ಸೂಳೆಕೋಬೆಯಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಸೆರೆಯಾದ ಚಿರತೆ.
ಹನೂರು: ತಾಲೂಕಿನ ಮಿಣ್ಯಂ ಸಮೀಪದ ತಟ್ಟೆಕೆರೆ ದೊಡ್ಡಿಯಲ್ಲಿ ಅಜ್ಜಿ ಹಾಗೂ ಮೊಮ್ಮಗಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿದ್ದ ಚಿರತೆ ಶುಕ್ರವಾರ ರಾತ್ರಿ ಸೂಳೆಕೋಬೆ ಗ್ರಾಮದಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಸೆರೆಯಾಗಿದೆ.
ಈ ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಜು.4 ರಂದು ತಟ್ಟೆಕೆರೆ ದೊಡ್ಡಿಯ ಮನೆಯ ಹತ್ತಿರ ಲಗ್ಗೆ ಇಟ್ಟ ಚಿರತೆ ಅಜ್ಜಿ ಶಿವಮ್ಮ ಹಾಗೂ ಮೊಮ್ಮಗಳಾದ ಹರ್ಷಿತಾಳ ಮೇಲೆ ದಾಳಿ ನಡೆಸಿ ಗಾಯಗೊಳಿಸಿತ್ತು. ಜತೆಗೆ ಜು.6 ರಂದು ಕೆಳಗೊಬ್ಬೆ ಗ್ರಾಮದಲ್ಲಿ ಮನೆಯ ಮುಂಭಾಗ ಕಟ್ಟಿ ಹಾಕಿದ್ದ ನಾಯಿಯನ್ನು ಎತ್ತೋಯ್ದಿತ್ತು. ಅಲ್ಲದೇ ಸೂಳೆಕೋಬೆ ಭಾಗದಲ್ಲಿ ಚಿರತೆ ಓಡಾಟವಿತ್ತು. ಇದರಿಂದ ಈ ಭಾಗದ ಜನರು ಭಯಬೀತರಾಗಿದ್ದರು. ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸುವಂತೆ ಶಾಸಕ ಎಂ.ಆರ್ ಮಂಜುನಾಥ್ ಅವರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದರು.
ಈ ಹಿನ್ನೆಲೆ ಸೂಳೆಕೋಬೆಯಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಚಿರತೆ ರಾತ್ರಿ ಸೆರೆಯಾಗಿದ್ದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರಕ್ಕೆ ಬಿಡಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.