ಕೊಳ್ಳೇಗಾಲದ ದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ಕೊಂಗಳಪ್ಪ, ನಿರಂಜನ್, ಪ್ರತೀಕ್ಷಾ, ಅನನ್ಯಾ, ಎಸ್.ನಾಗರಾಜು ಇತರರಿದ್ದರು.  
ಚಾಮರಾಜನಗರ

ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಲಿ

ಪ್ರಮುಖ ಮುಖ್ಯಾಂಶಗಳು

  • ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಸ್.ಕೊಂಗಳಪ್ಪ ಹೇಳಿಕೆ
ಕೊಳ್ಳೇಗಾಲ: ಪುರಾತನವಾದ ಗಮಕ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ಕೆ ಪ್ರೋತ್ಸಾಹ ನೀಡುವುದು ಪ್ರತಿಯೊಬ್ಬರ ಕರ್ತವ್ಯವಾಗಬೇಕು ಎಂದು ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲ ಡಾ.ಎಚ್.ಎಸ್.ಕೊಂಗಳಪ್ಪ ತಿಳಿಸಿದರು.
ಬೆಂಗಳೂರಿನ ಕರ್ನಾಟಕ ಗಮಕ ಕಲಾ ಪರಿಷತ್‌ನ ಜಿಲ್ಲಾ ಘಟಕ, ಜೆಎಸ್ ಎಸ್ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆೆ, ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕ ವತಿಯಿಂದ ಪಟ್ಟಣದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಗಮಕ ವಾಚನ, ವ್ಯಾಖ್ಯಾನದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗಮಕ ಕಲೆಯ ಬಗ್ಗೆ ಆಸಕ್ತಿಯನ್ನು ಯುವ ಸಮುದಾಯ ಬೆಳೆಸಿಕೊಳ್ಳಬೇಕು. ಕರ್ನಾಟಕ ಗಮಕ ಕಲಾ ಪರಿಷತ್ ಹಮ್ಮಿಕೊಂಡಿರುವ ವಾಚನ ಮತ್ತು ವ್ಯಾಖ್ಯಾನ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹಾರೈಸಿದರು.
ಕರ್ನಾಟಕ ಗಮಕ ಕಲಾ ಪರಿಷತ್ ಜಿಲ್ಲಾಧ್ಯಕ್ಷ ಸುರೇಶ್ ಎನ್.ಋಗ್ವೇದಿ ಮಾತನಾಡಿ, ಪ್ರಾಚೀನ ಕಲೆಯಾದ ಗಮಕ ಕಲೆ 64 ವಿದ್ಯೆಗಳಲ್ಲಿ ವಿಶೇಷವಾದದ್ದು. ಇದು ರಾಮಾಯಣ ಕಾಲದಿಂದ ಪ್ರಚಲಿತದಲ್ಲಿರುವ ಪ್ರಮುಖ ಕಲೆಯಾಗಿದೆ ಎಂದರು.
ವೇದಗಳಲ್ಲಿಯೂ ಗಮಕದ ದಾಖಲೆಗಳಿವೆ. ಕುಮಾರವ್ಯಾಸನ ಭಾರತ, ವಾಲ್ಮೀಕಿಯ ರಾಮಾಯಣ, ತೊರೆವೆ ರಾಮಾಯಣ ಜನಪ್ರಿಯವಾಗಿದೆ. ಇವು ಗಮಕದ ಮೂಲಕ ನಾಡಿನ ಎಲ್ಲೆಡೆ ಹೆಚ್ಚು ಪ್ರಸಿದ್ಧಿಯಾಗಿದೆ. ಆದರೆ ಯುವ ಜನಾಂಗ ಈ ಕಲೆಯನ್ನು ಬೆಳೆಸಿಕೊಳ್ಳುವಲ್ಲಿ ನಿರಾಸಕ್ತಿ ಹೊಂದಿದ್ದು, ಪಾಶ್ಚಿಮಾತ್ಯ ಸಂಸ್ಕೃತಿಗೆ ಮರುಳಾಗದೆ ಭಾರತೀಯ ನೃತ್ಯ, ಸಂಗೀತ, ಜನಪದ, ಸಾಹಿತ್ಯ ಹಾಗೂ ಗಮಕ ಕಲೆ ಬಗ್ಗೆ ಹೆಚ್ಚು ಸ್ಫೂರ್ತಿಯನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕರ್ನಾಟಕ ಕಲಾ ಪರಿಷತ್‌ನ ಸಂಘ ಸಂಸ್ಥೆಗಳ ಪ್ರತಿನಿಧಿ ನಿರಂಜನ್ ಮೈಸೂರು, ಮೈಸೂರಿನ ಯುವ ಗಮಕಿಗಳಾದ ಗಮಕಿ ಪ್ರತೀಕ್ಷಾ ಮತ್ತು ಅನನ್ಯ, ಕರ್ನಾಟಕ ಗಮಕಲಾ ಪರಿಷತ್‌ನ ತಾಲೂಕು ಅಧ್ಯಕ್ಷ ಕೊಂಗರಹಳ್ಳಿ ಎಸ್.ನಾಗರಾಜ್‌ಇದ್ದರು.