ಹನೂರು: ದೀಪಾವಳಿ ಜಾತ್ರಾ ಮಹೋತ್ಸವದ 3ನೇ ದಿನವಾದ ನರಕ ಚತುರ್ದಶಿ ಹಬ್ಬದ ಪ್ರಯುಕ್ತ ಭಾನುವಾರ ತಾಲೂಕಿನ ಪ್ರಸಿದ್ಧ ಶ್ರೀಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ಭಕ್ತರ ದಂಡೇ ಹರಿದು ಬಂತು. ಆಗಮಿಸಿದ ಭಕ್ತರು ಉತ್ಸವ ಹಾಗೂ ಹರಕೆ ಸೇವೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದರು.
ಮ.ಬೆಟ್ಟಕ್ಕೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಈಗಾಗಲೇ ವಾಹನಗಳು ಹಾಗೂ ಕಾಲ್ನಡಿಗೆ ಮೂಲಕ ಆಗಮಿಸಿದ್ದಾರೆ. ಕಳೆದ 2 ದಿನಗಳಿಂದ ಬೆಳ್ಳಿ ತೇರು, ಚಿನ್ನದ ತೇರಿನ ಉತ್ಸವ, ಹುಲಿ, ಬಸವ, ರುದ್ರಾಕ್ಷಿ ಉತ್ಸವಗಳ ಸೇವೆ ಹಾಗೂ ಹರಕೆ ಸೇವೆಯಲ್ಲಿ ಭಾಗಿಯಾಗಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿ ಶ್ರೀಕ್ಷೇತ್ರದಲ್ಲೇ ಬೀಡು ಬಿಟ್ಟಿದ್ದಾರೆ.
ಹಾಗಾಗಿ ಎತ್ತ ನೋಡಿದರೂ ಭಕ್ತಗಣ ತುಂಬಿ ತುಳುಕುತ್ತಿದೆ. ಇತ್ತ ನರಕ ಚತುರ್ದಶಿ ಹಾಗೂ ಭಾನುವಾರ ರಜೆ ಇದ್ದ ಕಾರಣ ಮಧ್ಯಾಹ್ನದ ಬಳಿಕ ಶ್ರೀಕ್ಷೇತ್ರಕ್ಕೆ ಭಕ್ತರ ದಂಡೇ ಹರಿದು ಬಂದಿತು. ಇದರಿಂದ ಮ.ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಮನೆ ಮಾಡಿತ್ತು.
ಮಾದಪ್ಪನಿಗೆ ವಿಶೇಷ ಪೂಜೆ
ಮಾದಪ್ಪನ ಸನ್ನಿಧಿಯಲ್ಲಿ ಬೆಳಗಿನ ಜಾವ 3.30ರ ವೇಳೆಯಲ್ಲಿ ಬೇಡಗಂಪಣ ಅರ್ಚಕರು ಸ್ವಾಮಿಗೆ ವಿವಿಧ ಅಭಿಷೇಕ ಹಾಗೂ ಬಿಲ್ವಾರ್ಚನೆಯನ್ನು ನೆರವೇರಿಸಿದರು. ಬಳಿಕ ಲಿಂಗವನ್ನು ವಿವಿಧ ಪುಷ್ಪಗಳಿಂದ ಸಿಂಗರಿಸಿ ವಿವಿಧ ದೀಪ, ಧೂಪಧಾರತಿ ಸೇವೆಯ ಜತೆಗೆ ಮಹಾ ಮಂಗಳಾರತಿ ಬೆಳಗಿಸಿದರು. ಈ ಮೂಲಕ ನರಕ ಚತುರ್ದಶಿಯ ವಿಶೇಷ ಪೂಜೆ ನೆರವೇರಿಸಲಾಯಿತು.
ಬಳಿಕ ಭಕ್ತರ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ಆಗಮಿಸಿದ ಭಕ್ತರು ಸರದಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿದ ಭಕ್ತರು ಮೂಲ ಗೋಪುರ ಹಾಗೂ ರಾಜಗೋಪುರದ ಮುಂಭಾಗ ಗಂಧದಕಡ್ಡಿ ಹಾಗೂ ಕರ್ಪೂರವನ್ನು ಹಚ್ಚಿ ನಮಿಸಿದರು. ಹರಕೆ ಹೊತ್ತವರು ಇಡುಗಾಯಿ ಹೊಡೆದು ನಮಿಸಿದರು.
ವ್ಯಾಪಾರ ಜೋರು: ಅಂಗಡಿ ಮುಂಗಟ್ಟುಗಳಲ್ಲಿ ಗೃಹೋಪಯೋಗಿ ವಸ್ತುಗಳು, ಅಲಂಕಾರಿಕ ವಸ್ತುಗಳು, ಪೂಜೆಗೆ ಅಗತ್ಯವಾದ ವಸ್ತುಗಳು, ಉಡುಪು, ತಿಂಡಿ ತಿನಿಸು, ಮಕ್ಕಳ ಆಟಿಕೆ ಸಾಮಾನು ಹಾಗೂ ಇನ್ನಿತರ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಇದರಿಂದ ಮ.ಬೆಟ್ಟದಲ್ಲಿ ವ್ಯಾಪಾರ ಜೋರಾಗಿತ್ತು.
ಇಂದು ಹಾಲರವಿ ಉತ್ಸವ
ಉಪವಾಸವಿರುವ ಬೇಡಗಂಪಣ ಅರ್ಚಕರು ಸೋಮವಾರ ಬೆಳಗಿನ ಜಾವ 4 ಗಂಟೆ ವೇಳೆಗೆ ಬೇಡಗಂಪಣ ಕುಲದ 101 ಹೆಣ್ಣು ಮಕ್ಕಳು ಹಾಗೂ ಭಕ್ತರ ಸಮ್ಮುಖದಲ್ಲಿ ಮ.ಬೆಟ್ಟದಿಂದ 10 ಕಿ.ಮೀ.ದೂರವಿರುವ ತಪಸಾರೆ ಅರಣ್ಯ ಪ್ರದೇಶದಲ್ಲಿನ ಹಾಲಹಳ್ಳಕ್ಕೆ ಸತ್ತಿಗೆ, ಸೂರಿಪಾನಿ ಹಾಗೂ ವಾದ್ಯಮೇಳದೊಂದಿಗೆ ತೆರಳುವರು. ಇಲ್ಲಿ ಪುಣ್ಯಸ್ನಾನ ನೆರವೇರಿಸಿ ನೀರು ತುಂಬಿದ ಕಳಸಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು. ಕತ್ತಿ ಪವಾಡ ಸ್ಥಳಕ್ಕೆ ಕಳಸವನ್ನು ಹೊತ್ತು ಕಾಲ್ನಡಿಗೆಯಲ್ಲಿ ಆಗಮಿಸಿದ 101 ಬಾಲೆಯರಿಗೆ ಕುಟುಂಬಸ್ಥರು ಪ್ರಾಧಿಕಾರದಿಂದ ನೀಡುವ ಸೀರೆಯನ್ನು ಧರಿಸಿ ಸಿಂಗರಿಸುತ್ತಾರೆ. ಬಳಿಕ 9ರ ಹೊತ್ತಿಗೆ ಸಾಲೂರು ಬೃಹನ್ಮಠದ ಪೀಠಾಧಿಪತಿ ಡಾ.ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಸಮ್ಮುಖದಲ್ಲಿ ಬೇಡಗಂಪಣ ಊಜುಮಲೆ ಪಾಲಿನ ಅರ್ಚಕರಿಂದ ಕತ್ತಿಗಳಿಗೆ ಹಾಗೂ ಹೆಣ್ಣು ಮಕ್ಕಳಿಗೆ ಪೂಜೆ ಸಲ್ಲಿಸಲಾಗುತ್ತದೆ. ಬಳಿಕ 101 ಕಳಸವನ್ನು ಹೊತ್ತ ಹೆಣ್ಣು ಮಕ್ಕಳನ್ನು ತಂಬಡಗೇರಿ ಬೀದಿ ಮೂಲಕ ಮೆರವಣಿಗೆಯಲ್ಲಿ ದೇಗುಲಕ್ಕೆ ಕರೆ ತಂದು ಮಾದಪ್ಪನಿಗೆ ಮಜ್ಜನ ಸೇವೆ ನೆರವೇರಿಸುವ ಮೂಲಕ ಹಾಲರವಿ ಉತ್ಸವವನ್ನು ನೆರವೇರಿಸಲಾಗುತ್ತದೆ. ಈ ವೇಳೆ ಸಾವಿರಾರು ಭಕ್ತರು ಭಾಗಿಯಾಗಲಿದ್ದಾರೆ.