ಗುಂಡ್ಲುಪೇಟೆ ತಾಲೂಕಿನ ಬೆಳವಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ. 
ಚಾಮರಾಜನಗರ

ಜಾನುವಾರುಗಳನ್ನು ಕೊಲ್ಲುತ್ತಿದ್ದ ಚಿರತೆ ಸೆರೆ

ಬಾಲಮುರಳಿಕೃಷ್ಣ
ಗುಂಡ್ಲುಪೇಟೆ: ತಾಲೂಕಿನ ಬೆಳವಾಡಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಜಾನುವಾರುಗಳನ್ನು ಕೊಲ್ಲುತ್ತಿದ್ದ ಚಿರತೆ ಅರಣ್ಯ ಇಲಾಖೆ ಇರಿಸಿದ್ದ ಬೋನಿನಲ್ಲಿ ಸೆರೆಯಾಗಿದೆ.
ಬಂಡೀಪುರ ಹುಲಿ ಯೋಜನೆಯ ಕುಂದಕೆರೆ ವಲಯ ಕಾಡಂಚಿನ ಬೆಳವಾಡಿ ಹಾಗೂ ಬಿ ಶೆಟ್ಟಹಳ್ಳಿ ಗ್ರಾಮಗಳಲ್ಲಿ ರೈತರ ಸಾಕುಪ್ರಾಣಿಗಳನ್ನು ಕೊಲ್ಲುತ್ತಿದ್ದ ಚಿರತೆಯಿಂದ ಈ ಭಾಗದ ಜನರಲ್ಲಿ ಭೀತಿಯುಂಟಾಗಿತ್ತು. ಕಳೆದ ಹದಿನೈದು ದಿನಗಳಲ್ಲಿ ಐದಾರು ಮೇಕೆಗಳು ಹಾಗೂ ಜಮೀನುಗಳಲ್ಲಿ ಸಾಕಿದ ನಾಯಿಗಳನ್ನು ಕೊಂದು ಹಾಕಿದ್ದ ಚಿರತೆಯ ಸೆರೆಗೆ ಕುಂದಕೆರೆ ವಲಯದ ಅರಣ್ಯಾಧಿಕಾರಿಗಳು ಕೆರೆಯಂಗಳದಲ್ಲಿ ಬೋನು ಇರಿಸಿದ್ದರು.
ಗುರುವಾರ ಬೆಳಗಿನ ಜಾವ ನಾಯಿಯನ್ನು ತಿನ್ನಲು ಬಂದ ಚಿರತೆ ಬೋನಿನೊಳಗೆ ಸೆರೆಯಾಗಿದೆ. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಚಿರತೆಯಿದ್ದ ಬೋನನ್ನು ಬಂಡೀಪುರಕ್ಕೆ ಕೊಂಡೊಯ್ದರು.
ಕೆರೆ ವ್ಯಾಪ್ತಿಯಲ್ಲಿ ಮೂರು ಚಿರತೆಗಳು, ಒಂದು ಹುಲಿಯ ಸಂಚಾರವಿದೆ ಎಂದು ಸ್ಥಳೀಯರು ಹೇಳುತ್ತಿದ್ದು, ಅವುಗಳ ಸೆರೆಗೆ ಬೋನನ್ನು ಇಡಲು ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.