ಚಾಮರಾಜನಗರದ ಹೊರ ವಲಯದಲ್ಲಿರುವ ಚಾಮರಾಜನಗರ ವಿಶ್ವವಿದ್ಯಾಲಯ  
ಚಾಮರಾಜನಗರ

ಚಾಮರಾಜನಗರ ವಿವಿಗೆ ಅನುದಾನ ಕೊರತೆ

ಪ್ರಮುಖ ಮುಖ್ಯಾಂಶಗಳು

  • ಖಾಯಂ ಬೋಧಕ, ಬೋಧಕೇತರರ ನೇಮಕಕ್ಕೆ ಒತ್ತಾಯ
  • ಜಿಲ್ಲೆಯ ಶೈಕ್ಷಣಿಕ ಬೆಳವಣಿಗೆಗೆ ತೊಡಕು
  • ವಿಶೇಷ ಅನುದಾನವನ್ನು ನೀಡುವಂತೆ ಆಗ್ರಹ
ಚಾಮರಾಜನಗರ: ಮೈಸೂರು ವಿಶ್ವವಿದ್ಯಾಲಯದಿಂದ ಬೇರ್ಪಟ್ಟು ಚಾಮರಾಜನಗರ ವಿಶ್ವವಿದ್ಯಾಲಯ ಪ್ರತ್ಯೇಕವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನುದಾನ ಕೊರತೆಯಿಂದ ಶೈಕ್ಷಣಿಕ ಬೆಳವಣಿಗೆಗೆ ತೊಡಕುಂಟಾಗಿದೆ.
ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ 60 ಅತಿಥಿ ಉಪನ್ಯಾಸಕರು ಹಾಗೂ 46 ಬೋಧಕೇತರ ಸಿಬ್ಬಂದಿಗಳು ಹೊರಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ರಾಜ್ಯಸರ್ಕಾರ ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ 2023-24 ನೇ ಸಾಲಿನಲ್ಲಿ 1 ಕೋಟಿ ರೂ, ಅನುದಾನ, 2024-25 ನೇ ಸಾಲಿನಲ್ಲಿ 43.42 ಲಕ್ಷ ರೂ, ಅನುದಾನ ಹಾಗೂ 2025-26 ನೇ ಸಾಲಿನಲ್ಲಿ 1 ಕೋಟಿ ರೂ, ಅನುದಾನವನ್ನು ನೀಡಿದೆ. ಈ ಸಂಬಂಧ ವಿಧಾನ ಪರಿಷತ್ ಸದಸ್ಯ ಕೆ.ಶಿವಕುಮಾರ್ ಅವರು ಅಧಿವೇಶನದಲ್ಲಿ ಚುಕ್ಕಿಗುರುತಿನ ಪ್ರಶ್ನೆಯಲ್ಲಿ ಗಮನಸೆಳೆದಿದ್ದು, ಸರ್ಕಾರ ಮಾಹಿತಿಯನ್ನು ನೀಡಿದೆ. ಆದರೆ ವಿಶ್ವವಿದ್ಯಾಲಯದ ಆಂತರಿಕ ಸಂಪನ್ಮೂಲಗಳನ್ನು ಬಳಕೆ ಮಾಡಿಕೊಂಡು ಅತಿಥಿ ಉಪನ್ಯಾಸಕರಿಗೆ ವೇತನವನ್ನು ನೀಡಲಾಗುತ್ತಿದೆ ಹೊರತು ಸರ್ಕಾರ ನೀಡುತ್ತಿರುವ ಅನುದಾನದಿಂದ ಯಾವುದೇ ಶೈಕ್ಷಣಿಕ ಚಟುವಟಿಕೆಗಳನ್ನು ಮಾಡಲು ಸಾಧ್ಯವಾಗುತ್ತಿಲ್ಲ. ಈ ನಡುವೆ ವಿದ್ಯಾರ್ಥಿಗಳ ಪ್ರವೇಶಾತಿ, ಮೂಲಸೌಕರ್ಯಗಳ ಕೊರತೆ, ಆರ್ಥಿಕ ಪರಿಸ್ಥಿತಿಯ ಆಧಾರದ ಮೇಲೆ ವಿವಿ ವಿಲೀನದ ಮಾತುಗಳು ಕೂಡ ಕೇಳಿಬರುತ್ತಿದೆ. ಆಗಾಗಿ ಈ ವಾರದ ಲೌಡ್‌ಸ್ಪೀಕರ್‌ನಲ್ಲಿ ಅಭಿಪ್ರಾಯ ಸಂಗ್ರಹಿಸಲಾಗಿದೆ.
*ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿ
ಚಾಮರಾಜನಗರ ಜಿಲ್ಲೆಯಲ್ಲಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ಕೊರತೆ ಇಲ್ಲ. ಎಲ್ಲರೂ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವುದರಿಂದ ಅವರನ್ನು ಖಾಯಂ ಮಾಡಿದರೆ ಅನುಕೂಲವಾಗಲಿದೆ. ಪ್ರಸ್ತುತ ಜಿಲ್ಲೆಗೆ ಪ್ರತ್ಯೇಕ ವಿಶ್ವವಿದ್ಯಾಲಯದ ಅಗತ್ಯವಿದ್ದು, ಈ ಭಾಗದಲ್ಲಿ ಹೆಚ್ಚು ಎಸ್ಸಿ, ಎಸ್ಟಿ, ಓಬಿಸಿ ವರ್ಗದ ವಿದ್ಯಾರ್ಥಿಗಳು ಹಾಗೂ ಹೆಣ್ಣು ಮಕ್ಕಳು ಹೆಚ್ಚಾಗಿ ವಿಧ್ಯೆಭ್ಯಾಸ ಮಾಡುತ್ತಿದ್ದಾರೆ. ಎಲ್ಲರೂ ಮೈಸೂರಿಗೆ ಹೋಗಿ ಶಿಕ್ಷಣ ಪಡೆಯಲು ಸಾಧ್ಯವಿಲ್ಲ. ವಿಶ್ವವಿದ್ಯಾಲಯ ಇರುವುದರಿಂದ ಹೆಣ್ಣು ಮಕ್ಕಳು ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ರಾಜ್ಯ ಸರ್ಕಾರ ಹೆಚ್ಚಿನ ಅನುದಾನ ನೀಡಿದರೆ ವಿವಿ ಶೈಕ್ಷಣಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ.
ಪ್ರೋ.ಎಂ.ಆರ್.ಗಂಗಾಧರ್, ಕುಲಪತಿ, ವಿಶ್ವವಿದ್ಯಾಲಯ, ಚಾಮರಾಜನಗರ
*ಸರ್ಕಾರದ ನಿರ್ಲಕ್ಷ್ಯ ಧೋರಣೆ
ಗಡಿಜಿಲ್ಲೆ ಚಾಮರಾಜನಗರ ವಿಶ್ವವಿದ್ಯಾಲಯ ಸ್ಥಾಪನೆಯಾಗಿ ಈವರೆಗೆ ರಾಜ್ಯ ಸರ್ಕಾರ ಯಾವುದೇ ರೀತಿಯ ಸೌಲಭ್ಯ ಮತ್ತು ಅನುದಾನ ನೀಡುತ್ತಿಲ್ಲ. ಇಲ್ಲೇ ವಿಶ್ವವಿದ್ಯಾಲಯ ಇರುವುದರಿಂದ ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತಿದೆ. ಈ ಬಾರಿಯ ಬಜೆಟ್‌ನಲ್ಲಿ ಅನುದಾನ ನೀಡುವಂತೆ ಒತ್ತಾಯ ಮಾಡಿದ್ದೇವು. ಆದರೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿದೆ. ಕೂಡಲೇ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಬಿಡುಗಡೆ ಮಾಡಿಕೊಡಬೇಕು.
ಚಾ.ರಂ.ಶ್ರೀನಿವಾಸ್‌ಗೌಡ, ಕನ್ನಡಪರ ಹೋರಾಟಗಾರ, ಚಾಮರಾಜನಗರ
*ಗಡಿಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ
ವಿಶ್ವವಿದ್ಯಾಲಯದಲ್ಲಿ ಕೇವಲ ಆಂತರಿಕ ಸಂಪನ್ಮೂಲಗಳನ್ನು ಬಳಸಿಕೊಂಡು ಶೈಕ್ಷಣಿಕ ಚಟುವಟಿಕೆಗಳನ್ನು ನಡೆಸಲು ಸಾಧ್ಯವಿಲ್ಲ. ಸ್ಮಾರ್ಟ್ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಸುಮಾರು 150 ಕೋಟಿ ರೂ, ವಿಶೇಷ ಅನುದಾನವನ್ನು ಬಜೆಟ್‌ನಲ್ಲಿ ನೀಡುವಂತೆ ಮನವಿ ಮಾಡಲಾಗಿತ್ತು. ರಾಜ್ಯ ಸರ್ಕಾರ ಇದನ್ನು ಪರಿಗಣಿಸದೇ ಇರುವುದು ಗಡಿಜಿಲ್ಲೆಗೆ ಶಾಪವಾಗಿ ಪರಿಣಮಿಸಿದೆ. 33 ಪ್ರಾಧ್ಯಾಪಕ ಹುದ್ದೆಗಳು ಮಂಜೂರಾಗಿದ್ದರು, ಅದನ್ನು ನೇಮಕ ಮಾಡಲು ಸರ್ಕಾರ ಯಾವುದೇ ಕ್ರಮವಹಿಸಿಲ್ಲ. ಚಾಮರಾಜನಗರ ಶೈಕ್ಷಣಿಕ ಅಭಿವೃದ್ಧಿಗೆ ಸರ್ಕಾರದ ಕೊಡುಗೆ ಶೂನ್ಯವಾಗಿದೆ.
ಡಾ.ಮಲ್ಲಿಕಾರ್ಜುನ್, ಪ್ರಾಧ್ಯಾಪಕ, ಅರ್ಥಶಾಸ ವಿಭಾಗ, ವಿವಿ, ಚಾಮರಾಜನಗರ
*ಪ್ರಾಧ್ಯಾಪಕರನ್ನು ಖಾಯಂಗೊಳಿಸಿ
ಚಾಮರಾಜನಗರ ವಿಶ್ವವಿದ್ಯಾಲಯದಲ್ಲಿ ಖಾಯಂ ಪ್ರಾಧ್ಯಾಪಕರು ಇಲ್ಲದೇ ಕಲಿಕೆಗೆ ತುಂಬಾ ತೊಂದರೆಯಾಗುತ್ತಿದೆ. ಇರುವ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಖಾಯಂಗೊಳಿಸಿದರೇ ಅನುಕೂಲವಾಗಲಿದೆ. ವಿದ್ಯಾರ್ಥಿಗಳಿಗೆ ಸ್ಮಾರ್ಟ್ ಕ್ಲಾಸ್ ಅಗತ್ಯವಿದ್ದು, ಹಲವಾರು ಕೊರತೆಯ ನಡುವೆಯೂ ಉತ್ತಮ ಲಿತಾಂಶ ಬರುತ್ತಿದೆ. ರಾಜ್ಯ ಸರ್ಕಾರ ವಿಶೇಷ ಅನುದಾನವನ್ನು ನೀಡಿದ್ದರೇ ಸಹಕಾರಿಯಾಗುತ್ತಿತ್ತು. ಗಡಿಜಿಲ್ಲೆಯ ವಿದ್ಯಾರ್ಥಿಗಳು ಅದರಲ್ಲೂ ಹೆಣ್ಣುಮಕ್ಕಳ ಶಿಕ್ಷಣದ ಹಿತದೃಷ್ಟಿಯಿಂದ ಚಾಮರಾಜನಗರ ವಿಶ್ವವಿದ್ಯಾಲಯಕ್ಕೆ ಹೆಚ್ಚಿನ ಅನುದಾನವನ್ನು ನೀಡಬೇಕು.
ರಾಧಿಕಾ, ದ್ವಿತೀಯ ಎಂಎ, ಅರ್ಥಶಾಸ ವಿಭಾಗ, ವಿವಿ, ಚಾಮರಾಜನಗರ
*ಶೈಕ್ಷಣಿಕ ಅಭಿವೃದ್ಧಿಗೆ ಕೊಡಲಿಪೆಟ್ಟು
ಚಾಮರಾಜನಗರ ವಿಶ್ವವಿದ್ಯಾಲಯ ಪ್ರಾರಂಭವಾದ ಬಳಿಕ ಈ ಭಾಗದ ಬಡ ಹೆಣ್ಣು ಮಕ್ಕಳು ಹೆಚ್ಚಾಗಿ ಉನ್ನತ ಶಿಕ್ಷಣವನ್ನು ಪಡೆದುಕೊಳ್ಳುತ್ತಿದ್ದಾರೆ. ಪ್ರತಿವರ್ಷವೂ ಉತ್ತಮ ಲಿತಾಂಶವೂ ಬರುತ್ತಿದೆ. ಆದರೆ ರಾಜ್ಯ ಸರ್ಕಾರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಅನುದಾನವನ್ನು ನೀಡದೆ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕೊಡಲಿ ಪೆಟ್ಟು ನೀಡುತ್ತಿದೆ. ಕೂಡಲೇ ವಿವಿ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳನ್ನು ಖಾಯಂಗೊಳಿಸಬೇಕು. ಚಾಮರಾಜನಗರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ 200 ಕೋಟಿ ರೂ, ವಿಶೇಷ ಅನುದಾನವನ್ನು ಮಂಜೂರು ಮಾಡಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ಚಳುವಳಿಯನ್ನು ರೂಪಿಸುತ್ತೇವೆ.
ವೆಂಕಟರಮಣಸ್ವಾಮಿ (ಪಾಪು), ಹಿರಿಯ ಹೋರಾಟಗಾರ, ಚಾಮರಾಜನಗರ
*ವಿಶೇಷ ಅನುದಾನವನ್ನು ನೀಡಿ
ವಿಶ್ವವಿದ್ಯಾಲಯದಲ್ಲಿ ಖಾಯಂ ಪ್ರಾಧ್ಯಾಪಕರು ಇಲ್ಲದೇ ಕಲಿಕೆಗೆ ತೊಂದರೆಯಾಗುತ್ತಿದೆ. ವಾರದಲ್ಲಿ ಮೂರು ದಿನವಷ್ಟೇ ಅತಿಥಿ ಉಪನ್ಯಾಸಕರು ಬೋಧನೆ ಮಾಡುವುದರಿಂದ ಕೆಲವು ಬಾರಿ ಸಮಸ್ಯೆಯಾಗುತ್ತದೆ. ಇದರಿಂದ ಬಹುಮುಖ್ಯವಾಗಿ ವಿಶ್ವವಿದ್ಯಾಲಯಕ್ಕೆ ಖಾಯಂ ಪ್ರಾಧ್ಯಾಪಕರನ್ನು ಸರ್ಕಾರ ನೇಮಕ ಮಾಡಬೇಕು. ವಿಶ್ವವಿದ್ಯಾಲಯದ ಸಮಗ್ರ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ನೀಡಬೇಕು.
ಕೆ.ಕಿರಣ್‌ಕುಮಾರ್, ಎಂಎ ವಿದ್ಯಾರ್ಥಿ, ವಿವಿ, ಚಾಮರಾಜನಗರ
*ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿದೆ
ಗಡಿಜಿಲ್ಲೆ ಚಾಮರಾಜನಗರ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಎಂ.ಆರ್.ಗಂಗಾಧರ್ ಅವರ ಮಾರ್ಗದರ್ಶನ ಮತ್ತು ಅಧ್ಯಾಪಕ ವರ್ಗದ ಪರಿಶ್ರಮದಿಂದ ಉತ್ತಮ ಅಭಿವೃದ್ಧಿಯನ್ನು ಕಾಣುತ್ತಿದೆ. ವಿದ್ಯಾರ್ಥಿಗಳು ಉತ್ತಮ ಪ್ರಗತಿಯನ್ನು ಸಾಧಿಸುತ್ತಿದ್ದಾರೆ. ಆದರೆ ವಿವಿಗೆ ಸರ್ಕಾರ ಹೆಚ್ಚಿನ ಅನುದಾನವನ್ನು ಮಂಜೂರು ಮಾಡಬೇಕು. ಖಾಯಂ ಅಧ್ಯಾಪಕರ ನೇಮಕವನ್ನು ತುರ್ತಾಗಿ ಮಾಡಬೇಕು. ಗ್ರಾಮೀಣ ಹಿನ್ನೆಲೆಯ ವಿದ್ಯಾರ್ಥಿಗಳು ಹೆಚ್ಚಾಗಿ ಬರುವುದರಿಂದ ಅವರಿಗೆ ಉತ್ತಮ ಶಿಕ್ಷಣ ಸೌಲಭ್ಯ ಕಲ್ಪಿಸುವುದು ಸರ್ಕಾರದ ಜವಾಬ್ದಾರಿಯಾಗಿದೆ.
ಡಾ.ಆರ್.ಶಶಿಕಲಾ, ಅತಿಥಿ ಪ್ರಾಧ್ಯಾಪಕರು, ವಿವಿ, ಚಾಮರಾಜನಗರ
*ವಿವಿ ಮುಚ್ಚುವ ಹುನ್ನಾರವಾಗಿದೆ
ನೂತನ ವಿಶ್ವವಿದ್ಯಾಲಯಗಳಿಗೆ ವಾರ್ಷಿಕವಾಗಿ 2 ಕೋಟಿ ರೂ, ಅನುದಾನವನ್ನು ನೀಡಬೇಕಿದೆ. ಆದರೆ ರಾಜ್ಯ ಸರ್ಕಾರ ಚಾಮರಾಜನಗರ ವಿಶ್ವವಿದ್ಯಾಲಯದ ಅಭಿವೃದ್ಧಿಗೆ ಯಾವುದೇ ಅಗತ್ಯವಾದ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಮೂಲಸೌಕರ್ಯವಿಲ್ಲದೇ ವಿವಿಗಳನ್ನು ತೆರೆಯಲಾಗಿದೆ ಎಂಬುದನ್ನು ರಾಜ್ಯ ಕಾಂಗ್ರೆಸ್ ಸರ್ಕಾರ ದೂರುತ್ತಿದ್ದು, ಹೊಸ ವಿವಿಗಳನ್ನು ವಿಲೀನಗೊಳಿಸುವ ಮಾತನ್ನಾಡುತ್ತಿದೆ. ಇದು ಗ್ರಾಮೀಣ ಪ್ರದೇಶದ ಮಕ್ಕಳನ್ನು ಉನ್ನತ ಶಿಕ್ಷಣದಿಂದ ವಂಚಿತರಾಗುವಂತೆ ಮಾಡಿ, ಹೊಸ ವಿಶ್ವವಿದ್ಯಾಲಯಗಳನ್ನು ಮುಚ್ಚುವ ಹುನ್ನಾರವಾಗಿದೆ.
ಸೋಮಶೇಖರ್ ಬಿಸಲವಾಡಿ, ಹಿರಿಯ ಸಾಹಿತಿ, ಚಾಮರಾಜನಗರ