ಚಾಮರಾಜನಗರದಲ್ಲಿ ಬುದ್ಧನ ಪ್ರತಿಮೆ ಮೆರವಣಿಗೆಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
- ಶಾಸಕ ಸಿ.ಪುಟ್ಟರಂಗಶೆಟ್ಟಿ ಆಶಯ
- ಸಂಭ್ರಮದ ಭಗವಾನ್ ಬುದ್ಧ ಜಯಂತಿ
ಚಾಮರಾಜನಗರ: ಬುದ್ಧ ವಂದನೆ.. ಬುದ್ಧ ಪ್ರತಿಮೆಯ ಆಕರ್ಷಕ ಸ್ತಬ್ಧಚಿತ್ರದ ಮೆರವಣಿಗೆ.. ಬುದ್ಧ ಗೀತ ಗಾಯನದಂತಹ ಸ್ಮರಣೀಯ ಕಾರ್ಯಕ್ರಮಗಳ ಮೂಲಕ ನಗರದಲ್ಲಿ ಭಗವಾನ್ ಬುದ್ಧ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ 2570ನೇ ಬುದ್ಧ ಪೂರ್ಣಿಮೆ ಅಂಗವಾಗಿ ಆಯೋಜಿಸಿದ್ದ ಭಗವಾನ್ ಬುದ್ಧ ಜಯಂತಿ ಮೆರವಣಿಗೆಗೆ ನಗರದ ಕರಿನಂಜನಪುರ ರಸ್ತೆಯಲ್ಲಿರುವ ಸಾರನಾಥ ಬೌದ್ಧ ವಿಹಾರ ಅವರಣದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು.
ಮಹಾರಾಜ ಶುದ್ದೋಧನ ಹಾಗೂ ಮಾಯಾವತಿ ದಂಪತಿ ಪುತ್ರನಾದ ಬುದ್ಧ ವೈಭವಯುತ ಜೀವನ ತೊರೆದು ಲುಂಬಿನಿವನದ ಬೋಧಿವೃಕ್ಷದ ಕೆಳಗೆ ಧ್ಯಾನಸಕ್ತರಾಗಿ ಕುಳಿತು ಜ್ಞಾನೋದಯ ಪಡೆದರು. ಮಾನವಕುಲದ ಉದ್ಧಾರಕ್ಕಾಗಿ ಮಾನವೀಯ ಮೌಲ್ಯವುಳ್ಳ ವಿಚಾರಧಾರೆಗಳನ್ನು ಜಗತ್ತಿಗೆ ಪ್ರಸ್ತುತಪಡಿಸಿದರು. ಎಲ್ಲ ಧರ್ಮಗಳ ಸಾರವು ಒಂದೇಯಾಗಿದ್ದು, ಅದೇ ಮಾನವಕುಲದ ಒಳಿತು ಆಗಿದೆ. ಸಕಲ ಜೀವರಾಶಿಗಳನ್ನು ಸಮನಾಗಿ ಕಂಡ ಬೌದ್ಧ ಧರ್ಮದ ಸಾರವನ್ನು ನಾವೆಲ್ಲರೂ ಅರಿಯಬೇಕು. ಎಲ್ಲರೂ ಬುದ್ಧಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ಬಳಿಕ ಜಿಲ್ಲಾಡಳಿತ ಭವನದ ವರನಟ ಡಾ. ರಾಜ್ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಆಯೋಜಿಸಿದ್ದ ವೇದಿಕೆ ಕಾರ್ಯಕ್ರಮವನ್ನು ಬೋಧಿವೃಕ್ಷಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಮಹಮದ್ ಅಸ್ಗರ್, ಆಶಾಂತಿಯಿಂದ ಕೂಡಿರುವ ಜಗತ್ತಿಗೆ ಬುದ್ಧನ ಸಂದೇಶ, ವಿಚಾರಧಾರೆಗಳು ದಾರಿದೀಪವಾಗಿವೆ. ಅವರ ಆದರ್ಶ ತತ್ವಗಳನ್ನು ಸಮಾಜಕ್ಕೆ ಪಸರಿಸಬೇಕಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹೆಚ್ಚುವರಿ ಜಿಲ್ಲಾಧಿಕಾರಿ ಟಿ. ಜವರೇಗೌಡ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ಸೇರಿದಂತೆ ದೇಶದ ಎಲ್ಲ ಮಹಾತ್ಮರ ಸಂದೇಶಗಳು ಒಂದೇ ಆಗಿವೆ. ಅದು ಮಾನವ ಕಲ್ಯಾಣ ಮಾತ್ರವೇ ಆಗಿದೆ. ಪ್ರತಿಯೊಬ್ಬರೂ ಶಾಂತಿ, ನೆಮ್ಮದಿಗಾಗಿ ಬುದ್ಧನ ತತ್ವಾದರ್ಶಗಳನ್ನು ನಿತ್ಯ ಸ್ಮರಿಸಬೇಕಾಗಿದೆ. ಅವರನ್ನು ಆಚರಣೆ ಮಾಡುವುದಲ್ಲ, ಬದಲಾಗಿ ಓದಿ ತಿಳಿಯಬೇಕು ಎಂದು ಹೇಳಿದರು.
ಕಲಬುರ್ಗಿ ಜನಪರ ವೇದಿಕೆಯ ಬೌದ್ಧ ವಿಚಾರವಾದಿ ಜೀತೇಂದ್ರ ಕೆ.ತಳವಾರ್ ಮಾತನಾಡಿ, ನಿನಗೆ ನೀನೆ ಬೆಳಕು ಎಂಬುದನ್ನು ಜಗತ್ತಿಗೆ ಸಾರಿದ ಬುದ್ಧ ಈ ಜಗದ ಬೆಳಕಾಗಿದ್ದಾರೆ. ಬುದ್ಧ, ಬಸವ, ಅಂಬೇಡ್ಕರ್‌ರ ವಿಚಾರಧಾರೆಗಳು ಜಗತ್ತಿಗೆ ಬೆಳಕು ನೀಡಿವೆ. ಅವುಗಳನ್ನು ಓದಿ ಅರಿತಾಗ ಮಾತ್ರ ಅವರ ಸಂದೇಶಗಳು ಜೀವಂತಿಕೆ ಪಡೆಯಲಿವೆ ಎಂದರು.
ಜಗತ್ತು ಇಂದು ಅಸ್ಥಿರತೆಯಿಂದ ಕೂಡಿದ್ದು, ಬುದ್ಧನನ್ನು ಸರಿಯಾಗಿ ಅರ್ಥೈಸಿಕೊಂಡಿಲ್ಲದಿರುವುದೇ ಇದಕ್ಕೆ ಸಾಕ್ಷಿ. ಸಾರ್ವಕಾಲಿಕ ವಾಗಿರುವ ಬುದ್ಧನ ಪಂಚಶೀಲ ತತ್ವಗಳನ್ನು ಜಗತ್ತು ಅರಿಯಬೇಕು. ಬುದ್ಧನ ಸಂದೇಶ, ಬಸವಣ್ಣನವರ ವಚನಗಳ ಸಾರವನ್ನು ಅಂಬೇಡ್ಕರ್ ಸಂವಿಧಾನದಲ್ಲಿ ಅಡಕಗೊಳಿಸಿದ್ದಾರೆ. ಅದಕ್ಕಾಗಿ ಸದೃಢ ಪ್ರಜಾಪ್ರಭುತ್ವ ಸುಭದ್ರವಾಗಿದೆ ಎಂದರು.
ರಾಮಸಮುದ್ರದ ಮಹೇಶ್ ಮತ್ತು ತಂಡ ನಡೆಸಿಕೊಟ್ಟ ಬುದ್ಧ ಗೀತಗಾಯನ ಎಲ್ಲರ ಗಮನ ಸೆಳೆಯಿತು. ವೇದಿಕೆ ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಮೆರವಣಗೆಯಲ್ಲಿ 350 ಅಡಿ ಉದ್ದದ ಬುದ್ಧಧ್ವಜ ಪ್ರದರ್ಶನ ವಿಶೇಷವಾಗಿತ್ತು. ಜಿಲ್ಲಾಡಳಿತ ಭವನದ ಮುಂಭಾಗದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಗಣ್ಯರು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.
ಕೊಳ್ಳೇಗಾಲ ತಾಲೂಕಿನ ಚೆನ್ನಲಿಂಗನಹಳ್ಳಿಯ ಜೀತವನ ಬುದ್ಧ ವಿಹಾರದ ಮನೋರಖ್ಖಿತ ಥೇರಾ ಬಂತೇಜಿ ಆಶೀರ್ವಚನ ನೀಡಿದರು. ನಗರಸಭೆ ಪೌರಾಯುಕ್ತ ಪರಶುರಾಮ್ ಛಲವಾದಿ, ಜಿಲ್ಲಾ ಪಂಚಾಯಿತಿ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿದೇಶಕರಾದ ರಾಜು, ಭಾರತೀಯ ಬೌದ್ಧ ಮಹಾಸಬಾ ಅಧ್ಯಕ್ಷ ಬಸವರಾಜು, ಜನಪದ ಗಾಯಕರಾದ ಸಿ.ಎಂ. ನರಸಿಂಹಮೂರ್ತಿ ಇತರರಿದ್ದರು.