ಕೊಳ್ಳೇಗಾಲ ಪಟ್ಟಣದ ಶ್ರೀಮಹದೇಶ್ವರ ಕ್ರೀಡಾಂಗಣದಲ್ಲಿ ಬುಧವಾರ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕಿ ಎಚ್.ಎನ್.ಪುಟ್ಟ ಗೌರಮ್ಮ ಚಾಲನೆ ನೀಡಿದರು. ರಾಜೇಂದ್ರ, ಮಂಜುಳಾ, ಅಲೆಗ್ಸಾಂಡರ್ ಇತರರು ಇದ್ದರು.
- ಎಚ್.ಎನ್.ಪುಟ್ಟಗೌರಮ್ಮ ಆಶಯ
- ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟಕ್ಕೆ ಚಾಲನೆ
ಕೊಳ್ಳೇಗಾಲ": ಮಕ್ಕಳು ಮೊಬೈಲ್ ವ್ಯಸನದಿಂದ ದೂರವಾಗಬೇಕಾದರೆ ಕ್ರೀಡೆಯಿಂದ ಮಾತ್ರ ಸಾಧ್ಯ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಚ್.ಎನ್.ಪುಟ್ಟಗೌರಮ್ಮ ಹೇಳಿದರು.
ಪಟ್ಟಣದ ಶ್ರೀ ಮಹದೇಶ್ವರ ಕ್ರೀಡಾಂಗಣದಲ್ಲಿ ಬುಧವಾರ ಲಯನ್ಸ್ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಪದವಿ ಪೂರ್ವ ಕಾಲೇಜುಗಳ ತಾಲೂಕುಮಟ್ಟದ ಕ್ರೀಡಾಕೂಟದಲ್ಲಿ ಮಾತನಾಡಿದರು.
ಕ್ರೀಡೆ ಶಿಕ್ಷಣದ ಅವಿಭಾಜ್ಯ ಅಂಗವಾಗಿದೆ. ಪ್ರಾಥಮಿಕ ಶಿಕ್ಷಣದ ಹಂತದಲ್ಲಿಯೇ ಮಕ್ಕಳನ್ನು ಕ್ರೀಡೆಯಲ್ಲಿ ತೊಡಗಿಸಬೇಕು. ಕ್ರೀಡಾ ಪ್ರತಿಭೆಗಳನ್ನು ಗುರುತಿಸಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಕೊಂಡೊಯ್ಯ ಬೇಕು. ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಕ್ರೀಡೆ ಸಹಕಾರಿಯಾಗಿದೆ. ಕ್ರೀಡಾ ಹವ್ಯಾಸವನ್ನು ಜೀವನದ ಅಂಗವಾಗಿ ಬೆಳೆಸಿಕೊಂಡು ಸಮಾಜದ ಸಂಪನ್ಮೂಲವಾಗಿ ಬಳಸಿಕೊಳ್ಳಬೇಕು ಎಂದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಾಜೇಂದ್ರ ಮಾತನಾಡಿ, ಕೊಳ್ಳೇಗಾಲ ತಾಲೂಕಿನಲ್ಲಿ ಕ್ರೀಡಾ ಆಸಕ್ತಿ ಹೊಂದಿರುವ ಮಕ್ಕಳಿದ್ದಾರೆ. ಶಾಲಾ ಹಂತದಲ್ಲಿ ಇಂತಹ ಪ್ರತಿಭೆಗಳಿಗೆ ಅವಕಾಶಗಳು ಸಿಗಬೇಕು ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುಳಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎ.ಜೋಸೆಫ್ ಅಲೆಕ್ಸಾಂಡರ್, ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷ ಪ್ರಿಯ ಶಂಕರ್, ಲಯನ್ಸ್ ಶಿಕ್ಷಣ ಸಂಸ್ಥೆ ಅಧ್ಯಕ್ಷ ಬಿ.ಎಂ.ಪುಟ್ಟಮಾದಪ್ಪ, ಕಾರ್ಯದರ್ಶಿ ಕೆ.ವಿ.ವೆಂಕಟೇಶ್, ಖಜಾಂಚಿ ಎಸ್.ನಾಗರಾಜು, ಸತೀಶ್, ಲಯನ್ಸ್ ಕಾಲೇಜು ಪ್ರಾಂಶುಪಾಲ ಎನ್.ವಿನುತಾ, ಎಸ್.ವಿ.ಕೆ ಕಾಲೇಜು ಪ್ರಾಂಶುಪಾಲ ಡಾ.ಮಂಗಳಮೂರ್ತಿ, ವಾಸವಿ ಕಾಲೇಜು ಪ್ರಾಂಶುಪಾಲೆ ವಾಸವಾಂಬ, ನಿವೃತ್ತ ದೈಹಿಕ ಶಿಕ್ಷಣ ಪರಿವೀಕ್ಷಕ ಪ್ರಕಾಶ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್ ಇದ್ದರು.