ಚಾಮರಾಜನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಕಾನೂನು ಕಾಲೇಜು
- ಯಡಬೆಟ್ಟದ ಬಳಿ ಜಾಗ ಗುರುತು
- ಈಗ ಇರುವ ಕಟ್ಟಡದಲ್ಲಿ ಮೂಲಸೌಕರ್ಯಕ್ಕೆ ನೀಡಬೇಕಿದೆ ಆದ್ಯತೆ
- ಸುಮಾರು 7 ಲಕ್ಷ ರೂ, ಮೌಲ್ಯದ ಪುಸ್ತಕ ಕೊಡುಗೆ
ಚಾಮರಾಜನಗರ: ಜಿಲ್ಲಾ ಕೇಂದ್ರದಲ್ಲಿ ಪ್ರಾರಂಭವಾಗಿರುವ ಸರ್ಕಾರಿ ಕಾನೂನು ಕಾಲೇಜಿನ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಕಟ್ಟಡದ ಅಗತ್ಯವಿದೆ.
ನಗರದ ಸಂತೇಮರಹಳ್ಳಿ ರಸ್ತೆಯಲ್ಲಿರುವ ರೇಷ್ಮೆ ಮಾರುಕಟ್ಟೆಯ ಹಳೆ ಕಟ್ಟಡದಲ್ಲಿ ಜಿಲ್ಲೆಯ ಮೊಟ್ಟ ಮೊದಲ ಸರ್ಕಾರಿ ಕಾನೂನು ಕಾಲೇಜು ಪ್ರಾರಂಭವಾಗಿದ್ದು, 2025-26 ನೇ ಸಾಲಿನ ಮೂರು ವರ್ಷಗಳ ಕಾನೂನು ಪದವಿ ತರಗತಿಗಳು ಈಗಾಗಲೇ ಪ್ರಾರಂಭವಾಗಿದೆ. ಸರ್ಕಾರಿ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರನ್ನು ಒಳಗೊಂಡಂತೆ 06 ಬೋಧಕರು ಹಾಗೂ 05 ಬೋಧಕೇತರ ಸಿಬ್ಬಂದಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮೊದಲ ವರ್ಷದಲ್ಲೇ 60 ವಿದ್ಯಾರ್ಥಿಗಳು ದಾಖಲಾಗಿದ್ದು, ಸುಮಾರು 400 ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ಪ್ರವೇಶಕ್ಕೆ ಅರ್ಜಿ ಸಲ್ಲಿಸಿದ್ದರು ಎಂಬುದು ಕಾನೂನು ಕಾಲೇಜಿನ ಬೇಡಿಕೆಯನ್ನು ತಿಳಿಸುತ್ತದೆ.
ಪ್ರಸ್ತುತ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ರೇಷ್ಮೆ ಮಾರುಕಟ್ಟೆಯ ಕಟ್ಟಡ ಹಳೆಯದಾಗಿದ್ದು, ಮಳೆ ಬಂದರೆ ಸೋರುತ್ತದೆ. ಕಾಲೇಜಿನ ಹಿಂಭಾಗ ಮುಳ್ಳುಬೇಲಿಗಳಿಂದ ಆವರಿಸಿದ್ದು, ಆಗಾಗ ಹಾವು-ಚೇಳಗಳು ಬರುತ್ತಿದೆ. ಕಾಲೇಜಿನ ಸುತ್ತಲೂ ಸ್ವಚ್ಛತೆ ಇಲ್ಲದೇ ಗಿಡಗೆಂಟಿಗಳು ಬೆಳೆದುಕೊಂಡಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಶೌಚಾಲಯಗಳು ಇಲ್ಲದೇ ವಿದ್ಯಾರ್ಥಿನಿಯರು ಸಮಸ್ಯೆ ಅನುಭವಿಸುವಂತಾಗಿದೆ. ಕುಡಿಯುವ ನೀರು ಇಲ್ಲದೆ ವಿದ್ಯಾರ್ಥಿಗಳಿಗೆ ನಿತ್ಯವೂ ತೊಂದರೆಯಾಗುತ್ತಿದೆ. ಕಾಲೇಜಿನಲ್ಲಿ ಪ್ರತ್ಯೇಕವಾದ ಕಂಪ್ಯೂಟರ್ ಕೊಠಡಿ ಇಲ್ಲದೇ ಕಲಿಕೆಗೆ ಸಮಸ್ಯೆಯಾಗುತ್ತಿದೆ. ಸರ್ಕಾರಿ ಕಾನೂನು ಕಾಲೇಜಿಗೆ ಗ್ರಾಮೀಣ ಭಾಗದಿಂದ ಹೆಚ್ಚಾಗಿ ವಿದ್ಯಾರ್ಥಿಗಳು ಬರುತ್ತಿದ್ದು, ಇವರು ಕಾನೂನು ಪದವಿಯನ್ನು ಪಡೆದುಕೊಳ್ಳಲು ಅಗತ್ಯವಾಗುವಂತೆ ಅಗತ್ಯ ಮೂಲಸೌಕರ್ಯ ಕಲ್ಪಿಸಬೇಕು ಹಾಗೂ ಹೊಸ ಕಟ್ಟಡವನ್ನು ಆದಷ್ಟು ಬೇಗ ನಿರ್ಮಾಣ ಮಾಡಬೇಕು ಎಂಬ ಒತ್ತಾಯ ಕೇಳಿಬರುತ್ತಿದೆ.
ಜಿಲ್ಲೆಯ ಪ್ರಥಮ ಸರ್ಕಾರಿ ಕಾನೂನು ಕಾಲೇಜು ಕಟ್ಟಡ ನಿರ್ಮಾಣಕ್ಕೆ ನಗರದ ಹೊರವಲಯದಲ್ಲಿರುವ ಯಡಬೆಟ್ಟದ ಬಳಿ ಸುಮಾರು 4 ಎಕರೆ ಜಾಗವನ್ನು ಗುರುತಿಸಲಾಗಿದೆ. ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಕಾನೂನು ಪದವಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸುಮಾರು 13 ಲಕ್ಷ ರೂ, ಮೌಲ್ಯದ ಪೀಠೋಪಕರಣಗಳು, ಕಂಪ್ಯೂಟರ್, ಶುದ್ಧ ಕುಡಿಯುವ ನೀರು ಹಾಗೂ ಇನ್ನಿತರೆ ಮೂಲ ಸೌಕರ್ಯಗಳನ್ನು ಒದಗಿಸಿದ್ದಾರೆ. ಕಾನೂನು ಕಾಲೇಜು ಕಟ್ಟಡ ನಿರ್ಮಾಣಕ್ಕೂ ಅಷ್ಟೇ ಶ್ರಮವಹಿಸಿದರೇ, ಗಡಿಜಿಲ್ಲೆಯ ವಿದ್ಯಾರ್ಥಿಗಳಿಗೆ ಕಾನೂನು ಪದವಿ ಪಡೆದುಕೊಳ್ಳಲು ಅನುಕೂಲವಾಗಲಿದೆ. ಇಲ್ಲವಾದರೇ ಹೆಚ್ಚಿನ ವಿದ್ಯಾರ್ಥಿಗಳು ದೂರದ ಮೈಸೂರು, ಮಂಡ್ಯ ಮತ್ತು ಬೆಂಗಳೂರಿನತ್ತಾ ಹೋಗಿ ಕಾನೂನು ವ್ಯಾಸಂಗ ಮಾಡುವಂತಾಗುತ್ತದೆ. ಸದ್ಯಕ್ಕೆ ಈಗ ಕಾಲೇಜು ನಡೆಯುತ್ತಿರುವ ಕಟ್ಟಡಕ್ಕೆ ಮತ್ತಷ್ಟು ಅನುದಾನವನ್ನು ಮಂಜೂರು ಮಾಡಿಸುವ ಮೂಲಕ ಮೂಲಸೌಕರ್ಯಕ್ಕೆ ಹೆಚ್ಚು ಆದ್ಯತೆ ನೀಡಬೇಕಾಗಿದೆ.
ಸುಮಾರು 7 ಲಕ್ಷ ರೂ, ಪುಸ್ತಕ ಕೊಡುಗೆ:
ಪ್ರಸ್ತುತ ಸರ್ಕಾರಿ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಸದ ಸುನೀಲ್ ಬೋಸ್ ಅವರು ಸುಮಾರು 5 ಲಕ್ಷ ರೂ, ಮೌಲ್ಯದ ಕಾನೂನು ಪದವಿಗೆ ಅಗತ್ಯವಾಗಿರುವ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಅದಲ್ಲದೇ ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜು ಪ್ರಾರಂಭಕ್ಕೆ ಅವಿರತವಾಗಿ ಶ್ರಮಿಸಿದ ಮಾಜಿ ಸಂಸದ ದಿ.ಆರ್.ಧ್ರುವನಾರಾಯಣ್ ಅವರ ಪುತ್ರರಾದ ನಂಜನಗೂಡು ವಿಧಾನಸಭಾ ಕ್ಷೇತ್ರದ ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಕೂಡ ಇತ್ತೀಚೆಗೆ 2 ಲಕ್ಷ ರೂ, ಮೌಲ್ಯದ ಕಾನೂನು ಪದವಿಗೆ ಸಂಬಂಧಿಸಿದ ಪುಸ್ತಕಗಳು, ಸಂವಿಧಾನ ಹಾಗೂ ವಿವಿಧ ಕಾನೂನು ತಜ್ಞರ ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿದ್ದಾರೆ. ಈ ಮೂಲಕ ತಂದೆಯಂತೆ ಸರ್ಕಾರಿ ಕಾನೂನು ಕಾಲೇಜನ್ನು ಬಲಗೊಳಿಸುವ ಪ್ರಯತ್ನಕ್ಕೆ ಕೈಜೋಡಿಸಿದ್ದಾರೆ. ಅದರಂತೆ ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಶ್ರಮಿಸಬೇಕಿದೆ.
ಸರ್ಕಾರಿ ಕಾನೂನು ಕಾಲೇಜಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಸುಮಾರು 13 ಲಕ್ಷ ರೂ, ವೆಚ್ಚದಲ್ಲಿ ಅಗತ್ಯ ಪೀಠೋಪಕರಣಗಳನ್ನು ಕಲ್ಪಿಸಿದ್ದಾರೆ. ಸಂಸದ ಸುನೀಲ್ ಬೋಸ್ ಮತ್ತು ನಂಜನಗೂಡು ಶಾಸಕ ದರ್ಶನ್ ಧ್ರುವನಾರಾಯಣ್ ಅವರು ಸುಮಾರು 7 ಲಕ್ಷ ರೂ, ಮೌಲ್ಯದ ಪುಸ್ತಕಗಳನ್ನು ನೀಡಿದ್ದಾರೆ. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಟ್ಟಡ ಹಳೆಯದಾಗಿದ್ದು, ಅಗತ್ಯ ಸೌಲಭ್ಯವನ್ನು ಒದಗಿಸಬೇಕಿದೆ. ಆದಷ್ಟು ಬೇಗ ಹೊಸ ಕಟ್ಟಡ ನಿರ್ಮಾಣವಾಗಬೇಕಿದೆ.
ಡಾ.ಕೆ.ಎಸ್.ಲಲಿತಾ ಭಾಯಿ, ಪ್ರಾಂಶುಪಾಲೆ, ಸರ್ಕಾರಿ ಕಾನೂನು ಕಾಲೇಜು, ಚಾಮರಾಜನಗರ
ಪ್ರಸ್ತುತ ಕಾಲೇಜು ನಡೆಯುತ್ತಿರುವ ಕಟ್ಟಡದಲ್ಲಿ ಕುಡಿಯುವ ನೀರು ಹಾಗೂ ಶೌಚಾಲಯ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕಿದೆ. ಜತೆಗೆ ಕಾಲೇಜಿನಲ್ಲಿ ಪ್ರತ್ಯೇಕ ಕಂಪ್ಯೂಟರ್ ಕೊಠಡಿ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ. ಸಂಬಂಧಪಟ್ಟವರು ಇತ್ತ ಗಮನಹರಿಸಬೇಕು. ಕಾಲೇಜಿಗೆ ಹೊಸ ಕಟ್ಟಡ ನಿರ್ಮಾಣ ಅಗತ್ಯವಾಗಿದೆ.
ಎಚ್.ಸಿ.ತನುಶ್ರೀ, ಕಾನೂನು ಪದವಿ ವಿದ್ಯಾರ್ಥಿನಿ, ಸರ್ಕಾರಿ ಕಾನೂನು ಕಾಲೇಜು, ಚಾಮರಾಜನಗರ