ಗುಂಡ್ಲುಪೇಟೆ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಗಣೇಶ್ ಪ್ರಸಾದ್ ಉದ್ಘಾಟಿಸಿದರು. ಬಿ.ಕುಮಾರಸ್ವಾಮಿ, ಡಾ.ಮಹಮದ್ ಸೌಗರ್, ಎಚ್.ಎಸ್.ನಂಜುಂಡಪ್ರಸಾದ್, ಪಿ.ಚನ್ನಪ್ಪ, ಮಹೇಶ್, ಮಾದಪ್ಪ, ಗೌಡಿಕೆ ಮಾಧು, ಮಹದೇವಪ್ಪ, ಬಸವಯ್ಯ ಇದ್ದರು. 
ಚಾಮರಾಜನಗರ

ಗ್ರಾಮೀಣ ಸಂಸ್ಕೃತಿ, ಕಲೆಗಳನ್ನು ಶಿಬಿರಾರ್ಥಿಗಳು ಅರ್ಥೈಸಿಕೊಳ್ಳಲಿ

ಪ್ರಮುಖ ಮುಖ್ಯಾಂಶಗಳು

  • ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಆಶಯ
ಗುಂಡ್ಲುಪೇಟೆ: ರಾಷ್ಟ್ರೀಯ ಸೇವಾ ಯೋಜನೆ ಮೂಲಕ ವಿದ್ಯಾರ್ಥಿಗಳಿಗೆ ಗ್ರಾಮೀಣ ಸ್ಥಿತಿಗತಿ ಹಾಗೂ ಗ್ರಾಮೀಣರ ಪರಿಸ್ಥಿತಿಗಳ ಪರಿಚಯ ಮಾಡಿಕೊಡಲಾಗುವುದು ಎಂದು ಶಾಸಕ ಎಚ್.ಎಂ.ಗಣೇಶ್ ಪ್ರಸಾದ್ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ವತಿಯಿಂದ ತಾಲೂಕಿನ ಮಳವಳ್ಳಿ ಗ್ರಾಮದಲ್ಲಿ ಮಂಗಳವಾರ ಆಯೋಜಿಸಿದ್ದ ರಾಷ್ಟ್ರೀಯಸೇವಾ ಯೋಜನೆಯ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಬಹುತೇಕ ಗ್ರಾಮಗಳಲ್ಲಿ ಇನ್ನೂ ಮೂಲಸೌಕರ್ಯ ಕೊರತೆ ಇದೆ. ಹಿಂದೆ ಗ್ರಾಮಾಂತರ ಪ್ರದೇಶಗಳಲ್ಲಿ ನೀರು ಹಾಗೂ ವಿದ್ಯುತ್ ಸಂಪರ್ಕ ಇಲ್ಲದಿದ್ದರೂ ಜನರಲ್ಲಿ ಪರಸ್ಪರ ಬಾಂಧವ್ಯ ಉತ್ತಮವಾಗಿತ್ತು. ಆದರೆ ಇತ್ತೀಚೆಗೆ ಆಧುನಿಕತೆ ಹಾಗೂ ನಾನಾ ಅಭಿವೃದ್ಧಿ ಕಾರ್ಯಗಳಿಂದ ಗ್ರಾಮೀಣ ಸೊಗಡು ಮಾಯವಾಗಿ ಬಾಂಧವ್ಯಕ್ಕೆ ಧಕ್ಕೆಯಾಗುತ್ತಿದೆ. ಆದ್ದರಿಂದ ಪದವಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಶಿಬಿರಾರ್ಥಿಗಳು ಗ್ರಾಮಾಂತರ ಪ್ರದೇಶಗಳ ಸಂಸ್ಕೃತಿ ಹಾಗೂ ಕಲೆಗಳನ್ನು ಅರ್ಥೈಸಿಕೊಳ್ಳಬೇಕಾಗಿದೆ ಎಂದರು.
ಗ್ರಾಮಾಂತರ ಪ್ರದೇಶಗಳಲ್ಲಿ ದೀರ್ಘಕಾಲದಿಂದ ಸಂಗ್ರಹಿಸಿದ ನೀರು ಹಾಗೂ ತಾಜಾತನ ಇಲ್ಲದ ಆಹಾರದಿಂದಲೇ ಅನಾರೋಗ್ಯದ ಸಮಸ್ಯೆಗಳು ಬರುತ್ತಿವೆ. ಹಾಗಾಗಿ ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಾರ್ಥಿಗಳು ಜನರಿಗೆ ಆರೋಗ್ಯ, ಸ್ವಚ್ಛತೆ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಬಿ.ಕುಮಾರಸ್ವಾಮಿ, ನೇನೆಕಟ್ಟೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹಮದ್ ಸೌಗರ್, ಚಾಮುಲ್ ನಿರ್ದೇಶಕ ಎಚ್.ಎಸ್.ನಂಜುಂಡಪ್ರಸಾದ್, ಜಿಪಂ ಮಾಜಿ ಸದಸ್ಯ ಪಿ.ಚನ್ನಪ್ಪ, ಮಹೇಶ್, ಮಾದಪ್ಪ, ಗೌಡಿಕೆ ಮಾಧು, ಮಹದೇವಪ್ಪ, ಬಸವಯ್ಯ ಹಲವರು ಇದ್ದರು.