ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿದರು. ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ), ಡಿಸಿ ಶ್ರೀರೂಪಾ, ಜಿಪಂ ಸಿಇಒ ಮೋನಾರೋತ್, ಎಸ್ಪಿ ಎಂ.ಮುತ್ತುರಾಜ್ ಇತರರು ಇದ್ದರು.
- ಭಗೀರಥ ಜಯಂತಿ ಆಚರಣೆಯಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಒತ್ತಾಯ
- ವಿವಿಧ ಕಡೆಗಳಲ್ಲಿ ಸ್ಮರಣೆ, ಅನ್ನಸಂತರ್ಪಣೆ, ಪುಷ್ಪಾರ್ಚನೆ
ಚಾಮರಾಜನಗರ: ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಡಾ.ಕೆ.ಎಂ.ಮೇತ್ರಿ ನೇತೃತ್ವದಲ್ಲಿ ನಡೆದಿರುವ ಉಪ್ಪಾರ ಸಮುದಾಯದ ಕುಲಶಾಸ ಅಧ್ಯಯನವನ್ನು ರಾಜ್ಯ ಸರ್ಕಾರ ಜಾರಿಗೊಳಿಸಬೇಕೆಂಬ ಒತ್ತಾಯ ಕೇಳಿಬಂತು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಭಗೀರಥ ಜಯಂತಿ ಕಾರ್ಯಕ್ರಮದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಮತ್ತು ಸಮುದಾಯದ ಮುಖಂಡರು ಕುಲಶಾಸ ಅಧ್ಯಯನದ ವರದಿಯನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕೆಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಈ ಕುರಿತು ಶಾಸಕ ಸಿ.ಪುಟ್ಟರಂಗಶೆಟ್ಟಿ ಮಾತನಾಡಿ, ಭಗೀರಥ ಮಹರ್ಷಿಗಳು ಪ್ರಯತ್ನದ ಪ್ರತೀಕ. ಮರಳಿ ಯತ್ನ ಮಾಡಿ ಭೂಮಿಗೆ ಗಂಗೆಯನ್ನು ತಂದರು. ಉಪ್ಪು ತಯಾರಿಸುತ್ತಿದ್ದ ಉಪ್ಪಾರ ಸಮುದಾಯಕ್ಕೆ ಬ್ರಿಟೀಷರು ವಿಧಿಸಿದ ತೆರಿಗೆ ಹೊರೆಯಾಗಿ ವೃತ್ತಿಯಿಂದ ವಿಮುಖವಾಗುವಂತಾಯಿತು. ಪ್ರಸ್ತುತ ಸಮುದಾಯದ ಜನರು ವಿವಿಧ ವೃತ್ತಿಗಳಲ್ಲಿ ತೊಡಗಿಕೊಂಡಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ದುಡಿಮೆ ಮಾಡುತ್ತಿದ್ದಾರೆ ಎಂದರು.
ರಾಜ್ಯ ಸರ್ಕಾರದಿಂದ ಹಿಂದುಳಿದ ವರ್ಗಗಳ ಕುಲಶಾಸ ಅಧ್ಯಯನ ಮಾಡಲಾಗಿದೆ. ಅದರಂತೆ ಉಪ್ಪಾರ ಸಮುದಾಯದ ಕುಲಶಾಸ ಅಧ್ಯಯನ ಕೂಡ ನಡೆದಿದ್ದು, ಇದನ್ನು ಆದಷ್ಟು ಬೇಗ ಜಾರಿಗೊಳಿಸಬೇಕಾಗಿದೆ ಎಂದರು.
ನಾಗವಳ್ಳಿಯ ಸಂಪನ್ಮೂಲ ವ್ಯಕ್ತಿ ಸೋಮಣ್ಣ ಮಾತನಾಡಿ, ಭಗೀರಥರ ಮಹಾ ತಪಸ್ಸಿಗೆ ಮೆಚ್ಚಿದ ಶಿವ ಭೂಮಿಗೆ ಗಂಗೆಯನ್ನು ಕಳುಹಿಸಿಕೊಟ್ಟರು. ಪ್ರಸ್ತುತ ಸಮಾಜದಲ್ಲಿ ಉಪ್ಪಾರ ಸಮಾಜ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದೆ. ಈ ಹಿನ್ನೆಲೆಯಲ್ಲಿ ಕುಲಶಾಸ ಅಧ್ಯಯನದ ವರದಿಯನ್ನು ಯಥಾವತ್ತಾಗಿ ಅನುಷ್ಟಾನಗೊಳಿಸಬೇಕು. ರಾಜ್ಯ ಸರ್ಕಾರದಿಂದ ಉಪ್ಪಾರ ಅಭಿವೃದ್ಧಿ ನಿಗಮ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಜಾರಿಗೆ ತಂದಿರುವುದು ಸಂತಸದ ವಿಚಾರ. ಉತ್ತರ ಪ್ರದೇಶದಲ್ಲಿ ಭಗೀರಥ ಮಹರ್ಷಿ ಹೆಸರಿನಲ್ಲಿ ಜಲ ಸಂರಕ್ಷಣೆಯನ್ನು ಜಾರಿಗೆ ತರಲಾಗಿದೆ. ಈ ರೀತಿಯ ಕಾರ್ಯಕ್ರಮಗಳು ರಾಜ್ಯದಲ್ಲೂ ಅನುಷ್ಟಾನಗೊಳ್ಳಬೇಕೆಂದು ಆಗ್ರಹಿಸಿದರು.
ಕಾರ್ಯಕ್ರಮದಲ್ಲಿ ಕಾವೇರಿ ಜಲಾನಯನ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಮರಿಸ್ವಾಮಿ, ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಹಮದ್ ಅಸ್ಗರ್(ಮುನ್ನ), ಜಿಲ್ಲಾ ಗ್ಯಾರಂಟಿ ಯೋಜನೆ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷ ಚಂದ್ರು ಹೊಂಗನೂರು, ಜಿಲ್ಲಾಧಿಕಾರಿ ಶ್ರೀರೂಪಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ ಮತ್ತು ಉಪ್ಪಾರ ಸಮುದಾಯದ ಗಡಿ ಯಜಮಾನರು, ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.
ಉಪ್ಪಾರ ಸಮುದಾಯವನ್ನು ಒಗ್ಗೂಡಿಸಿ ಸಮಾವೇಶ ಮಾಡಲಾಗುವುದು ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. ಸಮಾವೇಶ ಮಾಡುವ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಬಳಿ ಕೇಳಿದಾಗ ಮೈಸೂರು ಅಥವಾ ಬೆಂಗಳೂರಿನಲ್ಲಿ ಮಾಡಲು ತಿಳಿಸಿದರು. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ ಚರ್ಚೆ ಮಾಡುತ್ತೇನೆ. ಚಾಮರಾಜನಗರ ಜಿಲ್ಲೆಯಲ್ಲಿ ದೊಡ್ಡಮಟ್ಟದಲ್ಲಿ ಉಪ್ಪಾರ ಜಯಂತಿ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗುವುದು. ಉಪ್ಪಾರ ಸಮುದಾಯ ಭವನ ನಿರ್ಮಾಣದಲ್ಲಿ ತಡೆಯೊಡ್ಡಿದ ಮಹಾನುಭಾವನ ಬಗ್ಗೆ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳಿದರು.
ಚಾಮರಾಜನಗರ: ನಗರದ ಜಿಲ್ಲಾ ಡಾ.ಬಾಬು ಜಗಜೀವನರಾಮ್ ಸಂಘಟನೆಗಳ ಒಕ್ಕೂಟದ ವತಿಯಿಂದ ಗುರುವಾರ ಶ್ರೀಭಗೀರಥ ಜಯಂತಿ ಆಚರಿಸಲಾಯಿತು.
ಒಕ್ಕೂಟದ ಸದಸ್ಯರು ಯಜಮಾನರು, ಮುಖಂಡರು, ಶ್ರೀಭಗೀರಥ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿದರು. ಸಂಘದ ಪ್ರಧಾನ ಕಾರ್ಯದರ್ಶಿಎಂ.ಶಿವಕುಮಾರ್, ಸಹ ಕಾರ್ಯದರ್ಶಿ ಶಿವಕುಮಾರ್, ಜಿಲ್ಲಾ ಉಪಾಧ್ಯಕ್ಷ ಸಿ.ಚನ್ನಬಸಯ್ಯ, ಮುಖಂಡರಾದ ಸಿದ್ದಪ್ಪಾಜಿ, ಶಿವಣ್ಣ, ಸುಂದರ್, ಜ್ಯೋತಿ, ಪ್ರೌಢಶಾಲೆ ನಿವೃತ್ತ ಮುಖ್ಯ ಶಿಕ್ಷಕ ಚಿಕ್ಕ ಮಾದಯ್ಯ ಇತರರು ಇದ್ದರು.
ಸಾರ್ವಜನಿಕರಿಗೆ ಅನ್ನಸಂತರ್ಪಣೆ
ಚಾಮರಾಜನಗರ: ಭಗೀರಥ ಮಹರ್ಷಿ ಜಯಂತಿ ಪ್ರಯುಕ್ತ ಉಪ್ಪಾರ ಗೆಳೆಯರ ಬಳಗದ ವತಿಯಿಂದ ನಗರದ ಮಾರಿಗುಡಿ ಬಳಿ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು. ಭಗೀರಥರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಇದೇ ವೇಳೆ ಮಹೇಂದ್ರ ಉಪ್ಪಾರ್ ಮಾತನಾಡಿ, ಭಗೀರಥರ ಜೀವನ ಸಂದೇಶ ಸಮಾಜವನ್ನು ತಲುಪಬೇಕು ಎಂದರು. ಮುಖಂಡರಾದ ಮಹೇಂದ್ರ ಉಪ್ಪಾರ್, ಪೈನಾಪಲ್ ಮಂಜು, ಸುರೇಶ್ ವಾಜಪೇಯಿ, ಬಿಜೆಪಿ ಮುಖಂಡರಾದ ಕೃಷ್ಣ, ಗಿರೀಶ್, ಆನಂದ್ ಮತ್ತು ಇತರರು ಉಪಸ್ಥಿತರಿದ್ದರು.