ಹನೂರಿನಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಎಂ.ಆರ್ ಮಂಜುನಾಥ್ ಮಾತನಾಡಿದರು. ಕೆ.ಎನ್ ಚೈತ್ರಾ, ಮಹೇಶ್, ವಿಜಯಕುಮಾರ್ ಇತರರು ಇದ್ದರು.
- ಶಾಸಕ ಎಂ.ಆರ್.ಮಂಜುನಾಥ್ ಅಭಿಮತ
- ಜಯಂತಿ ಕಾರ್ಯಕ್ರಮ
ಹನೂರು: ಮಡಿವಾಳ ಮಾಚಿದೇವರು ಬಸವಣ್ಣನವರ ತತ್ವ, ಸಿದ್ಧಾಂತಗಳನ್ನು ಪಾಲಿಸುವುದರ ಮೂಲಕ ಸಮಾಜಕ್ಕೆ ಶುದ್ಧ ಕಾಯಕದ ಮಹತ್ವವನ್ನು ತಿಳಿಸಿಕೊಟ್ಟ ಮಹಾನ್ ಶಿವಶರಣ ಎಂದು ಶಾಸಕ ಎಂ.ಆರ್. ಮಂಜುನಾಥ್ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿಗೃಹದ ಸಭಾಂಗಣದಲ್ಲಿ ಭಾನುವಾರ ತಾಲೂಕು ಆಡಳಿತದ ವತಿಯಿಂದ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.
12ನೇ ಶತಮಾನದಲ್ಲಿ ದುರ್ಬಲರ ಶೋಷಣೆ, ಜಾತೀಯತೆ, ಅಸ್ಪಶ್ಯತೆ, ಮೂಢನಂಬಿಕೆಗಳ ಸೃಷ್ಟಿ, ಶಿಕ್ಷಣದಲ್ಲಿ ಅವಕಾಶ ವಂಚನೆ ಸೇರಿದಂತೆ ಇನ್ನು ಅನೇಕ ಅಸಮಾನತೆಯಿಂದ ಜನರು ತುಳಿತಕ್ಕೆ ಒಳಗಾಗಿದ್ದರು. ಇದರಿಂದ ಬಡವರು, ಮಹಿಳೆಯರು, ದೀನ ದಲಿತರು ಹತಾಶೆಯಿಂದ ಅಸಹನೀಯ ಬದುಕನ್ನು ನಡೆಸುತ್ತಿದ್ದರು. ಈ ಕಾಲಘಟ್ಟದಲ್ಲಿ ಸಮಾಜದ ಅಸಮಾನತೆ ತೊಲಗಿಸುವ ಸಲುವಾಗಿ ಬಸವ ಮಾಚಿದೇವಾದಿ ಶರಣರು ಸಾಮಾಜಿಕ ಕ್ರಾಂತಿಯನ್ನೇ ಕೈಗೊಂಡರು. ಇವರಲ್ಲಿ ಮಡಿವಾಳ ಮಾಚಿದೇವರು ಅಗ್ರಗಣ್ಯ ಸ್ಥಾನದಲ್ಲಿ ಒಬ್ಬರೆನಿಸಿದ್ದಾರೆ. ಇವರು ಕಾಯಕವನ್ನು ಭಕ್ತಿಯ ಜೀವನದ ಉಸಿರು ಎಂದು ನಂಬಿಕೊಂಡು ಕಾಯಕನಿಷ್ಠೆಗೆ ಹೆಚ್ಚಿನ ಒತ್ತನ್ನು ನೀಡಿದ್ದರು. ಜತೆಗೆ ಶೋಷಿತ ವರ್ಗದ ಏಳಿಗೆಗೆ ಶ್ರಮಿಸಿದ ಮಹಾನ್ ಶರಣ. ಇವರು ರಚಿಸಿರುವಂತಹ ವಚನಗಳು ಉತ್ತಮ ಸಮಾಜಕ್ಕೆ ದಾರಿದೀಪವಾಗಿದೆ. ಈ ದಿಸೆಯಲ್ಲಿ ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಬೇಕು. ಸಮುದಾಯದ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುವ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಬೇಕು. ಈ ಮೂಲಕ ಸಂಘಟಿತರಾಗಬೇಕು. ಇದರಿಂದ ಸಮುದಾಯ ಅಭಿವೃದ್ಧಿ ಹೊಂದಲು ಸಾಧ್ಯ. ಆದ್ದರಿಂದ ಈ ಬಗ್ಗೆ ಪ್ರತಿಯೊಬ್ಬರೂ ಮನದಟ್ಟು ಮಾಡಿಕೊಳ್ಳಬೇಕಿದೆ ಎಂದು ತಿಳಿಸಿದರು.
ತಹಸೀಲ್ದಾರ್ ಕೆ.ಎನ್ ಚೈತ್ರಾ, ಶಿರಸ್ತೇದಾರ್ ಮಾದೇಶ್, ಅಗ್ನಿಶಾಮಕ ಠಾಣಾಧಿಕಾರಿ ಮಹೇಶ್, ಮಡಿವಾಳ ಸಂಘದ ಜಿಲ್ಲಾ ಉಪಾಧ್ಯಕ್ಷ ವಿಜಯಕುಮಾರ್, ಮುಖಂಡರಾದ ನಿಂಗರಾಜು, ನಾಗರಾಜು, ರವಿ ಇನ್ನಿತರರು ಇದ್ದರು.