ಚಾಮರಾಜನಗರದ ತಾಲೂಕಿನ ಹರದನಹಳ್ಳಿ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಳೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ.ದೊರೆಸ್ವಾಮಿ ಉದ್ಘಾಟಿಸಿದರು. ಡಾ. ಎನ್.ಟಿ.ನರೇಶ್, ಡಾ. ಸಿ. ರಾಮಚಂದ್ರ, ಡಾ. ಬಿ.ಪೊಂಪನಗೌಡ ಇತರರಿದ್ದರು. 
ಚಾಮರಾಜನಗರ

ಬಾಳೆ ಗ್ರಾಹಕರ ಸಂಪರ್ಕಕ್ಕೆ ತಂತ್ರಜ್ಞಾನ ಬಳಕೆಯಾಗಲಿ

ಪ್ರಮುಖ ಮುಖ್ಯಾಂಶಗಳು

  • ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ.ದೊರೆಸ್ವಾಮಿ ಸಲಹೆ
  • ಜಿಲ್ಲಾಮಟ್ಟದ ಬಾಳೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮ
ಚಾಮರಾಜನಗರ: ಬಾಳೆ ಬೆೆಳೆಗಾರರು ಹಾಗೂ ಗ್ರಾಹಕರ ನಡುವಿನ ಅಂತರವನ್ನು ಕಡಿಮೆ ಮಾಡುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಬೇಕು ಎಂದು ಕೃಷಿ ಮಹಾ ವಿದ್ಯಾಲಯದ ವಿಶೇಷಾಧಿಕಾರಿ ಡಾ.ಸಿ.ದೊರೆಸ್ವಾಮಿ ತಿಳಿಸಿದರು.
ತಾಲೂಕಿನ ಹರದನಹಳ್ಳಿ ಸಮೀಪದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಮಂಡ್ಯ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಅಖಿಲ ಭಾರತೀಯ ಸಮನ್ವಯ ಸಂಶೋಧನಾ ಯೋಜನೆ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಬಾಳೆ ಬೆಳೆ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಾಳೆ ಬೆಳೆಗಾರರಿಗೆ ಗ್ರಾಹಕರು ನೇರ ಸಂಪರ್ಕವಾಗಬೇಕು. ಈ ನಿಟ್ಟಿನಲ್ಲಿ ತಂತ್ರಜ್ಞಾನಗಳನ್ನು ಬಳಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಎನ್.ಟಿ.ನರೇಶ್ ಮಾತನಾಡಿ, ಪ್ರಸ್ತುತ ಬಾಳೆ ಬೆಳೆ ಇಳುವರಿ ಹೆಚ್ಚಿಸುವಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿಗಳ ಸಲಹೆ ಮೇರೆಗೆ ವೈಜ್ಞಾನಿಕ ತಾಂತ್ರಿಕತೆಗಳನ್ನು ಅಳವಡಿಸಿಕೊಳುವಂತೆ ತಿಳಿಸಿದರು. ಮಂಡ್ಯದ ಕೃಷಿ ವಿಶ್ವ ವಿದ್ಯಾಲಯದ ವಿಸ್ತರಣಾ ನಿರ್ದೇಶಕ ಡಾ. ಸಿ. ರಾಮಚಂದ್ರ ಮಾತನಾಡಿ, ಸಮಗ್ರ ಬೇಸಾಯ ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳ ಬಳಕೆ ಮಣ್ಣು ಪರೀಕ್ಷಾ ಆಧಾರಿತ ರಸ ಗೊಬ್ಬರಗಳ ಬಳಕೆಯ ಮುಖ್ಯ ಎಂದರು.
ಕೇಂದ್ರದ ಹಿರಿಯ ತಾಂತ್ರಿಕ ಅಧಿಕಾರಿ ಡಾ. ಬಿ.ಪೊಂಪನಗೌಡ ಮಾತನಾಡಿ, ಉತ್ತಮ ಬಾಳೆಯ ಇಳುವರಿಗಾಗಿ ರೋಗ ಮುಕ್ತ ತಾಕುಗಳ ಆಯ್ಕೆ, ರೋಗ ರಹಿತ ಕಂದುಗಳ ಆಯ್ಕೆ, ನಾಟಿಯ ದಿವಸ ಸಗಣಿ ರಾಡಿಯಲ್ಲಿ ಅದ್ದುವಿಕೆ, ಕಂದು ನಾಟಿ ಮಾಡುವಾಗ ಮೌಲ್ಯವರ್ಧಿತ ಗೊಬ್ಬರದ ಬಳಕೆ, ನಂತರ ಪ್ರತಿ 2 ತಿಂಗಳಿಗೊಮ್ಮೆ ಟ್ರೈಕೋಡರ್ಮಾ, ಸೂಡೋಮೋನಾಸ್ ಮತ್ತು ಪೆಸಿಲೋಮೈಸಿಸ್ ಬಳಕೆ, ಬೇವಿನ ಹಿಂಡಿ ಬಳಕೆ, ಗೊಬ್ಬರಗಳನ್ನು ಮಣ್ಣು ಪರೀಕ್ಷೆಯ ಆಧಾರದ ಮೇಲೆ ಬಳಕೆ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲೆಯ ಎಲ್ಲ ತಾಲ್ಲೂಕುಗಳಿಂದ 210ಕ್ಕೂ ಅಧಿಕ ರೈತರು ಭಾಗವಹಿಸಿದರು. ಇದೇ ವೇಳೆ ಬಾಳೆದಿಂಡಿನ ಮೌಲ್ಯವರ್ಧಿತ ಉತ್ಪನ್ನಗಳು, ಬಾಳೆ ಅಂಗಾಂಶ ಕೃಷಿ ಸಸಿಗಳು ಮತ್ತು ಕೃಷಿ ಪರಿಕರಗಳ ಪ್ರದರ್ಶನ ಏರ್ಪಡಿಸಲಾಗಿತ್ತು.
ಕೇಂದ್ರದ ಗೃಹ ವಿಜ್ಞಾನಿ ಡಾ. ಜೆ.ದೀಪಾ, ತೋಟಗಾರಿಕೆ ವಿಜ್ಞಾನಿ ಡಾ. ಮೋಹನ್‌ಕುಮಾರ್, ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ ವಿಜ್ಞಾನಿ ಡಾ. ಹನಮಂತಪ್ಪ ಮೇಟಿ, ರೇಷ್ಮೆ ಕೃಷಿ ವಿಜ್ಞಾನಿ ಡಾ. ಚಂದ್ರಶೇಖರ್, ಎಸ್. ಕಳ್ಳೀಮನಿ, ಬೇಸಾಯಶಾಸ್ತ್ರ ವಿಜ್ಞಾನಿ ಡಾ.ಶೃತಿ ಮತ್ತು ಕೆ.ವಿ.ಕೆ ಸಿಬ್ಬಂದಿ ಹಾಜರಿದ್ದರು.