ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ, ಮೋನಾರೋತ್, ಟಿ. ಜವರೇಗೌಡ, ದಿನೇಶ್ ಕುಮಾರ್ ಮೀನಾ, ಶೃತಿ, ಬಸವರಾಜು, ಚೈತ್ರಾ, ನಯನಾ, ತನ್ಮಯ್, ಎಂ.ವಿ.ಸುಧಾ ಇನ್ನಿತರರಿದ್ದರು.
- ಜಿಲ್ಲಾಧಿಕಾರಿ ಶ್ರೀರೂಪಾ ಸೂಚನೆ
- ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆ
- ನೀರು ಪೂರೈಕೆಗೆ ಅಗತ್ಯ ಕ್ರಮವಹಿಸುವಂತೆ ಸೂಚನೆ
ಚಾಮರಾಜನಗರ: ಬೇಸಿಗೆ ಸಂದರ್ಭದಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರು ಅಭಾವ ಉಂಟಾಗದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಲು ಜಿಲ್ಲಾಧಿಕಾರಿ ಶ್ರೀರೂಪಾ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬೇಸಿಗೆ ನಿರ್ವಹಣೆ ಸಂಬಂಧ ವಹಿಸಬೇಕಿರುವ ಮುನ್ನೆಚ್ಚರಿಕೆ ಕ್ರಮಗಳ ಕುರಿತ ಸೋಮವಾರ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬೇಸಿಗೆ ವೇಳೆ ಕುಡಿಯುವ ನೀರಿನ ತೊಂದರೆ ಉಂಟಾಗಬಹುದಾದ ಸಮಸ್ಯಾತ್ಮಕ ಗ್ರಾಮಗಳಲ್ಲಿ ಸಮರ್ಪಕವಾಗಿ ಕುಡಿಯುವ ನೀರು ಪೂರೈಸಲು ಈಗಿನಿಂದಲೇ ಎಲ್ಲ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಖಾಸಗಿ ಬೋರ್ ವೆಲ್, ಟ್ಯಾಂಕರ್ ಇನ್ನಿತರ ಮೂಲಕ ಸಮಸ್ಯೆ ಇರುವ ಗ್ರಾಮಗಳಲ್ಲಿ ಕುಡಿಯುವ ನೀರು ಒದಗಿಸಬೇಕಿದೆ. ಕೊಳವೆಬಾವಿಗಳಲ್ಲಿ ಇನ್ನಷ್ಟು ನೀರು ಪಡೆಯಲು ಸಾಧ್ಯ ಇರುವ ಬಗ್ಗೆ ಪರಿಶೀಲಿಸಬೇಕು ಎಂದರು.
ಜಾನುವಾರುಗಳಿಗೆ ಬೇಸಿಗೆ ಸಮಯದಲ್ಲಿ ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕಿದೆ. ಜಾನುವಾರುಗಳಿಗೆ ನೀರು ಸಂಗ್ರಹಿಸುವ ಕಟ್ಟೆಗಳನ್ನು ಸ್ವಚ್ಚ ಪಡಿಸಿ ಕುಡಿಯುವ ನೀರು ತುಂಬಿಸಬೇಕು. ಮೇವಿನ ಲಭ್ಯತೆ ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಎಲ್ಲಿಯೂ ಮೇವಿಗೆ ಕೊರತೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪಟ್ಟಣ ಪ್ರದೇಶಗಳಲ್ಲಿಯೂ ಕುಡಿಯುವ ನೀರು ಸರಬರಾಜಿಗೆ ಯಾವುದೇ ತೊಂದರೆ ಇರದಂತೆ ಗಮನಹರಿಸಬೇಕು. ಲಭ್ಯವಿರುವ ನೀರಿನ ಮೂಲಗಳಿಂದ ಅಗತ್ಯಕ್ಕನುಗುಣವಾಗಿ ನೀರು ಸರಬರಾಜು ಮಾಡಬೇಕು. ಹಲವು ವಾರ್ಡ್‌ಗಳಿಂದ ನೀರಿನ ಸಮಸ್ಯೆ ಇರುವ ಬಗ್ಗೆ ಸಾರ್ವಜನಿಕರು ಗಮನಕ್ಕೆ ತರುತ್ತಿದ್ದಾರೆ. ಅಧಿಕಾರಿಗಳು ವ್ಯಾಪಕವಾಗಿ ಭೇಟಿ ನೀಡಿ ಕೂಡಲೇ ನೀರು ಪೂರೈಕೆಗೆ ಕ್ರಮ ತೆಗೆದುಕೊಳ್ಳಬೇಕು. ಪರ್ಯಾಯ ವ್ಯವಸ್ಥೆಗಳ ಮೂಲಕವು ನೀರು ಒದಗಿಸಬೇಕು ಎಂದರು.
ನಗರ, ಪಟ್ಟಣ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಘಟಕಗಳನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬೇಕು. ದುರಸ್ತಿ ಅಗತ್ಯವಿದ್ದರೆ ಶೀಘ್ರ ಸರಿಪಡಿಸಿ ಉಪಯೋಗವಾಗುವಂತೆ ಚಾಲನೆಗೊಳಿಸಬೇಕು. ಸ್ವಚ್ಚತೆ ಕೆಲಸಗಳು ಪರಿಣಾಮಕಾರಿಯಾಗಿ ಆಗಬೇಕು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದರು.
ತೋಟಗಾರಿಕೆ, ಕೃಷಿ ಬೆಳೆ ಚಟುವಟಿಕೆಗಳ ನಿರ್ವಹಣೆಗೆ ಯಾವುದೇ ಸಮಸ್ಯೆಯಾಗಬಾರದು. ಬೇಸಿಗೆ ವೇಳೆ ಕಾಡ್ಗಿಚ್ಚು, ಆಕಸ್ಮಿಕ ಬೆಂಕಿ ಅನಾಹುತಗಳು ಸಂಭವಿಸದಂತೆ ನಿರಂತರವಾಗಿ ನಿಗಾ ವಹಿಸಬೇಕು. ಅರಣ್ಯ ಇಲಾಖೆ, ಅಗ್ನಿಶಾಮಕ ಅಧಿಕಾರಿಗಳು ಕಟ್ಟೆಚ್ಚರದಿಂದ ಇರಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾರೋತ್ ಮಾತನಾಡಿ, ತಾವು ಸಹ ವ್ಯಾಪಕವಾಗಿ ಭೇಟಿ ನೀಡುತ್ತಿದ್ದು, ಪರಿಶೀಲಿಸುತ್ತಿದ್ದೇನೆ. ಕುಡಿಯುವ ನೀರು ಸಮಸ್ಯೆ ತಲೆದೋರಬಹುದಾದ ಗ್ರಾಮಗಳ ಬಗ್ಗೆ ಹೆಚ್ಚು ಗಮನ ಹರಿಸಬೇಕು. ತುರ್ತಾಗಿ ಸ್ಪಂದಿಸಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ, ಉಪವಿಭಾಗಾಧಿಕಾರಿ ದಿನೇಶ್ ಕುಮಾರ್ ಮೀನಾ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಶೃತಿ, ತಹಶೀಲ್ದಾರರಾದ ಬಸವರಾಜು, ಚೈತ್ರಾ, ನಯನಾ, ತನ್ಮಯ್, ಜಿಲ್ಲಾ ನಗರಾಭಿವೃಧ್ದಿ ಕೋಶದ ಯೋಜನಾ ನಿರ್ದೇಶಕಿ ಎಂ.ವಿ.ಸುಧಾ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಇಮ್ಯಾನುವಲ್ ಸಂತೋಷ್, ಪಶುಪಾಲನಾ ಇಲಾಖೆಯ ಉಪನರ್ದೇಶಕ ಮಂಜುನಾಥ್ ಇತರರು ಉಪಸ್ಥಿತರಿದ್ದರು.