ಯಳಂದೂರು ಪಟ್ಟಣದ ಸರ್ಕಾರಿ ನೌಕರರ ಭವನದ ಮುಂಭಾಗ ಸೋಮವಾರ ಏರ್ಪಡಿಸಿದ್ದ ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವನ್ನು ಜಿಲ್ಲಾಧ್ಯಕ್ಷ ಎನ್. ನಾಗೇಶ್ ಉದ್ಘಾಟಿಸಿದರು. ಅಮ್ಮನಪುರ ಮಹೇಶ್ ರುದ್ರಯ್ಯ ಇತರರು ಇದ್ದರು.  
ಚಾಮರಾಜನಗರ

ಹಿರಿಯ ನಾಗರಿಕರ ಕಾನೂನು ಪಾಲನೆಯಾಗಲಿ

ಯಳಂದೂರು: ಹಿರಿಯ ನಾಗರಿಕರಿಗೆ ಇರುವ ಕಾನೂನು ಸರಿಯಾಗಿ ಪಾಲನೆಯಾಗುತ್ತಿಲ್ಲ. ಇವರನ್ನು ಕಡೆಗಣಿಸಲಾಗುತ್ತಿದೆ. ಸರ್ಕಾರಿ ನಿವೃತ್ತ  ನೌಕರರೂ ಇದರಿಂದ ಹೊರತಾಗಿಲ್ಲ. ಹಾಗಾಗಿ ಈ ಬಗ್ಗೆ ಪ್ರಶ್ನಿಸುವ ಮನೋಭಾವ ಬೆಳೆಸಿಕೊಳ್ಳಬೇಕು. ನಮಗಿರುವ ಕಾನೂನುಗಳನ್ನು ತಿಳಿದುಕೊಳ್ಳಬೇಕು ಎಂದು ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘದ ಜಿಲ್ಲಾಧ್ಯಕ್ಷ ಎನ್. ನಾಗೇಶ್ ಸಲಹೆ ನೀಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದ ಆವರಣದಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕು ಸರ್ಕಾರಿ ನಿವೃತ್ತ ನೌಕರರ ಸಂಘದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು. 
ಸರ್ಕಾರಿ ಕಚೇರಿಗಳಲ್ಲಿ ವಯೋವೃದ್ಧರಿಗೆ ಬೇಗ ಕೆಲಸ ಮಾಡಿಕೊಡಬೇಕು. ವಿನಾಕಾರಣ ಅಲೆದಾಡಿಸಬಾರದು. ಬ್ಯಾಂಕ್‌ನಲ್ಲಿ ಹಣದ ವ್ಯವಹಾರ ನಡೆಸಲು ಸಹ ಹಿರಿಯ ನಾಗರಿಕರನ್ನು ಪ್ರತ್ಯೇಕವಾಗಿ ಪರಿಗಣಿಸಬೇಕು. ಆದರೂ ಪಾಲನೆಯಾಗುತ್ತಿಲ್ಲ. ಇದನ್ನು ಪ್ರಶ್ನಿಸುವ ಮನೋಭಾಗ ಬೆಳೆಸಿಕೊಳ್ಳಬೇಕಿದೆ ಎಂದರು. 

ಜ್ಯೋತಿ ಸಂಜೀವಿನಿ ಯೋಜನೆಯನ್ನು ಪಿಂಚಣಿ ಪಡೆಯುತ್ತಿರುವ ಸರ್ಕಾರಿ ನೌಕರರಿಗೂ ವಿಸ್ತರಿಸಬೇಕು ಎಂದು ಸರ್ಕಾರದ ಬೇಡಿಕೆಯಿಡಲಾಗಿದೆ. ಶೀಘ್ರದಲ್ಲೇ ಜಾರಿಗೆ ಬರುವ ಸಾಧ್ಯತೆಗಳಿವೆ. ಆದರೆ ಕೇಂದ್ರ ಸರ್ಕಾರದ ನೂತನ ಪಿಂಚಣಿ ಯೋಜನೆಯ ವಿಧೇಯಕವನ್ನು ಮಂಡಿಸಲು ಸಿದ್ಧತೆ ನಡೆಸುತ್ತಿದೆ. ಹೀಗಾದರೆ ಸರ್ಕಾರಿ ನೌಕರರಿಗೆ ಅನಾನುಕೂಲವಾಗಲಿದ್ದು, ಇದನ್ನು ಜಾರಿ ಮಾಡದಂತೆ ನಡೆಯುತ್ತಿರುವ ಹೋರಾಟಗಳಲ್ಲಿ ಎಲ್ಲರೂ ಭಾಗವಹಿಸಬೇಕು ಎಂದರು. 

 ಸರ್ಕಾರಿ ನೌಕರರ ಮೃತಪಟ್ಟಾಗ ಪಿಂಚಣಿ ಮಾಡಿಕೊಡಲು ಅಧಿಕಾರಿಗಳು ಹಾಗೂ ಬ್ಯಾಂಕ್ ಸಿಬ್ಬಂದಿ ವಿನಾಕಾರಣ ಅಲೆದಾಡಿಸಿದರೆ ನಮ್ಮ ಸಂಘಕ್ಕೆ ದೂರು ನೀಡಿದರೆ  ಸಂಘಕ್ಕೆ ದೂರು ನೀಡಿದ್ದಲ್ಲಿ ಶೀಘ್ರ ಪರಿಹಾರ ಒದಗಿಸಲಾಗುವುದು ಎಂದರು. 

ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಅಮ್ಮನಪುರ ಮಹೇಶ್ ಮಾತನಾಡಿ, ಸರ್ಕಾರಿ ನೌಕರಿ ಮಾಡುವ ಪ್ರತಿಯೊಬ್ಬರೂ ನಿವೃತ್ತಿ ಹೊಂದುತ್ತಾರೆ. ಹಾಗಾಗಿ ನಿವೃತ್ತ ಸರ್ಕಾರಿ ನೌಕರರ ಸಂಘ ನಮ್ಮ ಶಾಶ್ವತ ನೆಲೆಯಾಗಿದೆ. ಇದರೊಳಗೆ ಹಿರಿಯರು ಹೆಚ್ಚಾಗಿರುವುದರಿಂದ ಆರೋಗ್ಯ ಕಾಳಜಿ ವಹಿಸಬೇಕು ಎಂದರು. ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ವೈ.ಎಂ. ಮಂಜುನಾಥ್, ತಾಲೂಕು ಕಾರ್ಯದರ್ಶಿ ರಾಜು, ಸರ್ಕಾರಿ ನಿವೃತ್ತ ನೌಕರರ ಸಂಘದ ಕಾರ್ಯದರ್ಶಿ ರುದ್ರಯ್ಯ, ಅಧ್ಯಕ್ಷ ಎಲ್. ನಾರಾಯಣಸ್ವಾಮಿ ಮಾತನಾಡಿದರು. 

ಸಂಘದ ಜಿಲ್ಲಾ ಕಾರ್ಯದರ್ಶಿ ರಾಜು, ಗೌರವ ಅಧ್ಯಕ್ಷ ನಾಗರಾಜು, ಉಪಾಧ್ಯಕ್ಷ ರಾಮಣ್ಣ, ಖಜಾಂಚಿ ಎಂ. ನಾಗಯ್ಯ, ವೈ.ಆರ್. ರಂಗಸ್ವಾಮಿ, ಕೆ. ರಾಮಸ್ವಾಮಿ, ಶಿವಮ್ಮ, ವೀರಯ್ಯ, ನಾಗರತ್ನ ಇತರರು ಇದ್ದರು.