ಚಾಮರಾಜನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನೂತನ ಕಾನೂನು ಕಾಲೇಜು ಉದ್ಘಾಟಿಸಿ ಮತ್ತು ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಚಟುವಟಿಕೆಗಳಿಗೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಚಾಲನೆ ನೀಡಿದರು. ಡಾ. ಕೆ.ಎಸ್. ಲಲಿತಾಬಾಯಿ, ಅಶ್ವಿನಿ, ಕುಮಾರ್ ನಾಯಕ್ ಇತರರು ಇದ್ದರು. 
ಚಾಮರಾಜನಗರ

ಚಾಮರಾಜನಗರದಲ್ಲಿ ಕಾನೂನು ಕಾಲೇಜು ಉದ್ಘಾಟನೆ

ಚಾಮರಾಜನಗರ: ಹಲವು ವರ್ಷಗಳ ಸತತ ಪ್ರಯತ್ನ ಫಲವಾಗಿ ಸರ್ಕಾರಿ ಕಾನೂನು ಕಾಲೇಜು ಶುಕ್ರವಾರ ಉದ್ಘಾಟನೆಗೊಂಡಿದ್ದು, ಜಿಲ್ಲೆಯ ವಿದ್ಯಾರ್ಥಿಗಳು ಪರಿಶ್ರಮದಿಂದ ಅಧ್ಯಯನ ಮಾಡಿ ಕೀರ್ತಿ ತರಬೇಕೆಂದು ಶಾಸಕ ಸಿ. ಪುಟ್ಟರಂಗಶೆಟ್ಟಿ ತಿಳಿಸಿದರು.
ನಗರದ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಶುಕ್ರವಾರ ನೂತನ ಕಾನೂನು ಕಾಲೇಜು ಉದ್ಘಾಟಿಸಿ ಮತ್ತು ಸಾಂಸ್ಕೃತಿಕ ಕ್ರೀಡೆ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ ವಿವಿಧ ಚಟುವಟಿಕೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿಂದೆಯೇ ಕಾನೂನು ಕಾಲೇಜು ಸ್ಥಾಪನೆಗೆ ಪ್ರಕ್ರಿಯೆ ಆರಂಭಗೊಂಡಿದ್ದು, ಸಂಸದರಾಗಿದ್ದ ದಿವಂಗತ ಧ್ರುವನಾರಾಯಣ್ ಅವರು ವಿಶೇಷವಾಗಿ ಪರಿಶ್ರಮಪಟ್ಟರು. ಸತತ ಪ್ರಯತ್ನದ ಫಲವಾಗಿ ಇಂದು ಜಿಲ್ಲೆಯಲ್ಲಿ ಮೊದಲ ಸರ್ಕಾರಿ ಕಾನೂನು ಕಾಲೇಜು ಆರಂಭಗೊಂಡಿದೆ. ವಿದ್ಯಾರ್ಥಿಗಳು ಯಶಸ್ವಿಯಾಗಿ ಕಾನೂನು ಪದವಿ ಮುಗಿಸಿ ಮುಂದೆ ಉನ್ನತ ಅವಕಾಶಗಳನ್ನು ಪಡೆಯುವಂತಾಗಬೇಕು ಎಂದರು.
ಜಿಲ್ಲೆಯಲ್ಲಿ ಇಂಜಿನಿಯರಿಂಗ್, ವೈದ್ಯಕೀಯ, ಐಟಿಐ, ವಸತಿ ಪದವಿ ಕಾಲೇಜು, ಮಹಿಳಾ ಪದವಿ ಕಾಲೇಜು, ಆದರ್ಶಶಾಲೆ, ವಿಶ್ವವಿದ್ಯಾನಿಲಯ, ಕೃಷಿ ವಿಜ್ಞಾನ ಕಾಲೇಜು ಇದೆ. ಜಿಲ್ಲೆಯನ್ನು ಶೈಕ್ಷಣಿಕವಾಗಿ ಅಭಿವೃದ್ದಿಗೊಳಿಸುವ ಉದ್ದೇಶದಿಂದ ಈ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಮುಂದಿನ ದಿನಗಳಲ್ಲಿ ವಿಜ್ಞಾನ ತರಬೇತಿ ಕೇಂದ್ರ ತರಲಾಗುವುದು. ಕಾನೂನು ಕಾಲೇಜಿಗೆ ಸ್ವಂತ ಕಟ್ಟಡವನ್ನು ಒಂದೆರೆಡು ವರ್ಷದಲ್ಲಿಯೇ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ನಗರಕ್ಕೆ ಕುಡಿಯುವ ನೀರಿನ ಸೌಕರ್ಯ ಒದಗಿಸಲು 143 ಕೋಟಿ ರೂ. ವೆಚ್ಚದಲ್ಲಿ ಟೆಂಡರ್ ಆಗಿದೆ. ಒಳಚರಂಡಿಗೆ 163 ಕೋಟಿ ರೂ., ಕ್ರೀಡಾಂಗಣ ಅಭಿವೃದ್ದಿಗಾಗಿ 15 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಹೀಗೆ ಹಲವಾರು ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
ಚೂಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ವಿವಿಧ ವಿಷಯಗಳಿಗೆ ಸಂಬಂಧಿಸಿದಮತೆ ಕಾಲೇಜುಗಳು ಇವೆ. ಬಹಳ ವರ್ಷಗಳ ನಂತರ ವಿದ್ಯಾರ್ಥಿಗಳಿಗೆ ಜಿಲ್ಲೆಯಲ್ಲೇ ಕಾನೂನು ವ್ಯಾಸಂಗ ಮಾಡುವ ಅವಕಾಶ ಲಭಿಸಿದೆ. ವಿದ್ಯಾರ್ಥಿಗಳು ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಓದಿನ ಕಡೆ ಹೆಚ್ಚು ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಸರ್ಕಾರಿ ಕಾನೂನು ಕಾಲೇಜು ಪ್ರಾಂಶುಪಾಲರಾದ ಡಾ. ಕೆ.ಎಸ್. ಲಲಿತಾಬಾಯಿ ಮಾತನಾಡಿ, ಕಾನೂನು ಕಾಲೇಜಿಗೆ ಶಾಸಕರಾದ ಸಿ. ಪುಟ್ಟರಂಗಶೆಟ್ಟಿ ಅವರು 13 ಲಕ್ಷ ರೂ. ಮೌಲ್ಯದ ಪೀಠೋಪಕರಣಗಳನ್ನು ನೀಡಿದ್ದಾರೆ. ಲೋಕಸಭಾ ಸದಸ್ಯ ಸುನೀಲ್ ಬೋಸ್ ಅವರು 5 ಲಕ್ಷ ರೂ. ಮೌಲ್ಯದ ಕಾನೂನು ಪುಸ್ತಕಗಳನ್ನು ಕೊಡುಗೆಯಾಗಿ ಕಾಲೇಜಿಗೆ ನೀಡಿದ್ದಾರೆ. ಎಲ್ಲರ ಸಹಕಾರ ಕಾಳಜಿಯಿಂದ ಕಾನೂನು ಕಾಲೇಜು ಸಾಕಾರಗೊಂಡಿದೆ ಎಂದರು.
ಸಹಾಯಕ ಪ್ರಾಧ್ಯಾಪಕರಾದ ಅಶ್ವಿನಿ ಮಾತನಾಡಿ, ಪ್ರಸ್ತುತ 3 ವರ್ಷದ ಕಾನೂನು ಕೋರ್ಸುಗಳನ್ನು ಆರಂಭಿಸಿದ್ದು, ಮುಂಬರುವ ವರ್ಷಗಳಲ್ಲಿ 5 ವರ್ಷದ ಕಾನೂನು ಪದವಿ ಪ್ರಾರಂಭ ಮಾಡಲು ಎಲ್ಲರು ಬೆಂಬಲ ನೀಡಬೇಕು. ಜಿಲ್ಲೆಯಲ್ಲಿ ಸರ್ಕಾರಿ ಕಾನೂನು ಕಾಲೇಜನ್ನು ಮಾದರಿ ಕಾಲೇಜಾಗಿ ರೂಪುಗೊಳ್ಳಲು ಸರ್ವ ಪ್ರಯತ್ನ ಮಾಡಲಾಗುವುದು ಎಂದರು. ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಕುಮಾರ್ ನಾಯಕ್ ಉಪಸ್ಥಿತರಿದ್ದರು.