ಚಾಮರಾಜನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳು ಕಲಾಪ ಬಹಿಷ್ಕಾರ ಮಾಡಿದರು. ಪುಟ್ಟಸ್ವಾಮಿ, ಪ್ರಸನ್ನಕುಮಾರ್, ಶಿವರಾಮು, ರಂಗಸ್ವಾಮಿ, ವಿ.ನಾಗರಾಜೇಂದ್ರನ್, ವಿಜಯ್‌ಕುಮಾರ್ ಇತರರಿದ್ದರು.
- ನೀಟ್ ಹೋರಾಟದಲ್ಲಿ ವಿದ್ಯಾರ್ಥಿಗಳ ಮೇಲೆ ಹಲ್ಲೆಗೆ ಖಂಡನೆ
- ವಿದ್ಯಾರ್ಥಿಗಳ ಭವಿಷ್ಯದ ಚಿಂತನೆಗೆ ಆಗ್ರಹ
ಚಾಮರಾಜನಗರ:ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ವಿದ್ಯಾರ್ಥಿಗಳು ನಡೆಸಿದ್ದ ಹೋರಾಟಕ್ಕೆ ಬೆಂಬಲ ವ್ಯಕ್ತಿಪಡಿಸಿದ ಜಿಲ್ಲಾ ವಕೀಲರ ಸಂಘ ಕಲಾಪ ಬಹಿಷ್ಕಾರ ಮಾಡಿತು.
ನಗರದ ಜಿಲ್ಲಾ ನ್ಯಾಯಾಲಯದಲ್ಲಿರುವ ಜಿಲ್ಲಾ ವಕೀಲರ ಸಂಘದ ಕಚೇರಿಯಲ್ಲಿ ಸೋಮವಾರ ಆಯೊಜಿಸಿದ್ದ ಸಭೆಯ ನಂತರ ವಕೀಲರು ಕಲಾಪಗಳಿಗೆ ಹಾಜರಾಗದೆ ಹೋರಾಟ ನಿರತ ವಿದ್ಯಾರ್ಥಿಗಳಿಗೆ ಬೆಂಬಲ ಸೂಚಿಸಿದರು.
ಈ ವೇಳೆ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ರಾಮಸಮುದ್ರ ಮಾತನಾಡಿ, ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ.
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಿತ್ತು. ಇದರ ವಿರುದ್ಧ ಹೋರಾಟಕ್ಕಿಳಿದ ವಿದ್ಯಾರ್ಥಿಗಳು ತಮ್ಮ ಶಕ್ತಿಯನ್ನು ಪ್ರದರ್ಶನ ಮಾಡಿದ್ದಾರೆ. ಪ್ರತಿಭಟನಾನಿರತ ವಿದ್ಯಾರ್ಥಿಗಳ ಮೇಲೆ ದಾಖಲು ಮಾಡಿರುವ ಪ್ರಕರಣಗಳನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶಿವರಾಮು ಮಾತನಾಡಿ, ದೆಹಲಿಯಲ್ಲಿ ವಿದ್ಯಾರ್ಥಿಗಳು ಹೋರಾಟ ಮಾಡುವಾಗ ಪೊಲೀಸರು ಅವರನ್ನು ಅಮಾನವೀಯವಾಗಿ ನಡೆಸಿಕೊಂಡಿದ್ದಾರೆ. ವಿದ್ಯಾರ್ಥಿಗಳು ದೇಶದ ಶಕ್ತಿಯಾಗಿದ್ದು, ಅವರಿಗೆ ನಮ್ಮ ಬೆಂಬವಿರುತ್ತದೆ ಎಂದು ಹೇಳಿದರು.
ವಕೀಲ ಪ್ರಸನ್ನ ಕುಮಾರ್ ಮಾತನಾಡಿ, ದೇಶವನ್ನು ಸುಭದ್ರವಾಗಿ ಕಟ್ಟುವ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಶಕ್ತಿ ಅತ್ಯಂತ ಅಗತ್ಯವಾಗಿದೆ. ಅಂತಹ ವಿದ್ಯಾರ್ಥಿಗಳ ಮೇಲೆ ಸರ್ಕಾರ ಹಲ್ಲೆ ಮಾಡಿರುವುದು ಅತ್ಯಂತ ಖಂಡನೀಯ. ನೀಟ್ ಪರೀಕ್ಷೆಯ ವೇಳೆ ಸರ್ಕಾರಿ ಕಟ್ಟುನಿಟ್ಟಿನ ಕ್ರಮವನ್ನು ಜರುಗಿಸಬೇಕು ಎಂದು ಒತ್ತಾಯಿಸಿದರು. ಈ ವೇಳೆ ವಕೀಲರ ಸಂಘದ ಉಪಾಧ್ಯಕ್ಷ ರಂಗಸ್ವಾಮಿ, ವಿ.ನಾಗರಾಜೆಂದ್ರನ್, ವಿಜಯ್ ಕುಮಾರ್, ನಾಗರಾಜು, ಸಿ.ವಿ.ರಾಘವೇಂದ್ರ, ಅರ್ಚನಾ, ಕಾವ್ಯ, ಅನುರಕ್ಷಾ, ಮೌನ, ಮಹೇಂದ್ರ ಕಾಡಹಳ್ಳಿ, ಉಮೇಶ್, ಮಹೇಶ್ ಕರಿನಂಜನಪುರ, ರಾಜೇಂದ್ರ, ಕುಮಾರ್, ಮಂಜುನಾಥ್, ನಾಗೇಶ್, ರಂಗಸ್ವಾಮಿ ಬಿಸಲವಾಡಿ ಹಾಗೂ ಇತರರು ಹಾಜರಿದ್ದರು.