ಗುಂಡಾಪುರ ಗ್ರಾಮದ ಜಮೀನೊಂದರಲ್ಲಿ ಕಿಡಿಗೇಡಿಗಳ ಕೃತ್ಯಕ್ಕೆ ಪರಂಗಿ ಗಿಡಗಳು ನಾಶವಾಗಿರುವುದು. 
ಚಾಮರಾಜನಗರ

ಕಿಡಿಗೇಡಿಗಳ ಕೃತ್ಯಕ್ಕೆ ಬೀಳಲಿ ಕಡಿವಾಣ

ಪ್ರಮುಖ ಮುಖ್ಯಾಂಶಗಳು

  • ಬಿ.ಗುಂಡಾಪುರ ಗ್ರಾಮದ ಹೊರವಲಯದ ಜಮೀನು
  • ಕಿಡಿಗೇಡಿಗಳಿಂದ ನಡೆಯುತ್ತಿರುವ ಫಸಲು ನಾಶ
ಹನೂರು: ತಾಲೂಕಿನ ಬಿ.ಗುಂಡಾಪುರ ಗ್ರಾಮದ ಹೊರವಲಯದ ಜಮೀನುಗಳಲ್ಲಿ ಕಿಡಿಗೇಡಿಗಳಿಂದ ನಡೆಯುತ್ತಿರುವ ಫಸಲು ನಾಶಕ್ಕೆ ಕಡಿವಾಣ ಹಾಕುವಂತೆ ರೈತರು ಒತ್ತಾಯಿಸಿದ್ದಾರೆ.
ಗ್ರಾಮ ಸಮೀಪದ ರಾಮನಗುಡ್ಡೆ ಕೆರೆಗೆ ಬೂದುಬಾಳು ಗ್ರಾಮದ ಬಳಿಯ ಹಳ್ಳದ ಮೂಲಕ ಕಾವೇರಿ ನೀರನ್ನು ತುಂಬಿಸಲಾಗುತ್ತಿದ್ದು, ಈ ಮಾರ್ಗದಲ್ಲಿ ನೀರು ಹರಿಯುತ್ತಿದೆ. ಜತೆಗೆ ಚೆಕ್ ಡ್ಯಾಂಗಳಲ್ಲಿ ನೀರು ಭರ್ತಿಯಾಗಿದೆ.
ಇದೀಗ ಬೇಸಿಗೆ ಹಿನ್ನೆಲೆಯಲ್ಲಿ ಸುತ್ತಮುತ್ತಲ ಗ್ರಾಮದ ಜನರು ಇಲ್ಲಿಗೆ ಈಜಲು ಆಗಮಿಸುತ್ತಾರೆ. ಇದರಲ್ಲಿ ಕೆಲವರು ನೀರು ಭರ್ತಿಯಾಗಿರುವ ಚೆಕ್ ಡ್ಯಾಂ ಅನ್ನು ಕುಡುಕರ ಅಡ್ಡೆಯನ್ನಾಗಿಸಿಕೊಂಡು ಮೋಜು, ಮಸ್ತಿಯಲ್ಲಿ ತೊಡಗುತ್ತಿದ್ದಾರೆ. ಇದರ ಪರಿಣಾಮ ಕಳೆದ 3 ದಿನಗಳಿಂದ ಆಸುಪಾಸಿನ ಜಮೀನುಗಳಿಗೆ ಯಾರು ಇಲ್ಲದ ವೇಳೆ ತೆರಳಿ ಪರಂಗಿ, ಕಲ್ಲಂಗಡಿ, ಸೀಬೆ ಹಾಗೂ ಇತರ ಹಣ್ಣಿನ ಗಿಡಗಳನ್ನು ನಾಶಪಡಿಸುತ್ತಿದ್ದಾರೆ.
ಇದರಿಂದ ರೈತರು ನಷ್ಟವನ್ನು ಅನುಭವಿಸುವಂತಾಗಿದೆ. ಆದ್ದರಿಂದ ಪೊಲೀಸ್ ಇಲಾಖೆಯ ಅಧಿಕಾರಿಗಳು ಇತ್ತ ಗಮನಹರಿಸಿ ಕಿಡಿಗೇಡಿಗಳ ಕೃತ್ಯಕ್ಕೆ ಕಡಿವಾಣ ಹಾಕುವುದರ ಜತೆಗೆ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಗ್ರಾಮದ ಮಾದೇಶ್ ಒತ್ತಾಯಿಸಿದ್ದಾರೆ.