ಹನೂರಿನಲ್ಲಿ ಜನಗಣತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಮೇಲ್ವಿಚಾರಕರು ಹಾಗೂ ಗಣತಿದಾರರನ್ನು ಜಿಲ್ಲಾಧಿಕಾರಿ ಶ್ರೀರೂಪಾ ಸನ್ಮಾನಿಸಿದರು. ದಿನೇಶ್ ಕುಮಾರ್ ಮೀನಾ, ಕೆ.ಎನ್ ಚೈತ್ರಾ, ರೇಖಾ ಇತರರಿದ್ದರು. 
ಚಾಮರಾಜನಗರ

ಮಕ್ಕಳು ಶಿಕ್ಷಣದಿಂದ ವಂಚಿತರಾಗದಿರಲಿ

ಪ್ರಮುಖ ಮುಖ್ಯಾಂಶಗಳು

  • education
ಹನೂರು: ಯಾವುದೇ ಮಗು ಶಾಲೆಯಿಂದ ಹೊರಗುಳಿಯದಂತೆ ಅಗತ್ಯ ಕ್ರಮವಹಿಸುವುದರ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ತಿಳಿಸಿದರು.
ಪಟ್ಟಣದ ಲೋಕೋಪಯೋಗಿ ಇಲಾಖೆಯ ಅತಿಥಿ ಗೃಹದ ಸಭಾಂಗಣದಲ್ಲಿ ಮಂಗಳವಾರ ಜನಗಣತಿಯಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶಿಕ್ಷಣ ಮಕ್ಕಳ ಹಕ್ಕು. ಇದನ್ನು ನೀಡುವುದು ನಮ್ಮೆಲ್ಲರ ಜವಬ್ದಾರಿ. ಈ ದೆಸೆಯಲ್ಲಿ ಕಡ್ಡಾಯ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಸರ್ಕಾರ ಮಕ್ಕಳಿಗೆ ಹಲವು ಸವಲತ್ತುಗಳನ್ನು ಒದಗಿಸುವುದರ ಮೂಲಕ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಿದೆ. ಆದ್ದರಿಂದ ಗುಡ್ಡಗಾಡು ಪ್ರದೇಶದಿಂದ ಕೂಡಿರುವ ಹನೂರು ವಲಯದಲ್ಲಿ ಯಾವುದೇ ಮಗು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಹೊರಗುಳಿದಿರುವ ಮಗುವನ್ನು ಗುರುತಿಸಿ ಶಾಲೆಗೆ ಕರೆ ತರಬೇಕು. ಎಸ್ಸೆಸ್ಸೆಲ್ಸಿ ಬಳಿಕ ಮುಂದಿನ ಶಿಕ್ಷಣವನ್ನು ಪಡೆಯಲು ವಿದ್ಯಾರ್ಥಿಗಳಿಗೆ ಅಗತ್ಯ ಮಾರ್ಗದರ್ಶನ ನೀಡಬೇಕು. ಶಿಕ್ಷಣದ ಮಹತ್ವ ಹಾಗೂ ಬಾಲ್ಯ ವಿವಾಹದಿಂದಾಗುವ ದುಷ್ಟರಿಣಾಮದ ಬಗ್ಗೆ ಪಾಲಕರಲ್ಲಿ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಹಾಸ್ಟೆಲ್ ಸೌಕರ್ಯದ ಭರವಸೆ:
ಇದೇ ವೇಳೆ ಬಿಆರ್‌ಸಿ ವೆಂಕಟೇಶ್ ಮಾತನಾಡಿ, ಶೈಕ್ಷಣಿಕ ವಲಯದ 10 ಶಾಲೆಗಳಲ್ಲಿ ವಿಜ್ಞಾನ ಹಾಗೂ ಇಂಗ್ಲಿಷ್ ಶಿಕ್ಷಕರ ಕೊರತೆ ಇದೆ. ಪಟ್ಟಣದಲ್ಲಿ ಬಿಸಿಎಂ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ನಿಲಯ ಅಗತ್ಯವಿದೆ ಎಂದು ತಿಳಿಸಿದರೆ, ಶಿಕ್ಷಕ ರಂಗಸ್ವಾಮಿ ಮಾತನಾಡಿ, ಮಲೆಮಹದೇಶ್ವರ ಬೆಟ್ಟ ತಪ್ಪಲಿನ ಗ್ರಾಮಗಳಲ್ಲಿ 6 ರಿಂದ 10ನೇ ತರಗತಿಯ ಸುಮಾರು 40ಕ್ಕೂ ಹೆಚ್ಚು ಮಕ್ಕಳು ಮ.ಬೆಟ್ಟದ ಶಾಲೆಗಳಿಗೆ ತೆರಳುತ್ತಿದ್ದಾರೆ. ಆದರೆ ಹಾಸ್ಟೆಲ್ ಸೌಕರ್ಯವಿಲ್ಲದ ಪರಿಣಾಮ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಇತ್ತ ಇದೀಗ ಈ ಭಾಗದಲ್ಲಿ ಚಿರತೆ ಹಾವಳಿಯಿಂದ ವಿದ್ಯಾರ್ಥಿಗಳು ಭಯಬೀತರಾಗಿದ್ದಾರೆ. ಆದ್ದರಿಂದ ಮ.ಬೆಟ್ಟದಲ್ಲಿ ಹಾಸ್ಟೆಲ್ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿದರು. ಇದಕ್ಕೆ ಜಿಲ್ಲಾಧಿಕಾರಿ ಅವರು ಪ್ರತಿಕ್ರಿಯಿಸಿ, ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದೊಂದಿಗೆ ಚರ್ಚಿಸಿ ಸದ್ಯದಲ್ಲಿಯೇ ಹಾಸ್ಟೆಲ್ ಸೌಕರ್ಯ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಗಣತಿದಾರರಿಗೆ ಸನ್ಮಾನ:
ಇದಕ್ಕೂ ಮುನ್ನ ಜನಗಣತಿಯಲ್ಲಿ ಉತ್ತಮವಾಗಿ ಕಾರ್ಯಹಿಸಿದ ಮೇಲ್ವಿಚಾರಕರಾದ ವೆಂಕಟೇಶ್, ಮಹದೇವಸ್ವಾಮಿ, ರಾಕೇಶ್ ಕಿರಣ್, ಚಿನ್ನಪ್ಪಯ್ಯ, ವೆಂಕಟರಾಜು, ಗಣತಿದಾರ ಶಿಕ್ಷಕರಾದ ನಾಗೇಶ್, ರಂಗಸ್ವಾಮಿ, ಮಾರ್ಗರೆಟ್ ಜಯರಾಣಿ, ಸಂತೋಷ್ ಹಾಗೂ ಮಂಜು ಅವರನ್ನು ಸನ್ಮಾನಿಸಲಾಯಿತು. ಉಪ ವಿಭಾಗಾಧಿಕಾರಿ ದಿನೇಶ್‌ಕುಮಾರ್ ಮೀನಾ, ತಹಸೀಲ್ದಾರ್ ಕೆ.ಎನ್ ಚೈತ್ರಾ, ಉಪ ತಹಸೀಲ್ದಾರ್ ಸುರೇಖಾ, ಪಪಂ ಮುಖ್ಯಾಧಿಕಾರಿ ರೇಖಾ, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಇದ್ದರು.