ಯಳಂದೂರು ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಿಪಿಐ ಸುಬ್ರಹ್ಮಣ್ಯ ಉದ್ಘಾಟಿಸಿದರು. ಮಂಜುನಾಥಸ್ವಾಮಿ, ಯರಿಯೂರು ನಾಗೇಂದ್ರ, ಪರಶಿವಮೂರ್ತಿ, ಡಿ.ಪಿ.ಮಹೇಶ್, ಫೈರೋಜ್‌ಖಾನ್,ವೈ.ಕೆ.ಮೋಳೆ ನಾಗರಾಜು ಇತರರಿದ್ದರು. 
ಚಾಮರಾಜನಗರ

ಎಲ್ಲೆಡೆ ಕನ್ನಡ ಬಳಕೆ ಮಾಡುವ ಪರಿಪಾಠ ಬೆಳೆಯಲಿ

ಪ್ರಮುಖ ಮುಖ್ಯಾಂಶಗಳು

  • ಆರಕ್ಷಕ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ ಸಲಹೆ
ಯಳಂದೂರು: ಕನ್ನಡ ಭಾಷೆ ಬಳಕೆಗೆ ಯಾವುದೇ ಹಿಂದೇಟು ಹಾಕಬಾರದು. ಅಂತೆಯೇ ಇತರ ಭಾಷೆಗಳನ್ನು ವ್ಯಾವಹಾರಿಕವಾಗಿ ಬಳಸಿಕೊಳ್ಳುವುದರ ಜತೆಗೆ ಕನ್ನಡವನ್ನು ಎಲ್ಲೆಡೆ ಬಳಕೆ ಮಾಡುವ ಪರಿಪಾಠವನ್ನು ಬಳಸಿಕೊಳ್ಳಬೇಕು ಎಂದು ಆರಕ್ಷಕ ವೃತ್ತ ನಿರೀಕ್ಷಕ ಸುಬ್ರಹ್ಮಣ್ಯ ಸಲಹೆ ನೀಡಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಮಂಗಳವಾರ ಪಟ್ಟಣದ ಬಿಳಿಗಿರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪರಿಷತ್‌ನ ಸಂಸ್ಥಾಪಕ ದಿನ ಆಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನಮ್ಮ ಭಾಷೆ ನಮ್ಮ ಅಸ್ಮಿತೆಯಾಗಿದೆ. ಅದನ್ನು ಗೌರವಿಸುವ ಮೂಲಕ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವು ಕಟಿಬದ್ಧರಾಗಿರಬೇಕು. ಆಗ ಭಾಷೆ ಬೆಳವಣಿಗೆಗೆ ಇದು ಸಹಕಾರಿಯಾಗುತ್ತದೆ ಎಂದರು.
ಶಿಕ್ಷಕ ಮಂಜುನಾಥಸ್ವಾಮಿ ಮಾತನಾಡಿ, ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಐತಿಹ್ಯವಿದೆ. ಇದು ನಮ್ಮ ಹೆಮ್ಮೆಯಾಗಬೇಕು. ಭಾಷೆ ನಮ್ಮ ಅಸ್ಮಿತೆಯಾಗಿದ್ದು, ಅದನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಶ್ರಮ ನಿರಂತರವಾಗಿರಬೇಕು. ಈ ನಿಟ್ಟಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ ನಿರಂತರವಾಗಿ ಕೆಲಸ ಮಾಡುತ್ತಿದೆ. ಇದರೊಂದಿಗೆ ಅನೇಕ ಕನ್ನಡ ಪರ ಸಂಘಟನೆಗಳೂ ಕೂಡ ಇದಕ್ಕೆ ಶ್ರಮಿಸುತ್ತಿವೆ. ನಾವು ಕೂಡ ಅದರ ಭಾಗವಾಗಬೇಕು ಎಂದು ಸಲಹೆ ನೀಡಿದರು.
ಜಿಲ್ಲೆಯಲ್ಲೇ ಯಳಂದೂರು ಪಟ್ಟಣ ಕವಿಗಳ ತವರೂರಾಗಿದೆ. ಅನೇಕ ಮಹಾನ್ ಕವಿಗಳು ಇಲ್ಲಿದ್ದಾರೆ. ಪ್ರತಿ ಪ್ರದೇಶದಲ್ಲೂ ಭಾಷೆ ವಿಭಿನ್ನತೆಯನ್ನು ಹೊಂದಿದ್ದು, ಇಂತಹ ಭಾಷೆಯ ಅಧ್ಯಯನ ನಿರಂತರವಾಗಿರಬೇಕು. ಮೊಬೈಲ್‌ಗಳಿಗೆ ದಾಸರಾಗದೆ ಕನ್ನಡ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಕಾಲೇಜು ಪ್ರಾಂಶುಪಾಲ ಹೇಮಂತ್‌ಕುಮಾರ್ ಮಾತನಾಡಿ, ನಮ್ಮ ಜಿಲ್ಲೆ ಗಡಿನಾಡಿನಲ್ಲಿದ್ದರೂ ಕೂಡ ಕನ್ನಡ ಭಾಷೆ ಮಾತನಾಡುವ ಜನರೇ ಹೆಚ್ಚಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್‌ನವರು ನಮ್ಮ ಜಿಲ್ಲೆಯಲ್ಲೂ ಕೂಡ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಬೇಕು. ಇದಕ್ಕೆ ಇಲ್ಲಿನ ಸ್ಥಳೀಯರು, ಕನ್ನಡಾಭಿಮಾನಿಗಳು, ಜನಪ್ರತಿನಿಧಿಗಳು ಹೆಚ್ಚಿನ ಶ್ರಮ ವಹಿಸಬೇಕು ಎಂದು ಸಲಹೆ ನೀಡಿದರು.
ತಾಲೂಕು ಕಸಾಪ ಅಧ್ಯಕ್ಷ ಯರಿಯೂರು ನಾಗೇಂದ್ರ, ಪರಶಿವಮೂರ್ತಿ ಮಾತನಾಡಿದರು. ಕಾರ್ಯದರ್ಶಿ ಡಿ.ಪಿ.ಮಹೇಶ್, ಕೋಶಾಧ್ಯಕ್ಷ ಫೈರೋಜ್‌ಖಾನ್, ಕರವೇ ಜಿಲ್ಲಾ ಉಪಾದ್ಯಕ್ಷ ವೈ.ಕೆ.ಮೋಳೆ ನಾಗರಾಜು, ಪಪಂ ನಾಮ ನಿರ್ದೇಶಿತ ಸದಸ್ಯ ಲಿಂಗರಾಜ ಮೂರ್ತಿ, ಚಾಮಲಾಪುರ ವಿಜಯ್, ಪ್ರಾಧ್ಯಾಪಕರಾದ ಪದ್ಮಾ, ಗಣೇಶ್‌ಪ್ರಸಾದ್, ಶ್ರೀನಿವಾಸ್, ಮಂಜುಳಾ ಅನೇಕರು ಇದ್ದರು.