ತಾಳುಬೆಟ್ಟದ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಕಾಣಿಸಿಕೊಂಡ ಚಿರತೆ.  
ಚಾಮರಾಜನಗರ

ಮ.ಬೆಟ್ಟ-ತಾ.ಬೆಟ್ಟ ಮಾರ್ಗದಲ್ಲಿ ಚಿರತೆ ಪ್ರತ್ಯಕ್ಷ

ನಾಗೇಶ ಎಸ್
ಹನೂರು: ತಾಲೂಕಿನ ಮಲೆಮಹದೇಶ್ವರ ಬೆಟ್ಟ - ತಾಳುಬೆಟ್ಟ ಮಾರ್ಗದ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಮತ್ತೆ ಚಿರತೆ ಕಾಣಿಸಿಕೊಂಡಿದ್ದು, ಭಕ್ತರಲ್ಲಿ ಮತ್ತಷ್ಟು ಭಯವನ್ನು ಉಂಟು ಮಾಡಿದೆ.
ಕಳೆದ ತಿಂಗಳು ಜ.21 ರಂದು ತಾಳುಬೆಟ್ಟದ ರಂಗಸ್ವಾಮಿ ಒಡ್ಡುವಿನ ಬಳಿಯ ಮೆಟ್ಟಿಲುಗಳ ಮೂಲಕ ತೆರಳುತ್ತಿದ್ದ ಕಾಲ್ನಡಿಗೆ ಭಕ್ತ ಮಂಡ್ಯದ ಚೀರನಹಳ್ಳಿ ಗ್ರಾಮದ ಪ್ರವೀಣ್ ಎಂಬುವರು ಚಿರತೆ ದಾಳಿಗೆ ಬಲಿಯಾಗಿದ್ದರು. ಜತೆಗೆ ಫೆ.10 ರಂದು ಇದೇ ಮಾರ್ಗದಲ್ಲಿ ಪಾಲಕರೊಂದಿಗೆ ಕಾಲ್ನಡಿಗೆ ತೆರಳುತ್ತಿದ್ದ ಚನ್ನಪಟ್ಟಣದ ಶ್ರೇಯಸ್ ಎಂಬ ಬಾಲಕ ಚಿರತೆ ದಾಳಿಯಿಂದ ಗಾಯಗೊಂಡು ಅದೃಷ್ಟವಾಶಾತ್ ಪಾರಾಗಿದ್ದನು. ಮಹಾ ಶಿವರಾತ್ರಿ ಜಾತ್ರೆಯ ಅಂಗವಾಗಿ ಲಕ್ಷಾಂತರ ಕಾಲ್ನಡಿಗೆಯ ಭಕ್ತರು ಈ ಮಾರ್ಗದಲ್ಲಿ ತೆರಳುವ ಹಿನ್ನಲೆ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿ ಗಸ್ತು ನಡೆಸುತ್ತಿದ್ದು, ಕಟ್ಟೆಚ್ಚರ ವಹಿಸಿದ್ದಾರೆ. ಆದರೂ ರಾತ್ರಿ ವೇಳೆ ಭಕ್ತರಿಗೆ ಚಿರತೆ ಕಾಣಿಸಿಕೊಳ್ಳುತ್ತಿದೆ. ಅರಣ್ಯ ಇಲಾಖೆ ಬೋನು ಇರಿಸಿ ಚಿರತೆ ಸೆರೆಗೆ ಅಧಿಕಾರಿ ಹಾಗೂ ಸಿಬ್ಬಂದಿ ನಿಗಾ ವಹಿಸಿದ್ದಾರೆ.
ಶುಕ್ರವಾರ ರಾತ್ರಿ ಕನಕಪುರ ಹಾರೋಹಳ್ಳಿಯ ನಾಲ್ವರು ಭಕ್ತರು ಕಾರಿನಲ್ಲಿ ತೆರಳುತ್ತಿದ್ದಾಗ ತಾಳುಬೆಟ್ಟದ 4ನೇ ತಿರುವಿನ ರಸ್ತೆ ಬದಿಯಲ್ಲಿ ಚಿರತೆ ಕಾಣಿಸಿಕೊಂಡಿದೆ. ಇದರ ದೃಶ್ಯ ಸಾಮಾಜಿಕ ಜಾಲ ತಾಣದಲ್ಲಿ ಹರಿದಾಡುತ್ತಿದ್ದು, ಭಕ್ತರಲ್ಲಿ ಮತ್ತಷ್ಟು ಆತಂಕವನ್ನು ಉಂಟು ಮಾಡಿದೆ.