ಮಲೆಮಹದೇಶ್ವರ ಬೆಟ್ಟದಲ್ಲಿ ಭಾನುವಾರ ತುಂತುರು ಮಳೆಯ ನಡುವೆಯೂ ಉತ್ಸವಾಧಿ ಸೇವೆಗಳಲ್ಲಿ ಭಾಗಿಯಾಗಿದ್ದ ಭಕ್ತರು.
- ಮಹದೇಶ್ವರ ಬೆಟ್ಟದಲ್ಲಿ ಮಳೆಯನ್ನೂ ಲೆಕ್ಕಿಸದೆ ಸ್ವಾಮಿ ಸೇವೆ
ಹನೂರು: ಮಲೆಮಹದೇಶ್ವರ ಬೆಟ್ಟ ಸೇರಿದಂತೆ ತಾಲೂಕಿನಾದ್ಯಂತ ಭಾನುವಾರ ಇಡೀ ದಿನವೂರ್ತಿ ಮೋಡ ಕವಿದ ವಾತಾವರಣದ ಜತೆಗೆ ತುಂತುರು ಮಳೆ ಸುರಿಯಿತು.
ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಪರಿಣಾಮ ತಾಲೂಕಿನಲ್ಲಿ ಶನಿವಾರದಿಂದಲೂ ಮೋಡ ಕವಿದ ವಾತಾವರಣವಿದ್ದು, ಆಗ್ಗಾಗ್ಗೆ ತುಂತುರು ಮಳೆ ಸುರಿಯುತ್ತಲೇ ಇದ್ದು ಭಾನುವಾರವೂ ಮುಂದುವರಿಯಿತು. ಇದರಿಂದ ತಾಲೂಕಿನಾದ್ಯಂತ ಚಳಿಯ ವಾತಾವರಣ ಮನೆ ಮಾಡಿತ್ತು. ಜನರು ಸ್ಪೆಟರ್, ಜರ್ಕಿನ್, ಟೋಪಿ ಹಾಗೂ ಇನ್ನಿತರ ಬೆಚ್ಚನೆಯ ಉಡುಪುಗಳನ್ನು ಧರಿಸುವಂತಾಯಿತು. ಬೆಳಗ್ಗೆ ಹಾಲು ಹಾಗೂ ಪತ್ರಿಕೆ ವಿತರಿಸುವವರು ತುಂತುರು ಮಳೆ ಹಾಗೂ ಚಳಿಯ ನಡುವೆಯೂ ಮನೆಮನೆಗೆ ತೆರಳಿ ಕೊಂಚ ಸಮಸ್ಯೆಯನ್ನು ಎದುರಿಸಿದರು. ಸದ್ಯ ಭಾನುವಾದ್ದರಿಂದ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಮನೆಯಲ್ಲಿಯೇ ಉಳಿಯುವಂತಾಯಿತು.
ಹಾಗೆಯೇ ಪೂರಕವಲ್ಲದ ವಾತಾವರಣದಿಂದಾಗಿ ಆರೋಗ್ಯದ ಹಿತದೃಷ್ಟಿಯಿಂದ ಸರ್ಕಾರಿ ಅಧಿಕಾರಿಗಳು, ನೌಕರರು, ಶಿಕ್ಷಕರು ಹಾಗೂ ಜನರು ಸಹ ಹೆಚ್ಚು ಮನೆಯಲ್ಲಿಯೇ ಕಾಲ ಕಳೆಯುವಂತಾಯಿತು. ಇದರಿಂದ ಜನರ ಸಂಚಾರ ವಿರಳವಾಗಿತ್ತು. ಕೆಲಸ ಕಾರ್ಯಗಳ ನಿಮಿತ್ತ ತೆರಳುತ್ತಿದ್ದ ಬೈಕ್ ಸವಾರರಲ್ಲಿ ಮೈ ನಡುಕ ಉಂಟು ಮಾಡಿತು. ಮಾಂಸದ ಅಂಗಡಿ, ಟೀ ಸ್ಟಾಲ್ ಹೊರತು ಪಡಿಸಿ ಇನ್ನುಳಿದ ಮಾರಾಟ ಮಳಿಗೆಗಳಲ್ಲಿ ವ್ಯಾಪಾರ ವಹಿವಾಟು ಕ್ಷೀಣವಾಗಿತ್ತು. ರಸ್ತೆ ಹಾಗೂ ಬೀದಿ ಬದಿ ವ್ಯಾಪಾರದಲ್ಲೂ ಪರಿಣಾಮ ಬೀರಿತು. ಒಟ್ಟಾರೆ ಬಂಗಾಳಕೊಲ್ಲಿಯ ವಾಯುಭಾರ ಕುಸಿತದ ಎಫೆಕ್ಟ್ ಹನೂರಿಗೆ ತಟ್ಟಿದ್ದು, ಎಲ್ಲರ ಮೊಗದಲ್ಲೂ ಮಂಕು ಕವಿಸುವಂತೆ ಮಾಡಿತು.
ಸೇವೆಯಲ್ಲಿ ಭಾಗಿಯಾದ ಭಕ್ತರು: ಭಾನುವಾದ್ದರಿಂದ ಸಾಮಾನ್ಯ ದಿನಗಳಿಗಿಂತಲೂ ಮ.ಬೆಟ್ಟಕ್ಕೆ ಆಗಮಿಸಿದ್ದ ಭಕ್ತರ ಸಂಖ್ಯೆ ಹೆಚ್ಚಾಗಿತ್ತು. ಆದರೆ ಇಲ್ಲಿ ಬೆಳಗ್ಗೆಯಿಂದ 10 ಗಂಟೆಯವರೆಗೂ ತುಂತುರು ಮಳೆ ಸುರಿಯಿತು. ಆಗಮಿಸಿದ್ದ ಭಕ್ತರು ದೇವರ ದರ್ಶನ ಪಡೆದು ಪೂಜೆ ಸಲ್ಲಿಸಿದರು. ಹರಕೆ ಹೊತ್ತಿದ್ದ ಭಕ್ತರು ತುಂತುರು ಮಳೆಯನ್ನು ಲೆಕ್ಕಿಸದೇ ದೇಗುಲದ ಆವರಣದಲ್ಲಿ ಜರುಗಿದ ಹುಲಿ, ಬಸವ ಹಾಗೂ ರುದ್ರಾಕ್ಷಿ ಉತ್ಸವಾಧಿ ಸೇವೆಯಲ್ಲಿ ದಂಡಿನ ಕೋಲನ್ನು ಹೊತ್ತು ಭಾಗಿಯಾಗುವುದರ ಮೂಲಕ ಭಕ್ತಿಭಾವವನ್ನು ಮೆರೆದರು.