ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಜಮೀನಿನಲ್ಲಿ ಕಾಣಿಸಿಕೊಂಡಿರುವ ಚಿರತೆಯ ಹೆಜ್ಜೆ ಗುರುತು. 
ಚಾಮರಾಜನಗರ

ಮತ್ತೆ ಆತಂಕ ಮೂಡಿಸಿದ ಚಿರತೆ ಹೆಜ್ಜೆ ಗುರುತು

ಪ್ರಮುಖ ಮುಖ್ಯಾಂಶಗಳು

  • ಅರಣ್ಯ ಇಲಾಖೆಯಿಂದ ಕಾರ್ಯಾಚರಣೆ
ಯಳಂದೂರು: ತಾಲೂಕಿನ ಕೆಸ್ತೂರು ಗ್ರಾಮದ ಹೊರವಲಯದಲ್ಲಿರುವ ಮಲ್ಲಿಗೆಹಳ್ಳಿ ಮಾಳದ ಕೆಲ ಜಮೀನುಗಳಲ್ಲಿ ಬುಧವಾರವೂ ಚಿರತೆ ಹೆಜ್ಜೆ ಗುರುತು ಕಂಡು ಬಂದಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಚಿರತೆ ಸೆರೆಗೆ ಅರಣ್ಯ ಇಲಾಖೆ ಬುಧವಾರವೂ ಕೂಂಬಿಂಗ್ ನಡೆಸಿದೆ.
ಸೋಮವಾರ ರಾತ್ರಿ ಚಿರತೆಯು ಗ್ರಾಮದಲ್ಲಿ ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಮಂಗಳವಾರ ಅರಣ್ಯ ಇಲಾಖೆಯು ಚಿರತೆ ಇರುವಿಕೆಯನ್ನು ಹೆಜ್ಜೆ ಗುರುತುಗಳ ಮೂಲಕ ಪತ್ತೆ ಹಚ್ಚಿ ಮೊದಲ ಸುತ್ತಿನ ಕೂಂಬಿಂಗ್ ನಡೆಸಿತ್ತು. ಆದರೆ ಚಿರತೆ ಪತ್ತೆಯಾಗಿರಲಿಲ್ಲ.
ಬುಧವಾರ ಬೆಳ್ಳಂಬೆಳಗ್ಗೆ ಗ್ರಾಮದ ಹೊರ ವಲಯದಲ್ಲಿರುವ ಜಮೀನಿನಲ್ಲಿ ಮತ್ತೆ ಚಿರತೆಯ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದೆ. ಇದರಿಂದ ಆತಂಕಗೊಂಡಿರುವ ಈ ಭಾಗದ ರೈತರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಇಲಾಖೆಯ ಸಿಬ್ಬಂದಿ ಚಿರತೆ ಹೆಜ್ಜೆ ಗುರುತುಗಳನ್ನು ಹಿಡಿದು ಚಿರತೆ ಇರುವಿಕೆಯನ್ನು ದೃಢಪಡಿಸಿದ್ದಾರೆ.
ಗ್ರಾಮದಲ್ಲಿ ಚಿರತೆ ಭೀತಿ ಕಾಡುತ್ತಿದ್ದು ಕುರಿಗಾಹಿಗಳು, ದನಗಾಹಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಹೋಗಲು ಭಯ ಪಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ ರೈತರು ತಮ್ಮ ಜಮೀನುಗಳಿಗೆ ತೆರಳಲು ಆತಂಕಪಡುವ ಪರಿಸ್ಥಿತಿ ಇದೆ. ಆದಷ್ಟು ಬೇಗ ಇದನ್ನು ಸೆರೆ ಹಿಡಿದು ಜನರ ಆತಂಕ ನಿವಾರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.