ಚಾಮರಾಜನಗರ ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಪ್ರಸಿದ್ಧ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು. 
ಚಾಮರಾಜನಗರ

ಬೆಂಡರವಾಡಿಯಲ್ಲಿ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ವೈಭವ

ಪ್ರಮುಖ ಮುಖ್ಯಾಂಶಗಳು

  • ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ
  • ಬೆಂಡರವಾಡಿ ಗ್ರಾಮದಲ್ಲಿ ಪ್ರಸಿದ್ಧ ಲಕ್ಷ್ಮೀ ನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಚಾಮರಾಜನಗರ: ತಾಲೂಕಿನ ಬೆಂಡರವಾಡಿ ಗ್ರಾಮದಲ್ಲಿ ಪ್ರಸಿದ್ಧ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ಸಾವಿರಾರು ಭಕ್ತರು ಭಾಗಿಯಾಗಿ ಇಷ್ಟಾರ್ಥ ಸಿದ್ದಿಗಾಗಿ ತೇರಿಗೆ ಬಾಳೆಹಣ್ಣು, ವೀಳ್ಯದೆಲೆಯನ್ನು ಎಸೆದು ನಮಿಸಿದರು. ನಾ ಮುಂದು ತಾ ಮುಂದು ಎಂಬಂತೆ ರಥ ಎಳೆದು ಸಂಭ್ರಮಿಸಿದರು. ನಂದಿಧ್ವಜ, ಬ್ಯಾಂಡು, ನಗಾರಿ, ಕೊಂಬು ಕಹಳೆ, ಸತ್ತಿಗೆ, ಸೂರಿಪಾನಿ, ವೀರ ಮಕ್ಕಳ ಕುಣಿತ ಸಮೇತ ಬೆಳಗ್ಗೆ 10.15 ಗಂಟೆಯಲ್ಲಿ ನಾರಾಯಣಸ್ವಾಮಿ ದೇವಸ್ಥಾನದಿಂದ ತೇರು ಮುಂದಡಿ ಇಟ್ಟಿತು. ಪ್ರಮುಖ ಬೀದಿಗಳಲ್ಲಿ ಸಾಗಿ ಮಧ್ಯಾಹ್ನ 12.30ಕ್ಕೆ ಸ್ವಸ್ಥಾನ ಸೇರಿತು. ಅಲ್ಲಲ್ಲಿ ಮಜ್ಜಿಗೆ, ಪಾನಕ, ಕೋಸಂಬರಿಯನ್ನು ವಿತರಿಸಲಾಯಿತು.
ಭಾನುವಾರ ಬೆಳಗಿನ ಜಾವ ಉರುಳು ಸೇವೆ, ಮಧ್ಯಾಹ್ನ ಕೊಂಡದ ಗುಳಿ ಪೂಜೆ ನಡೆದವು. ಬಳಿಕ ರಾತ್ರಿಯಿಡೀ ನಡೆದ ಅದ್ದೂರಿ ಉತ್ಸವದ ಸಂದರ್ಭದಲ್ಲಿ ಸತ್ತಿಗೆಗಳಿಗೆ ಮಾಡಲಾಗಿದ್ದ ಹೂವಿನ ಅಲಂಕಾರ ಕಣ್ಮನ ಸೆಳೆಯಿತು. ಈ ವೇಳೆ ಸಿಡಿಸಲಾದ ವೈವಿಧ್ಯಮ ಬಾಣ ಬಿರುಸುಗಳು ಬಾನಂಗಳದಲ್ಲಿ ಚಿತ್ತಾರ ಬರೆದವು.
ಸೋಮವಾರ ಬೆಳಗಿನ ಜಾವ ಲಕ್ಷ್ಮೀದೇವಿ ದೇವಸ್ಥಾನದ ಮುಂಭಾಗ ಭಾರೀ ಜನಸ್ತೋಮದ ನಡುವೆ ಕೊಂಡೋತ್ಸವದ ಬಳಿಕ ರಥೋತ್ಸವ ನಡೆಯಿತು. ಇದರೊಂದಿಗೆ ಎರಡು ದಿನಗಳ ಜಾತ್ರೆ ಕೊನೆಗೊಂಡಿತು.
ಬಿ.ಮಲ್ಲಯ್ಯನಪುರ, ಮೇಗಲಹುಂಡಿ, ಕೆರೆಹಳ್ಳಿ, ಪಾಳ್ಯ, ಹೆಗ್ಗವಾಡಿ, ಭುಜಗನಪುರ, ಕೋಣನೂರು, ಮುತ್ತಿಗೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮದವರು ಭಾಗವಹಿಸಿದ್ದರು. ಜಾತ್ರಾ ಪ್ರಯುಕ್ತ ಗ್ರಾಮದ ಪ್ರಮುಖ ಸ್ಥಳಗಳಲ್ಲಿ ಮಾಡಲಾಗಿದ್ದ ವಿದ್ಯುತ್ ದೀಪಾಲಂಕಾರ ಸೊಗಸಾಗಿತ್ತು.