ಯಳಂದೂರು ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಲಾಗಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸಕ ದೀಪಕ್ ವಿಲ್ಸನ್ ಮಾತನಾಡಿದರು.  ಯಳಂದೂರು
ಚಾಮರಾಜನಗರ

ಯುವಜನರು ಸ್ಮಾರಕ ರಕ್ಷಣೆಗೆ ಕಾಳಜಿ ವಹಿಸಲಿ

ಉಪನ್ಯಾಸಕ ದೀಪಕ್ ವಿಲ್ಸನ್ ಸಲಹೆ

ಯಳಂದೂರು: ಸ್ಮಾರಕಗಳು ನಮ್ಮ ಹೆಮ್ಮೆಯ ಇತಿಹಾಸ ಸಾರುತ್ತವೆ. ಇದನ್ನು ಮುಂದಿನ ಪೀಳಿಗೆಗೆ ತಿಳಿಸುವ ಸಲುವಾಗಿ ಇದರ ರಕ್ಷಣೆಗೆ ಯುಜನರು ಆದ್ಯತೆ ನೀಡಬೇಕಿದೆ ಎಂದು ಮಹದೇಶ್ವರ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಉಪನ್ಯಾಸಕ ದೀಪಕ್ ವಿಲ್ಸನ್ ಸಲಹೆ ನೀಡಿದರು.

ಮಂಗಳವಾರ ಪಟ್ಟಣದ ವೈ.ಎಂ. ಮಲ್ಲಿಕಾರ್ಜುನಸ್ವಾಮಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದಿವಾನ್ ಪೂರ್ಣಯ್ಯ ಸರ್ಕಾರಿ ವಸ್ತು ಸಂಗ್ರಹಾಲಯ, ಪುರಾತತ್ವ ಸಂಗ್ರಹಾಲಗಳು ಮತ್ತು ಪರಂಪರೆ ಇಲಾಖೆ ವತಿಯಿಂದ ವಿಶ್ವ ಪರಂಪರೆ ಸಪ್ತಾಹ-2026 ರ ಅಂಗವಾಗಿ ಏರ್ಪಡಿಸಿದ್ದ ಐತಿಹಾಸಕ ಸ್ಮಾರಕಗಳ ಸಂರಕ್ಷಣೆಯಲ್ಲಿ ಯುವಜನತೆ ಪಾತ್ರ ಕುರಿತು ಹಮ್ಮಿಕೊಂಡಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಡೀ ದೇಶದಲ್ಲೇ ನಮ್ಮ ರಾಜ್ಯವನ್ನು ವಾಸ್ತುಶಿಲ್ಪ ಪ್ರಯೋಗಗಳ ತೊಟ್ಟಿಲು ಎಂದು ಗುರುತಿಸಲಾಗಿದೆ. ಕ್ರಿ.ಪೂ.ದಿಂದ ಬ್ರಿಟಿಷ್ ಆಡಳಿತದವರೆಗೂ ನಮ್ಮ ದೇಶದಲ್ಲಿ ಅನೇಕ ಸ್ಮಾರಕಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ಹಿಂದು, ಮುಸ್ಲಿಮರು, ಕ್ರಿಶ್ಚಿಯನ್ನರು ಸೇರಿದಂತೆ ಎಲ್ಲ ಧರ್ಮದವರೂ ಕೂಡ ವಾಸ್ತುಶಿಲ್ಪಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ. ನಮ್ಮ ರಾಜ್ಯದಲ್ಲಿ ವಿಜಯನಗರ ಅರಸರ ಕಾಲದಲ್ಲಿ ದೇಗುಲಗಳ ಸಂರಕ್ಷಣೆಗೆ ಹೆಚ್ಚು ಒತ್ತು ನೀಡಲಾಗಿತ್ತು. 600 ವರ್ಷಗಳ ದೀರ್ಘ ಆಳ್ವಿಕೆಯಲ್ಲಿ ನಮ್ಮ ಇತಿಹಾಸ ಸುವರ್ಣಾಕ್ಷರಗಳಿಂದ ಬರೆದಿಡುವ ಕಾಲವಾಗಿತ್ತು ಎಂದು ವಿವರಿಸಿದರು.

ಚಾಮರಾಜನಗರ ಜಿಲ್ಲೆಯೂ ವಾಸ್ತುಶಿಲ್ಪಕ್ಕೆ ದೊಡ್ಡ ಕೊಡುಗೆ ನೀಡಿದೆ. ಯಳಂದೂರಿನ ಗೌರೇಶ್ವರ ದೇಗುಲ, ಬಳೇಮಂಟಪ, ತೆರಕಣಾಂಬಿ ದೇಗುಲಗಳು, ಮಧ್ಯರಂಗ, ಸೋಮೇಶ್ವರ ದೇಗುಲ, ನರಸಮಂಗಲ, ಬಿಳಿರಿಗಿರಂಗನಬೆಟ್ಟ, ಗೋಪಾಲಸ್ವಾಮಿ, ಮಲೆಮಹದೇಶ್ವರ ಬೆಟ್ಟ, ಕನಕಗಿರಿಯ ಜಿನ ದೇಗುಲಗಳು ಸೇರಿದಂತೆ ಅನೇಕ ಉದಾಹರಣೆಗಳು ಇಲ್ಲಿವೆ. ಆದರೆ ಇಂತಹ ಅಪರೂಪದ ಸ್ಮಾರಕಗಳಿಗೆ, ನಗರಿಕರಣ, ಮಾಲಿನ್ಯ, ಶಿಲ್ಪಗಳ ಕಳ್ಳ ಸಾಗಣೆ, ಮೌಢ್ಯತೆ, ಇದನ್ನು ವಿರೂಪಗೊಳಿಸುವ ವಿಕೃತ ಮನಸ್ಸುಗಳು ತೊಡಕಾಗಿವೆ. ಈ ಬಗ್ಗೆ ಯುವ ಪೀಳಿಗೆ ಎಚ್ಚೆತ್ತುಕೊಂಡು ಜನಜಾಗೃತಿ ಮೂಡಿಸಬೇಕಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಡಾ. ವಿಜಯ ಮಾತನಾಡಿ, ಪ್ರಾಚೀನ ಸ್ಮಾರಕಗಳ ಸಂರಕ್ಷಣೆಗೆ ನಾವು ಮೌಢ್ಯತೆಯಿಂದ ಹೊರಬರಬೇಕು. ಹೊಸ ದೇಗುಲಗಳನ್ನು ಕಟ್ಟಿಸುವ ಬದಲು ಐತಿಹಾಸಿಕ ಮಹತ್ವವುಳ್ಳ ಹಳೇ ದೇಗುಲಗಳ ಸಂರಕ್ಷಣೆಯಲ್ಲಿ ತೊಡಗಿಕೊಳ್ಳಬೇಕು. ಇದನ್ನು ಹಾಳು ಮಾಡಲು ಬಿಡಬಾರದು, ಶಾಸನಗಳ ಸಂರಕ್ಷಣೆಗೆ ಮುಂದಾಗಬೇಕು ಎಂದರು.

ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಎಂ. ಸುನೀಲ್‌ಕುಮಾರ್ ಮಾತನಾಡಿದರು. ಇಲಾಖೆಯ ಜೆಇ ಗುರುಮಲ್ಲಪ್ಪ, ಗ್ರಂಥಪಾಲಕ ಎಚ್.ಎ.ಅರುಣ, ಇತಿಹಾಸ ವಿಭಾಗದ ಡಾ.ಬಿ.ಆರ್. ಜಯಣ್ಣ, ಸಿದ್ದರಾಜೇಗೌಡ ಇತರರು ಇದ್ದರು.