ಗುಂಡ್ಲುಪೇಟೆ ತಾಲೂಕಿನ ಬೊಮ್ಮನಹಳ್ಳಿ ಗ್ರಾಮದಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ರಾಜಶೇಖರಮೂರ್ತಿ.
ಗುಂಡ್ಲುಪೇಟೆ: ತಾಲೂಕಿನ ಬೊಮ್ಮನಹಳ್ಳಿ ಗ್ರಾಮದ ರಾಜಶೇಖರ ಮೂರ್ತಿ ಎಂಬುವರ ಮೇಲೆ ಗುರುವಾರ ರಾತ್ರಿ ಚಿರತೆ ದಾಳಿ ನಡೆಸಿ ಗಾಯಗೊಳಿಸಿದೆ.
ರಾತ್ರಿ 10.30 ರ ಸುಮಾರಿನಲ್ಲಿ ಜಮೀನಿನಲ್ಲಿ ಅರಿಶಿನ ಬೇಯಿಸಿ ಒಣಗಲು ಹಾಕಿರುವುದನ್ನು ನೋಡಲು ತೆರಳುತ್ತಿದ್ದಾಗ ಚಿರತೆ ಬೈಕ್ ಮೇಲೆ ಎಗರಿದೆ. ಇದರಿಂದ ಆಯತಪ್ಪಿ ಬಿದ್ದರೂ ಜೋರಾಗಿ ಹಾರನ್ ಒತ್ತಿ ಹಿಡಿದಿದ್ದರಿಂದ ಶಬ್ದಕ್ಕೆ ಚಿರತೆ ಓಡಿ ಹೊಗಿದೆ. ಕೂಡಲೇ ಅಕ್ಕಪಕ್ಕದ ಜಮೀನುಗಳವರ ನೆರವಿನಿಂದ ಗಾಯಾಳುವನ್ನು ಜಿಲ್ಲಾಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ.
ಈ ಬಗ್ಗೆ ಗ್ರಾಮದ ಮುಖಂಡ ವಿಜಯ್ ಮಾತನಾಡಿ, ನಮ್ಮ ಗ್ರಾಮದ ಸುತ್ತಮುತ್ತ ಕಾಡುಪ್ರಾಣಿಗಳ ಹಾವಳಿ ಹೆಚ್ಚಿದ್ದು ಕೆಲವು ದಿನಗಳಿಂದ ಕುರಿ ಹಾಗೂ ಜಾನುವಾರುಗಳ ಮೆಲೆ ದಾಳಿ ನಡೆಸಿ ಕೊಂದು ಹಾಕಿದೆ. ಸದ್ಯ ಮನುಷ್ಯರ ಮೇಲೆ ದಾಳಿ ನಡೆಸಿರುವ ಚಿರತೆಯನ್ನು ಕೂಡಲೇ ಅರಣ್ಯ ಇಲಾಖೆ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.