ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದ ಲಕ್ಷ್ಮೀ ವರದರಾಜಸ್ವಾಮಿ ದೇವಾಲಯದಲ್ಲಿ ರಥೋತ್ಸವಕ್ಕೆ ಭರದಿಂದ ಸಾಗುತ್ತಿರುವ ಸಿದ್ಧತೆ. 
ಚಾಮರಾಜನಗರ

ಫೆ.1ರಂದು ಲಕ್ಷ್ಮೀವರದರಾಜಸ್ವಾಮಿ ರಥೋತ್ಸವ

ಪ್ರಮುಖ ಮುಖ್ಯಾಂಶಗಳು

  • ತೆರಕಣಾಂಬಿ ಗ್ರಾಮ
  • ಶ್ರೀ ಲಕ್ಷ್ಮೀವರದರಾಜಸ್ವಾಮಿ ದೇವಾಲಯ
ಗುಂಡ್ಲುಪೇಟೆ: ತಾಲೂಕಿನ ತೆರಕಣಾಂಬಿ ಗ್ರಾಮದ ಶ್ರೀ ಲಕ್ಷ್ಮೀವರದರಾಜಸ್ವಾಮಿ ದೇವಾಲಯದ 17ನೇ ವರ್ಷದ ದಿವ್ಯ ರಥೋತ್ಸವ ಫೆ.1ರಂದು ವಿಜೃಂಭಣೆಯಿಂದ ನೆರವೇರಲಿದೆ.
ತಾಲೂಕು ಅಲ್ಲದೆ ನೆರೆಯ ತಮಿಳುನಾಡು ಹಾಗೂ ಕೇರಳದಲ್ಲಿಯೂ ಲಕ್ಷ್ಮೀವರದರಾಜಸ್ವಾಮಿಗೆ ಭಕ್ತರಿದ್ದು, ರಥೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಸಂಭ್ರಮ ಮನೆ ಮಾಡಿದೆ. ದೇವಾಲಯವನ್ನು ಶುಚಿಗೊಳಿಸಿ ಸುಣ್ಣಬಣ್ಣ ಹಾಗೂ ನಾನಾ ವಿಧದ ಹೂವುಗಳಿಂದ ಅಲಂಕರಿಸಲಾಗಿದೆ. ರಥದ ಮನೆಯಿಂದ ತೇರನ್ನು ಹೊರತಂದು ಬಿದಿರಿನಿಂದ ಗೋಪುರ ನಿರ್ಮಾಣ ಮಾಡಲಾಗುತ್ತಿದೆ. ಪ್ರಮುಖ ಬೀದಿಗಳ ವಿದ್ಯುತ್ ಕಂಬಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಿ ಮೈಕ್ ಕಟ್ಟಲಾಗಿದ್ದು ದೇವಾಲಯದಲ್ಲಿ ನಡೆಯುವ ಪ್ರತಿ ಧಾರ್ಮಿಕ ಚಟುವಟಿಕೆಗಳನ್ನು ಧ್ವನಿವರ್ಧಕಗಳ ಮೂಲಕ ಬಿತ್ತರಿಸಲು ಕ್ರಮ ವಹಿಸಲಾಗಿದೆ. ಈಗಾಗಲೇ ನಾನಾ ಧಾರ್ಮಿಕ ಕೈಂಕರ್ಯ ನೆರವೇರಿದ್ದು ಇಡೀ ಗ್ರಾಮವೇ ಹಬ್ಬ ಆಚರಣೆಗೆ ಸಿದ್ಧವಾಗಿದೆ.
ಪುರಾತನ ಶಿಲಾ ದೇವಾಲಯ: ಗ್ರಾಮದ ಅತ್ಯಂತ ಪುರಾತನ ಹಾಗೂ ಪ್ರಮುಖ ದೇವಾಲಯವಾದ ಇದನ್ನು ಎರಡು ಹಂತಗಳಲ್ಲಿ ನಿರ್ಮಾಣ ಮಾಡಲಾಗಿದೆ. ಗರ್ಭಗುಡಿ ಮತ್ತು ಸುಖನಾಸಿಗಳು ಹೊಯ್ಸಳರ ಕಾಲದಲ್ಲಿ, ನವರಂಗದ ವಿಸ್ತರಿಸಿದ ದಕ್ಷಿಣ ಭಾಗವು ಮೈಸೂರು ಅರಸ ಕೃಷ್ಣರಾಜ ಒಡೆಯರ ಕಾಲದಲ್ಲಿ ಲಕ್ಷ್ಮಣ ವಿಗ್ರಹ ಪ್ರತಿಷ್ಠಾಪಿಸಲಾಯಿತು. ಪಾತಾಳಾಂಕಣ ಮತ್ತು ಉತ್ತರದ ಗೋಡೆಗಳು ಪಾಳೆಗಾರರ ಆಳ್ವಿಕೆಯಲ್ಲಿ ಜೀರ್ಣೋದ್ಧಾರವಾಗಿವೆ ಎನ್ನಲಾಗುತ್ತಿದೆ.
ಪೂರ್ವಾಭಿಮುಖವಾಗಿರುವ ಈ ದೇವಾಲಯವನ್ನು ಸಂಪೂರ್ಣ ಕಲ್ಲಿನಿಂದ ನಿರ್ಮಿಸಲಾಗಿದೆ. ಸುಮಾರು 4 ಗಜ ಉತ್ತರ-ದಕ್ಷಿಣದ ವಿಸ್ತೀರ್ಣ ಹೊಂದಿದ್ದು ಮಹಾಮಂಟಪವು ಉತ್ತರ ದಕ್ಷಿಣವಾಗಿ 5 ಮೀಟರ್ ಇದ್ದು ವಿಶಾಲವಾದ ಪ್ರಾಂಗಣವಿದೆ.
ಕ್ರಿ.ಶ. 1303ರಲ್ಲಿ ತೆರಕಣಾಂಬಿಯನ್ನು ಆಳುತ್ತಿದ್ದ ಪದಿನಾಲ್ಕು ನಾಡರಸ ಪೆರುಮಾಳೆ ದಣ್ಣಾಯಕರ ಮಗ ಮಾಧವ ದಣ್ಣಾಯಕ ವರದರಾಜಸ್ವಾಮಿಯನ್ನು ಪ್ರತಿಷ್ಠಾಪಿಸಿ ಆ ದೇವರಿಗೆ ದೇವಾಲಯ ನಿರ್ಮಾಣ ಮಾಡಿದ್ದಾಗಿ ಉಲ್ಲೇಖವಿದೆ. ಮೈಸೂರು ಸಂಸ್ಥಾನದ ಒಡೆಯರಿಗೆ ಇದು ಮನೆದೇವರಾಗಿದೆ.
ಭವ್ಯ ಶಿಲಾಮೂರ್ತಿಗಳು: ಸುಮಾರು 6 ಅಡಿ ಎತ್ತರವಿರುವ ವರದರಾಜಸ್ವಾಮಿಯ ಭವ್ಯವಾದ ಶಿಲಾಮೂರ್ತಿ ಆಕರ್ಷಕವಾಗಿದೆ. ಪೀಠದ ಮೇಲಿರುವ ವರದರಾಜಸ್ವಾಮಿಯ ವಿಗ್ರಹ ವಿಷ್ಣುವಿನ ದಶಾವತಾರ ತೋರಿಸುವ ಕಮಾನು ಹೊಂದಿದೆ. ಶಂಖ, ಚಕ್ರ ಗಧಾಪಾಣಿಯಾಗಿ ಅಭಯಹಸ್ತದಿಂದ ಪೂರ್ವಾಭಿಮುಖನಾಗಿ ನಿಂತಿರುವ ಮೂರ್ತಿ ಗಂಭೀರಮುದ್ರೆಯಿಂದ ಕೂಡಿದೆ.
ವರದರಾಜಸ್ವಾಮಿಯ ಬಲಭಾಗದಲ್ಲಿರುವ ಲಕ್ಷ್ಮೀದೇವಿಯ ವಿಗ್ರಹವೂ ಅಷ್ಟೇ ಭವ್ಯವಾಗಿದ್ದು ಕಮಲದ ಹೂವಿನ ಮೇಲೆ ಕುಳಿತಿರುವ ಏಕೈಕ ಅಪರೂಪದ ಮೂರ್ತಿಯಾಗಿದೆ.
ದೇವಾಲಯದ ಆವರಣದಲ್ಲಿರುವ ಗರುಡ ಮೂರ್ತಿ ಭವ್ಯವಾಗಿದ್ದು ಇದನ್ನು ಸನ್ನಿಧಿಗರುಡನ್ ಎಂದು ಕರೆಯಲಾಗುತ್ತದೆ. ಪಕ್ಕದಲ್ಲಿಯೇ ವಿನಾಯಕರ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ದೇವಾಲಯದ ಸುತ್ತಲೂ ಕಲ್ಲು ಹಾಗೂ ಚಪ್ಪಡಿಗಳಿಂದ ನಿರ್ಮಿಸಿದ ಮಂಟಪವಿದೆ. ಸುಮಾರು 30 ಅಡಿ ಎತ್ತರದ ಎರಡು ಮರದ ಬಾಗಿಲುಗಳನ್ನು ಹೊಂದಿದೆ. ದೇವಾಲಯದ ಎದುರು ಸುಮಾರು 60 ಅಡಿ ಎತ್ತರ ಏಕಶಿಲಾ ಗರುಡಗಂಬವಿದ್ದು ಇದರ ತಳಭಾಗದಲ್ಲಿ ಆಂಜನೇಯ ಚಿತ್ರ ಕೆತ್ತಲಾಗಿದೆ.
ಜೀರ್ಣೋದ್ಧಾ, ನೂತನ ರಥ ನಿರ್ಮಾಣ: ಸಂಪೂರ್ಣ ಶಿಥಿಲವಾಗಿದ್ದ ದೇವಾಲಯವನ್ನು 2000ರಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥಸ್ವಾಮಿ ಟ್ರಸ್ಟ್ ನೆರವಿನಿಂದ ಜೀರ್ಣೋದ್ಧಾರಗೊಳಿಸಲಾಗಿದೆ. ಹಿಂದೆ ಇದ್ದ ರಥ ಸಂಪೂರ್ಣ ನಾಶವಾಗಿದ್ದರಿಂದ 60 ವರ್ಷಗಳಿಂದ ರಥೋತ್ಸವ ನಿಂತುಹೋಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಸೇರಿ 8 ಲಕ್ಷ ರೂ. ಚಂದಾ ಹಾಕಿ 2010ರಲ್ಲಿ ಹೊಸದಾಗಿ ರಥ ನಿರ್ಮಿಸಿದರು. ಅಂದಿನಿಂದ ಪ್ರತಿವರ್ಷವೂ ಮಾಘಮಾಸದ ಶುದ್ಧ ಪೂರ್ಣಿಮೆಯಂದು ರಥೋತ್ಸವ ನಡೆಯುತ್ತಿದೆ. ಗ್ರಾಮದ ಎಲ್ಲ ಸಮುದಯದವರು ಒಟ್ಟಾಗಿ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರತಿ ವರ್ಷವೂ ರಥೋತ್ಸವ ಮೆರುಗು ಪಡೆದುಕೊಳ್ಳುತ್ತಿದೆ.
ಕಲ್ಲಿನಿಂದ ನಿರ್ಮಿಸಿರುವ ಪುರಾತನ ದೇವಾಲಯದಲ್ಲಿ ವರದರಾಜಸ್ವಾಮಿ ಹಾಗೂ ಶ್ರೀ ಲಕ್ಷ್ಮೀ ಅಮ್ಮನವರ ಆಕರ್ಷಕ ಮೂರ್ತಿಗಳಿವೆ. ಕಮಲದ ಹೂವಿನ ಮೇಲೆ ಕುಳಿತಿರುವ ಅಮ್ಮನವರಿಗೆ ಪ್ರತಿ ಶುಕ್ರವಾರ ತುಪ್ಪದ ದೀಪಹಚ್ಚಿ ಪ್ರಾರ್ಥನೆ ಸಲ್ಲಿಸಿದರೆ ಇಷ್ಟಾರ್ಥಗಳು ಈಡೇರುತ್ತವೆ ಎಂಬ ನಂಬಿಕೆ ಭಕ್ತರಲ್ಲಿದ್ದು ಹಿಂದಿನಿಂದಲೂ ನಡೆದುಬಂದಿದೆ.
ವರದರಾಜು ಪ್ರಧಾನ ಅರ್ಚಕರು, ಶ್ರೀ ಲಕ್ಷ್ಮೀವರದರಾಜಸ್ವಾಮಿ ದೇವಾಲಯ