ಚಾಮರಾಜನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸುರೇಶ್ ಎನ್.ಋಗ್ವೇದಿ ಮಾತನಾಡಿದರು. ರವಿಚಂದ್ರ ಪ್ರಸಾದ್, ಲಕ್ಷ್ಮಿ ನರಸಿಂಹ, ಪುರುಷೋತ್ತಮ್, ಸರಸ್ವತಿ ಇತರರಿದ್ದರು.
- ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಸಲಹೆ
ಚಾಮರಾಜನಗರ: ಪ್ರಸಿದ್ಧ ಬಿಳಿಗಿರಿರಂಗನ ಬೆಟ್ಟ ಐತಿಹಾಸಿಕ, ಪೌರಾಣಿಕ, ಶಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಜನಪದ ಕಾವ್ಯದ ಅಮೂಲ್ಯ ಸಂಪತ್ತಿನ ಕೇಂದ್ರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ತಿಳಿಸಿದರು.
ನಗರದ ಕನ್ನಡ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಶುಕ್ರವಾರ ಬಿಳಿಗಿರಿರಂಗನಾಥ ಸ್ವಾಮಿ ಆಧ್ಯಾತ್ಮಿಕ ಮತ್ತು ಜಾನಪದ ಮಹತ್ವ ಕುರಿತು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಕೃತಿ, ವನ್ಯಜೀವಿ ಹಾಗೂ ಆಯುರ್ವೇದ ಸಸ್ಯರಾಶಿಗೆ ಬಿಳಿಗಿರಿರಂಗನ ಬೆಟ್ಟ ಪ್ರಸಿದ್ಧಿಯಾಗಿದೆ. ಹಾಗೆಯೇ ಇಲ್ಲಿನ ಸೋಲಿಗರ ಜೀವನ, ಮೌಲ್ಯಗಳು ಹಾಗೂ ವಿಶಿಷ್ಟ ಜನಪದ ಚಿಂತನೆಗಳು ತನ್ನದೇ ಆದ ಮೌಲ್ಯವನ್ನೂ ಹೊಂದಿದೆ. ಸೋಲಿಗರು ಬಿಳಿಗಿರಿರಂಗನಾಥ ಸ್ವಾಮಿಯನ್ನು ಭಾವನ ಸಂಬಂಧದಲ್ಲಿ ಕಾಣುತ್ತಾರೆ. ಆ ಮೂಲಕ ಭಗವಂತ ಮತ್ತು ಮಾನವ ನಡುವಿನ ಪ್ರೀತಿ,ವಿಶ್ವಾಸ ಹಾಗೂ ಬಾಂಧವ್ಯ ಜನ ಮಾನಸದಲ್ಲಿ ಉಳಿದಿದೆ. ಸೋಲಿಗ ಸಂಸ್ಕೃತಿಯನ್ನು ಗೌರವಿಸುವ ಹಾಗೂ ಅದರ ಮಹತ್ವವನ್ನು ಯುವ ಪೀಳಿಗೆ ತಿಳಿಯುವಂತಾಗಬೇಕು. ಬಿಳಿಗಿರಿರಂಗನ ಬೆಟ್ಟ ಚಾಮರಾಜನಗರದ ಹೆಮ್ಮೆ ಎಂದು ತಿಳಿಸಿದರು.
ಬಿಳಿಗಿರಿರಂಗನಾಥ ಸ್ವಾಮಿಯ ಅಮೂಲ್ಯ ಬಹುಪರಾಕ್ ಅನ್ನು ಕನ್ನಡ ಸಾಹಿತ್ಯ ಪರಿಷತ್ ಸದಸ್ಯ ರವಿಚಂದ್ರ ಪ್ರಸಾದ್ ಕಹಳೆ ಅವರು ಹೇಳುವ ಮೂಲಕ ಬಿಳಿಗಿರಂಗನಾಥ ಸ್ವಾಮಿಯ ಜೀವನವನ್ನು ರಸವತ್ತಾಗಿ ವಿವರಿಸಿದರು.
ಬರಹಗಾರ ಎಸ್.ಲಕ್ಷ್ಮೀನರಸಿಂಹ ಮಾತನಾಡಿ, ಧರ್ಮದ ತಳಹದಿಯನ್ನು ಉಳಿಸಿ ಬೆಳೆಸಬೇಕಿದೆ. ಕನ್ನಡ ಸಾಹಿತ್ಯ ಪರಿಷತ್ ಮೊಟ್ಟಮೊದಲ ಬಾರಿಗೆ ಬೆಳಗೆರೆ ರಂಗ ಹಾಗೂ ಜನಪದ ಸಾಹಿತ್ಯ ಕುರಿತ ವಿಚಾರಧಾರೆ ಮಂಡಿಸಲು ಅವಕಾಶ ಮಾಡಿರುವುದು ಉತ್ತಮ ಕಾರ್ಯವಾಗಿದೆ. ಸಾಹಿತ್ಯ ಮತ್ತು ಜನಪದದ ಮೌಲ್ಯಗಳನ್ನು ತಿಳಿಯಬೇಕು. ಪ್ರಾಕೃತಿಕವಾಗಿ ಎಷ್ಟು ಸೌಂದರ್ಯವಾಗಿದೆಯೋ ಅಷ್ಟೇ ಪ್ರಮಾಣದಲ್ಲಿ ತನ್ನದೇಯಾದ ಇತಿಹಾಸವನ್ನು ಹೊಂದಿರುವ ಬಿಳಿಗಿರಿರಂಗ ಕಾವ್ಯ ದೇಶವಿದೇಶಗಳಲ್ಲಿ ಪ್ರಚಲಿತವಾಗಿದೆ. ಟಿಪ್ಪು ಸುಲ್ತಾನ್ ದಾಳಿಯಿಂದ ಬೆಟ್ಟವನ್ನು ಉಳಿಸಿದ ಕೀರ್ತಿ ದಿವಾನ್ ಪೂರ್ಣಯ್ಯ ಅವರಿಗೆ ಸಲ್ಲುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ನ ಪದ್ಮಾ ಪುರುಷೋತ್ತಮ ಅವರಿಗೆ 3 ವರ್ಷಗಳ ಕಾಲ ಬಿಳಿಗಿರಿರಂಗನ ಬೆಟ್ಟದ ಧರ್ಮದರ್ಶಿಯಾಗಿ ಸೇವೆ ಸಲ್ಲಿಸುವ ಅವಕಾಶ ದೊರಕಿದ್ದು ನನ್ನ ಪುಣ್ಯ. ಬಿಳಿಗಿರಿ ರಂಗನ ಜಾತ್ರೆ ಸಂದರ್ಭದಲ್ಲಿ ಅದರ ಪೂರ್ಣ ಇತಿಹಾಸ, ಸಂಸ್ಕೃತಿ ಮತ್ತು ಜನಪದ ವಿಚಾರಧಾರೆಗಳನ್ನು ತಿಳಿಯುವ ಕಾರ್ಯವಾಗಿರುವುದು ಸಂತೋಷ ತಂದಿದೆ ಎಂದರು.
ಇದಕ್ಕೂ ಮುನ್ನ ಜಾಗಟೆ ಮತ್ತು ಶಂಖ ಊದುವ ಮೂಲಕ ರವಿಚಂದ್ರಪ್ರಸಾದ್ ಕಾರ್ಯಕ್ರಮ ಉದ್ಘಾಟಿಸಿದರು. ಕನ್ನಡ ಸಾಹಿತ್ಯ ಪರಿಷತ್‌ನ ಶಿವಲಿಂಗಮೂರ್ತಿ, ಬಿ.ಕೆ.ಆರಾಧ್ಯ, ರಾಜಗೋಪಾಲ್, ಮಂಜುನಾಥ್, ಸರಸ್ವತಿ ಇತರರು ಇದ್ದರು.