾ ಪ್ರದಕ್ಷಿಣೆ ಹಾಕಲಾಯಿತು. ಬೆಲ್ಲದ ಆರತಿ ಬೆಳಗಿದ ಹೆಣ್ಣು ಮಕ್ಕಳು, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವವು ವಿಜೃಂಭಣೆಯಿಂದ ಜರುಗಿತು. ಭಕ್ತರು ಹಣ್ಣು ದವನ, ಧನ, ಧಾನ್ಯ ಎಸೆದು ಭಕ್ತಿ ಭಾವ ಮೆರೆದರು. ಸಾಲೂರು ಶ್ರೀಗಳ ಸಮ್ಮುಖದಲ್ಲಿ ಗುರು ಬ್ರಹ್ಮೋತ್ಸವ ಹಾಗೂ ಅನ್ನ ಬ್ರಹ್ಮೋತ್ಸವವನ್ನು ನೆರವೇರಿಸಲಾಯಿತು. ಭಕ್ತರಿಗೆ ಪ್ರಸಾದ ವಿನಿಯೋಗಿಸಲಾಯಿತು. ರಥೋತ್ಸವ ಮುಗಿದ ಬಳಿಕ ಬೀಡು ಬಿಟ್ಟಿದ್ದ ಭಕ್ತರು ತಮ್ಮ ಊರುಗಳಿಗೆ ತೆರಳಿದರು. ಡಿವೈಎಸ್ಪಿ ಧರ್ಮೇಂದ್ರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು. ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಎ.ಈ ರಘು ಇದ್ದರು.
ಹಾಸನ ನಗರ ಪೊಲೀಸ್ ಠಾಣೆಯ ಎಎಸೈ ವೆಂಕಟೇಶ್ ಬಾಳೆಹಣ್ಣಿನ ಮೇಲೆ ಮಲೆಮಹದೇಶ್ವರ ಎಎಸೈಗಳಿಗೆ ವಾರದಲ್ಲಿ ಒಂದು ರಜೆ ಸಿಗುವಂತೆ ಮಾಡಪ್ಪ ಎಂದು ಬರೆದು ತೇರಿಗೆ ಎಸೆದು ಮನವಿ ಮಾಡಿಕೊಂಡದ್ದು ವಿಶೇಷವಾಗಿತ್ತು.
ಮಹಾ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ಮಾದಪ್ಪನ ಕೃಪೆಯಿಂದ ನಾಡಿಗೆ ಉತ್ತಮ, ಮಳೆಯಾಗಲಿ, ಭಕ್ತರ ಬದುಕು ಹಸನಾಗಲಿ.ಡಾ. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಪೀಠಾಧಿಪತಿ, ಸಾಲೂರು ಬೃಹನ್ಮಠ ಮ.ಬೆಟ್ಟ.
ಶಿವರಾತ್ರಿ ಜಾತ್ರೆಯಲ್ಲಿ ಸುಮಾರು 10 ಲಕ್ಷ ಭಕ್ತರು ಭೇಟಿ ನೀಡಿದ್ದು, ಅಗತ್ಯ ಸೌಕರ್ಯಗಳನ್ನು ಒದಗಿಸಿಕೊಡಲಾಗಿದೆ. ಜಾತ್ರೆಯು ಸುಸೂತ್ರವಾಗಿ ನೆರವೇರಿದೆ.ಎ.ಈ ರಘು, ಕಾರ್ಯದರ್ಶಿ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಮ.ಬೆಟ್ಟ.