ಹುಚ್ಚು ನಾಯಿ ಕಡಿತದಿಂದ ಗಾಯಗೊಂಡಿರುವ ಜಿತೇಂದ್ರ.
ಯಳಂದೂರು: ಚಾಮರಾಜನಗರ ತಾಲೂಕಿನ ಗೂಳೀಪುರ ಗ್ರಾಮದಲ್ಲಿ ಸೋಮವಾರ ಹುಚ್ಚು ನಾಯಿ ಕಡಿದು ವ್ಯಕ್ತಿಯೊಬ್ಬರು ಗಾಯಗೊಂಡಿದ್ದಾರೆ.
ಗ್ರಾಮದ ನಿವಾಸಿ ಜಿತೇಂದ್ರ ಗಾಯಗೊಂಡವ. ಗ್ರಾಮದಲ್ಲಿ ಹುಚ್ಚು ನಾಯಿ ಕಾಟ ಹೆಚ್ಚಾಗಿದ್ದು, 15 ದಿನಗಳ ಹಿಂದೆ ಬಾಬು, ನಾಗನಾಯಕ, ನಂಜುಂಡಯ್ಯ ಸೇರಿದಂತೆ 15 ಕ್ಕೂ ಹೆಚ್ಚು ಜನರನ್ನು ಕಡಿದು ಗಾಯಗೊಳಿಸಿತ್ತು. ಅಲ್ಲದೆ 5 ಕರುಗಳಿಗೂ ಕೂಡ ಕಚ್ಚಿ ಗಾಯಗೊಳಿಸಿತ್ತು. ಈಗ ಮತ್ತೆ ಈ ಘಟನೆ ಮರುಕಳಿಸಿದ್ದು ಗ್ರಾಮಸ್ಥರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ವೃದ್ಧರು ಹಾಗೂ ಮಕ್ಕಳು ಗ್ರಾಮದಲ್ಲಿ ಓಡಾಡುವುದು ಕಷ್ಟವಾಗಿದೆ. ಗ್ರಾಮ ಪಂಚಾಯಿತಿಗೆ ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದರೂ ಸೆರೆಹಿಡಿಯುವಲ್ಲಿ ನಿರ್ಲಕ್ಷ್ಯ ವಹಿಸಿದೆ. ಈಗ ಬಿರು ಬೇಸಿಗೆಯಾಗಿದ್ದು ನಾಯಿ ಕಡಿತದಿಂದ ರೋಗ ಭೀತಿ ಹೆಚ್ಚಾಗುವ ಆತಂಕವಿದೆ. ಕೂಡಲೇ ಸಂಬಂಧಪಟ್ಟವರು ಈ ಬಗ್ಗೆ ಕ್ರಮ ವಹಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.