ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಯ ಆವರಣದಲ್ಲಿ ಭಾನುವಾರ ನೆರೆದಿದ್ದ ಭಕ್ತರು.
ಹನೂರು : ತಾಲೂಕಿನ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ಮಾದಪ್ಪನ ಸನ್ನಿಧಿಗೆ ವಾರಾಂತ್ಯದ ರಜೆಯ ಹಿನ್ನೆಲೆಯಲ್ಲಿ ಭಾನುವಾರ ಹೆಚ್ಚಿನ ಭಕ್ತರು ಭೇಟಿ ನೀಡಿ ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು.
ವಾರಾಂತ್ಯದಲ್ಲಿ ಕ್ರಿಸ್‌ಮಸ್ ಹಾಗೂ ನಾಲ್ಕನೇ ಶನಿವಾರದ ರಜೆ ಇದ್ದ ಕಾರಣ ಮ.ಬೆಟ್ಟಕ್ಕೆ ಹೆಚ್ಚಿನ ಭಕ್ತರು ಭೇಟಿ ನೀಡಿದ್ದರು. ಭಾನುವಾರದಂದು ಸರ್ಕಾರಿ ಹಾಗೂ ಖಾಸಗಿ ಸಂಸ್ಥೆಗಳ ಅಧಿಕಾರಿಗಳು, ನೌಕರರು ಕುಟುಂಬಸ್ಥರೊಂದಿಗೆ ಕಾರು ಹಾಗೂ ಟೆಂಪೋ ಟ್ರಾವೆಲರ್ ಮೂಲಕ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದರು. ಶಕ್ತಿ ಯೋಜನೆಯ ಪರಿಣಾಮ ಬಸ್ ಮೂಲಕ ಹೆಚ್ಚಿನ ಮಹಿಳೆಯರು ಭೇಟಿ ನೀಡಿದ್ದರು. ಇದರಿಂದ ಭಾನುವಾರ ಮ. ಬೆಟ್ಟದಲ್ಲಿ ಸಾಮಾನ್ಯ ದಿನಗಳಿಗಿಂತಲೂ ಭಕ್ತರ ಸಂಖ್ಯೆ ಹೆಚ್ಚಿತ್ತು.
ಸಾವಿರಾರು ಭಕ್ತರು ಮ.ಬೆಟ್ಟಕ್ಕೆ ಆಗಮಿಸಿದ್ದ ಕಾರಣ ಭಾನುವಾರ ಬಹುತೇಕ ಭಕ್ತರು ಸರತಿ ಸಾಲಿನಲ್ಲಿ ತೆರಳಿ ದೇವರ ದರ್ಶನ ಪಡೆದರು. ಕೆಲ ಭಕ್ತರು 500 ರೂ ಟಿಕೆಟ್ ಪಡೆದು ರಾಜಗೋಪುರದ ವಿಶೇಷ ಕೌಂಟರ್ ಮೂಲಕ ತೆರಳಿ ದೇವರ ದರ್ಶನ ಪಡೆದರು. ಇನ್ನು ಬೆಳಗ್ಗೆ ಜರುಗಿದ ಬೆಳ್ಳಿ ತೇರಿನ ಉತ್ಸವದಲ್ಲಿ ಹೆಚ್ಚಿನ ಭಕ್ತರು ಭಾಗಿಯಾಗಿದ್ದರಲ್ಲದೇ ಹುಲಿ, ರುದ್ರಾಕ್ಷಿ, ಹಾಗೂ ಬಸವ ವಾಹನವನ್ನು ದೇಗುಲದ ಸುತ್ತ ಪ್ರದಕ್ಷಿಣೆ ಹಾಕಿಸುವುದರ ಮೂಲಕ ಉತ್ಸವದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ಹರಕೆ ಹೊತ್ತ ಭಕ್ತರು ದಂಡಿನ ಕೋಲನ್ನು ಹೊತ್ತು ಸಾಗಿದರು. ಉಘೇ ಮಾದಪ್ಪ ಉಘೇ, ಜೈ ಮಹತ್ ಮಲೆಯಾ ಜಯ ಘೋಷವನ್ನು ಕೂಗಿ ಭಕ್ತಿ ಭಾವವನ್ನು ಮೆರೆದರು. ಇನ್ನು ಆಗಮಿಸಿದ ಕೆಲ ಭಕ್ತರು ಮುಡಿಸೇವೆ, ಉರುಳುಸೇವೆ, ಪಂಜಿನಸೇವೆ ಹಾಗೂ ರಜಾ ಹೊಡೆಯುವ ಸೇವೆಯನ್ನು ನೆರವೇರಿಸುವುದರ ಮೂಲಕ ಮಾದಪ್ಪನ ಕ್ಷೇತ್ರದಲ್ಲಿ ಹರಕೆಯನ್ನು ತೀರಿಸಿದರು. ಬಹುತೇಕ ಭಕ್ತರು ದೇಗುಲದ ಸುತ್ತ ಪ್ರದಕ್ಷಿಣೆಯೊಂದಿಗೆ ಧೂಪ ಹಾಕಿ, ಕರ್ಪೂರ ಹಚ್ಚಿ ಮಾದಪ್ಪನನ್ನು ನೆನೆದು, ಕೈ ಮುಗಿದು ಪ್ರಾರ್ಥಿಸಿದರು.
ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು ಮಾರ್ಗದರ್ಶನದಲ್ಲಿ ಭಕ್ತರಿಗೆ ದಾಸೋಹ, ಕುಡಿಯುವ ನೀರು ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಿದ್ದರೂ ದೇವರ ದರ್ಶನಕ್ಕೆ ಸಮಸ್ಯೆಯಾಗದಂತೆ ಕ್ರಮವಹಿಸಲಾಗಿತ್ತು.
ಹೊಗೇನಕಲ್ ಫಾಲ್ಸ್‌ಗೆ ಪ್ರವಾಸಿಗರ ಲಗ್ಗೆ:
ಭಾನುವಾರ ರಜೆ ಹಿನ್ನೆಲೆಯಲ್ಲಿ ತಮಿಳುನಾಡು ಸೇರಿದಂತೆ ಮ.ಬೆಟ್ಟಕ್ಕೆ ಆಗಮಿಸಿದ ಬೆಂಗಳೂರು, ಮೈಸೂರು, ಮಂಡ್ಯ, ಚಾ.ನಗರ ಹಾಗೂ ಇನ್ನಿತರೆ ಜಿಲ್ಲೆಯ ಭಕ್ತರು ಅದರಲ್ಲೂ ಯುವಜನರು
ಹೆಚ್ಚಿನ ಸಂಖ್ಯೆಯಲ್ಲಿ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಹೊಗೇನಕಲ್ ಫಾಲ್ಸ್‌ಗೆ ಭೇಟಿ ನೀಡಿದ್ದರು. ತೆಪ್ಪದಲ್ಲಿ ತೆರಳಿ ಭೋರ್ಗರೆದು ಧುಮ್ಮಿಕ್ಕುತ್ತಿರುವ ಜಲಾಪಾತದ ರುದ್ರ ರಮಣಿಯ ದೃಶ್ಯ ಹಾಗೂ ಪ್ರಕೃತಿ ಸೌಂದರ್ಯವನ್ನು ಸವಿದು ಖುಷಿ ಪಟ್ಟರು. ಹಾಗಾಗಿ ಫಾಲ್ಸ್‌ನಲ್ಲಿ ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿತ್ತು. ಇದರಿಂದ ಅಂಬಿಗರು ಹಾಗೂ ವ್ಯಾಪಾರಸ್ಥರ ಆದಾಯದಲ್ಲಿ ಕೊಂಚ ಏರಿಕೆ ಕಂಡಿದ್ದು, ಮೊಗದಲ್ಲಿ ಸಂತಸ ಮನೆ ಮಾಡಿತ್ತು.