ಯಳಂದೂರು ಪಟ್ಟಣದ ಆಶ್ರಯ ಬಡಾವಣೆಯ ಉದ್ಯಾನದಲ್ಲಿ ನಿರ್ವಹಣೆ ಕೊರತೆ.  
ಚಾಮರಾಜನಗರ

ಉದ್ಯಾನಗಳ ನಿರ್ವಹಣೆ ಕೊರತೆ

ಪ್ರಮುಖ ಮುಖ್ಯಾಂಶಗಳು

  • ಪಟ್ಟಣದ ಪಂಚಾಯಿತಿ ಅಧಿಕಾರಿಗಳ ನಿರ್ಲಕ್ಷೃ
  • ಅಭಿವೃದ್ಧಿಗೆ ಸಾರ್ವಜನಿಕರ ಒತ್ತಾಯ
ಯಳಂದೂರು: ಪಟ್ಟಣದ ಸೌಂದರ್ಯ ಹೆಚ್ಚಿಸುವ ಉದ್ದೇಶದಿಂದ ನಿರ್ಮಾಣಗೊಂಡ ಉದ್ಯಾನಗಳು ನಿರ್ವಹಣೆ ಇಲ್ಲದೆ ಸೊರಗಿವೆ.
ಉದ್ಯಾನಗಳ ನಿರ್ವಹಣೆಗೆ ಸರ್ಕಾರ ಪ್ರತಿ ವರ್ಷ ಅನುದಾನ ಮೀಸಲಿಡುತ್ತದೆ. ಆದರೂ ಕಾಲ ಕಾಲಕ್ಕೆ ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಪಟ್ಟಣ ಪಂಚಾಯಿತಿ ವ್ಯಾಪಿಯಲ್ಲಿ ಉದ್ಯಾನಗಳಲ್ಲಿ ಮುಳ್ಳಿನ ಗಿಡಗಂಟಿ ಬೆಳೆದು ಇದರ ಅಂದವೇ ಕೆಟ್ಟಿದ್ದು ನೋಡುಗರಿಗೆ ಮುಜುಗರ ಮೂಡಿಸುವಂತಿದೆ !
ಪಟ್ಟಣದ ಪಂಚಾಯಿತಿ ಕಚೇರಿ ಪಕ್ಕ ಹಾಗೂ 1ನೇ ವಾರ್ಡಿನ ವ್ಯಾಪ್ತಿಯಲ್ಲಿನ ಆಶ್ರಯ ಬಡಾವಣೆಯಲ್ಲಿ 2 ಉದ್ಯಾನ, ತಹಸೀಲ್ದಾರ್ ಕಚೇರಿ ಮುಂಭಾಗ ಒಂದು ಉದ್ಯಾನ ಇದೆ. ಈ ಉದ್ಯಾನಗಳ ನಿರ್ವಹಣೆ ಕೊರತೆಯಿಂದ ಸುತ್ತಲೂ ಗಿಡಗಂಟಿ ಬೆಳೆದುಕೊಂಡು ನಿರುಪಯುಕ್ತವಾಗಿದೆ. ವಾಯು ವಿಹಾರ , ದೈಹಿಕ ವ್ಯಾಯಾಮ, ಮಕ್ಕಳು ಆಟವಾಡಲು ಉದ್ಯಾನವನ ಅಭಿವೃದ್ಧಿ ಪಡಿಸಿಲ್ಲ. ಹಾಗಾಗಿ ವಾಯು ವಿಹಾರಿಗಳು ರಸ್ತೆಯಲ್ಲಿ ಸಂಚರಿಸುತ್ತಾರೆ. ಹಲವರು ಅಪಘಾತಗಳಿಗೆ ತುತ್ತಾಗಿ ಸತ್ತಿರುವ ಉದಾಹರಣೆ ಕೂಡ ಇವೆ.
ಪಟ್ಟಣದಲ್ಲಿ ಸುಸಜ್ಜಿತವಾದ ಉದ್ಯಾನಗಳಿಲ್ಲ, ಹೊಸ ಬಡಾವಣೆಗಳಲ್ಲಿ ಉದ್ಯಾನಕ್ಕೆ ಜಾಗ ಮೀಸಲಿದ್ದರೂ ನಿರ್ಮಾಣಗೊಂಡಿಲ್ಲ. ಪಟ್ಟಣದಲ್ಲಿ 5ಕ್ಕೂ ಹೆಚ್ಚು ಉದ್ಯಾನಗಳಿದ್ದು ಅವುಗಳ ನಿರ್ವಹಣೆ ಕೊರತೆಯಿಂದ ಯಾವುದೂ ಕೂಡ ಸಾರ್ವಜನಿಕರನ್ನು ಆಕರ್ಷಿಸುವ ರೀತಿಯಲ್ಲಿ ಇಲ್ಲ. ಇದರಿಂದ ವಯೋವೃದ್ಧರಿಗೆ, ಪರಿಸರ ಪ್ರೇಮಿಗಳಿಗೆ ವಾಯುವಿಹಾರಿಗಳಿಗೆ ಇದು ಬೇಸರ ತರಿಸಿದೆ.
ಪಟ್ಟಣದಲ್ಲಿ ದಿನೇದಿನೆ ಜನಸಂಖ್ಯೆ ಹೆಚ್ಚುತ್ತಿದೆ. ಆದರೆ ಮೂಲ ಸೌಲಭ್ಯ ನೀಡಬೇಕಾದ ಪಂಚಾಯಿತಿಯ ನಿರ್ವಹಣೆ ಹೇಳಿಕೊಳ್ಳುವ ಮಟ್ಟದಲ್ಲಿ ಇಲ್ಲ. ಪಟ್ಟಣ ಪಂಚಾಯಿತಿ ಅಸಮರ್ಪಕ ನಿರ್ವಹಣೆಯಿಂದ ಉದ್ಯಾನಗಳು ಸೊರಗಿವೆ. ಹಗಲು, ಸಂಜೆ ವೇಳೆ ಶಾಲಾ ರಜಾ ದಿನಗಳಲ್ಲಿ ಸಮಯ ಕಳೆಯಲು ಇಚ್ಛಿಸುವ ಮಕ್ಕಳಿಗೆ ಇಲ್ಲಿ ಸರಿಯಾದ ಆಟಿಕೆಗಳಿಲ್ಲ. ಮೊಬೈಲ್ ಬಳಕೆ ಹೆಚ್ಚಾಗಿರುವ ದಿನಗಳಲ್ಲಿ ಉದ್ಯಾನದಲ್ಲಿನ ಕೊರತೆಗಳೂ ಮಕ್ಕಳ ಕ್ರಿಯಾತ್ಮಕ ಚಟುವಟಿಕೆಗಳಿಗೆ ಅಡ್ಡಿ ಮಾಡಿದೆ. ಕುಳಿತುಕೊಳ್ಳಲು ಆಸನದ ವ್ಯವಸ್ಥೆಯೂ ಸಮರ್ಪಕವಾಗಿಲ್ಲ. ಮಕ್ಕಳಿಗೆ ಬೇಕಾಗಿರುವ ಜಾರುಬಂಡಿಯಂತಹ ಆಟಿಕೆ, ಸಾಮಗ್ರಿಗಳ ಕೊರತೆ ಎದ್ದು ಕಾಣುತ್ತಿವೆ. ವಾಕಿಂಗ್ ಪಾತ್‌ನಲ್ಲಿ ಹುಲ್ಲು, ದೊದೆ ಸಸ್ಯಗಳು, ಮುಳ್ಳಿನ ರಾಶಿ ಬೆಳೆದು ಸಂಪೂರ್ಣವಾಗಿ ಮುಚ್ಚಿದೆ. ಸಗಣಿ ಮತ್ತು ಕಸ ಅಲ್ಲಲ್ಲಿ ಬಿದ್ದಿದೆ. ಇಲ್ಲಿಗೆ ಬೀಡಾಡಿ ದನಗಳು, ಹಸು, ಎಮ್ಮೆಗಳು ನುಗ್ಗುತ್ತವೆ. ಪಟ್ಟಣದಲ್ಲಿ ಉದ್ಯಾನಗಳನ್ನು ಪಟ್ಟಣ ಪಂಚಾಯಿತಿ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಅಕ್ಕಪಕ್ಕದ ಮನೆಗಳ ತ್ಯಾಜ್ಯ ಸುರಿಯಲು ಕೂಡ ಇದನ್ನು ಬಳಕೆ ಮಾಡಲಾಗುತ್ತಿದೆ ಎಂಬುದು ಸಾರ್ವಜನಿಕರ ದೂರಾಗಿದೆ.
ವ್ಯಾಯಾಮಕ್ಕೆ ಉಪಕರಣ ಇಲ್ಲ : ಉದ್ಯಾನಗಳಲ್ಲಿ ಕುಳಿತುಕೊಳ್ಳಲು ಸರಿಯಾದ ಆಸನ ವ್ಯವಸ್ಥೆ, ಮಕ್ಕಳ ಮನರಂಜನೆಗಾಗಿ ಆಟದ ಸಲಕರಣೆಗಳು ಯುವಕರಿಗೆ ಸುಲಭವಾಗಿ ವ್ಯಾಯಾಮ ಮಾಡಲು ಉಪಕರಣಗಳು ಅಳವಡಿಸಬೇಕಾಗಿದೆ. ಜತೆಗೆ ನೀರು, ಶೌಚಗೃಹ, ಬೀದಿ ದೀಪ, ಹೂವಿನ ಗಿಡಗಳು, ಅಲಂಕಾರಿಕ ಗಿಡ ಸೇರಿದಂತೆ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಸೋತಿವೆ. ಅನುಪಯುಕ್ತ ಗಿಡಗಂಟಿಗಳು ಬೆಳೆದು ವಿಷ ಜಂತುಗಳ ವಾಸಸ್ಥಳವಾಗಿ ಈ ಜಾಗ ಪರಿವರ್ತನೆಗೊಂಡಿದೆ. ಈ ಬಗ್ಗೆ ಪಟ್ಟಣದ ಪಂಚಾಯಿತಿ ಅಧಿಕಾರಿಗಳ ವರ್ಗ ಈ ಉದ್ಯಾನಗಳಿಗೆ ಭೇಟಿ ನೀಡಿ ಪರಿಶೀಲಿಸಿಲ್ಲ.
ನೀರಿನ ಕೊರೆತೆ: ಪಟ್ಟಣದ ಉದ್ಯಾನವು ಹಸಿರಿನಿಂದ ಕೂಡಿರಬೇಕಾದರೆ ನೀರಿನ ಸಂಪರ್ಕ ಬೇಕು. ಆದರೆ ಇಲ್ಲಿಗೆ ನೀರಿನ ಸಂಪರ್ಕವೇ ಇಲ್ಲ. ಇಲ್ಲಿಗೆ ಹಾಕಿರುವ ಹುಲ್ಲಿನ ಹಾಸು ಒಣಗಿ ನಿಂತಿದೆ. ಸುತ್ತುಗೋಡೆಗಳು ಸುತ್ತಲೂ ಕಳೆ ಬೆಳೆದಿವೆ. ಉದ್ಯಾನವನ್ನು ನಿರ್ವಹಣೆ ಮಾಡುವಲ್ಲಿ ಪಂಚಾಯಿತಿಯ ಅಧಿಕಾರಿಗಳು ಸೋತಿದ್ದಾರೆ. ಇಲ್ಲಿಗೆ ನೀರಿನ ವ್ಯವಸ್ಥೆ, ಮೂಲ ಸೌಲಭ್ಯ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.