ಕೊಳ್ಳೇಗಾಲದ ಶ್ರೀ ವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಹಿತ್ಯ ನಡಿಗೆ ಶಾಲಾ, ಕಾಲೇಜುಗಳ ಕಡೆಗೆ ಹಾಗೂ ಸಮುದಾಯದೆಡೆಗೆ ಸಮಾರೋಪ ಸಮಾರಂಭವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಉದ್ಘಾಟಿಸಿದರು. ಸೋಮಶೇಖರ್ ಬಿಸಲ್ವಾಡಿ, ಎಸ್.ನಾಗರಾಜು, ಬಸವರಾಜು, ಪ್ರೇಮಲತಾ ಕೃಷ್ಣಸ್ವಾಮಿ ಇತರರು ಇದ್ದರು.
- ಶಾಸಕ ಎ.ಆರ್. ಕೃಷ್ಣಮೂರ್ತಿ ಸಲಹೆ
- ಸಾಹಿತ್ಯ ನಡಿಗೆ ಶಾಲಾ, ಕಾಲೇಜುಗಳ ಕಡೆಗೆ ಸಮಾರೋಪ
ಕೊಳ್ಳೇಗಾಲ: ದೇಶಾಭಿಮಾನ ಮತ್ತು ಮಾತೃಭಾಷಾ ಅಭಿಮಾನವನ್ನು ಪ್ರತಿಯೊಬ್ಬರೂ ರೂಢಿಸಿಕೊಳ್ಳಬೇಕು ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಹೇಳಿದರು.
ಪಟ್ಟಣದ ಶ್ರೀವಿಶ್ವಚೇತನ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್, ಸಾರ್ವಜನಿಕ ಶಿಕ್ಷಣ ಇಲಾಖೆ, ಎಚ್.ಕೃಷ್ಣಸ್ವಾಮಿ ಚಾರಿಟಬಲ್ ಟ್ರಸ್ಟ್ ಹಾಗೂ ವಿಶ್ವ ಚೇತನ ಸಮೂಹ ವಿದ್ಯಾಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಿದ್ದ ಸಾಹಿತ್ಯ ನಡಿಗೆ ಶಾಲಾ, ಕಾಲೇಜುಗಳ ಕಡೆಗೆ ಹಾಗೂ ಸಮುದಾಯದೆಡೆಗೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಅನ್ಯ ರಾಜ್ಯಗಳಲ್ಲಿ ಅವರ ಭಾಷೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಾರೆ. ಸೂಚನ ಫಲಕಗಳಲ್ಲೂ ಅವರ ಭಾಷೆಯಲ್ಲಿಯೇ ಮಾಹಿತಿ ಹಾಕಿರುತ್ತಾರೆ. ಆದರೆ, ಕನ್ನಡಿಗರು ಧರ್ಮರಾಯರಂತಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ಕನ್ನಡಿಗರಿಗಿಂತ ಹೊರ ರಾಜ್ಯದವರೇ ಹೆಚ್ಚಿದ್ದಾರೆ. ಉದ್ಯೋಗ ಅವಕಾಶವನ್ನು ಬೇರೆ ರಾಜ್ಯದವರಿಗೆ ನೀಡಿದ್ದೇವೆ. ಹೊರ ರಾಜ್ಯದಿಂದ ಕೆಲಸಕ್ಕೆ ಬಂದವರು ಮಾಲೀಕರೇ ಆಗಿರುವ ಉದಾಹರಣೆಗಳಿವೆ. ಹಾಗಾಗಿ, ರಾಜ್ಯದಲ್ಲಿ ಮಾತೃಭಾಷೆಗೆ ಮೊದಲ ಆದ್ಯತೆ ನೀಡಬೇಕು ಎಂದು ಕಿವಿಮಾತು ಹೇಳಿದರು.
ಸಾಹಿತಿ ಸೋಮಶೇಖರ್ ಬಿಸಲ್ವಾಡಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ನಾಗರಾಜು, ತಹಸೀಲ್ದಾರ್ ಬಸವರಾಜು, ವಿಶ್ವ ಚೇತನ ವಿದ್ಯಾಸಂಸ್ಥೆ ಕಾರ್ಯದರ್ಶಿ ಪ್ರೇಮಲತಾ ಕೃಷ್ಣಸ್ವಾಮಿ, ನಿವೃತ್ತ ಶಿಕ್ಷಕರ ಸಂಘದ ಚನ್ನಮಾದೇಗೌಡ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜೋಸೆಫ್ ಅಲೆಕ್ಸಾಂಡರ್, ಬ್ಲಾಂಕ್ ಕಾಂಗ್ರೆಸ್ ಬಿ.ತೋಟೇಶ್, ಮುಖಂಡ ಚೇತನ್ ದೊರೈರಾಜು ಇತರರು ಇದ್ದರು.