ಹನೂರಿನ ತಹಸೀಲ್ದಾರ್ ಕಚೇರಿಯ ಅಭಿಲೇಖಾಲಯದಲ್ಲಿ ನೆರಳು ಹಾಗೂ ಕುಡಿಯುವ ನೀರಿನ ಸೌಕರ್ಯ ಇಲ್ಲದಿರುವುದರ ಬಗ್ಗೆ ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಶ್ರೀನಿವಾಸ್ ತೀವ್ರ ಆಕ್ರೋಶವ್ಯಕ್ತಪಡಿಸಿದರು.  
ಚಾಮರಾಜನಗರ

ತಹಸೀಲ್ದಾರ್ ಕಚೇರಿಯಲ್ಲಿ ಸೌಕರ್ಯಗಳ ಕೊರತೆ

ಪ್ರಮುಖ ಮುಖ್ಯಾಂಶಗಳು

  • ಅಧಿಕಾರಿಗಳ ವಿರುದ್ಧ ಶ್ರೀನಿವಾಸ್ ಆಕ್ರೋಶ
ಹನೂರು: ಪಟ್ಟಣದ ತಹಸೀಲ್ದಾರ್ ಕಚೇರಿಯ ಅಭಿಲೇಖಾಲಯ ಕಚೇರಿಯಲ್ಲಿ ಕುಡಿಯುವ ನೀರು ಹಾಗೂ ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಸಾರ್ವಜನಿಕರು ಅನುಭವಿಸುತ್ತಿರುವ ಸಮಸ್ಯೆ ವಿರುದ್ಧ ಬುಧವಾರ ಕೆಆರ್‌ಎಸ್ ಪಕ್ಷದ ಕಾರ್ಯಕರ್ತ ಶ್ರೀನಿವಾಸ್ ಅವರು ಅಧಿಕಾರಿ, ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಶ್ರೀನಿವಾಸ್ ಅವರು ಅಗತ್ಯ ದಾಖಲೆ ಪಡೆಯುವ ಸಲುವಾಗಿ ಅಭಿಲೇಖಾಲಯ ಕಚೇರಿಗೆ ಆಗಮಿಸಿ ಸಾರ್ವಜನಿಕರೊಂದಿಗೆ ಸರತಿ ಸಾಲಿನಲ್ಲಿ ನಿಂತಿದ್ದರು. ಆದರೆ ಇಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಬಿಸಿಲಿನಲ್ಲಿಯೇ ಕಾದು ನಿಲ್ಲುವಂತಾಯಿತು. ಜತೆಗೆ ಕುಡಿಯುವ ನೀರಿನ ವ್ಯವಸ್ಥೆಯೂ ಇರಲಿಲ್ಲ. ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಅವರು, ಪಡಸಾಲೆ ಕೇಂದ್ರಕ್ಕೆ ಆಗಮಿಸಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ತಾಲೂಕು ಕೇಂದ್ರ ಹನೂರಿನ ತಹಸೀಲ್ದಾರ್ ಕಚೇರಿ ಹಾಗೂ ಅಭಿಲೇಖಾಲಯ ಕಚೇರಿಗೆ ನಿತ್ಯ ನೂರಾರು ಸಾರ್ವಜನಿಕರು ಕೆಲಸ ಕಾರ್ಯಗಳ ನಿಮಿತ್ತ ಆಗಮಿಸುತ್ತಾರೆ. ಆದರೆ ಇಲ್ಲಿ ನೆರಳಿನ ವ್ಯವಸ್ಥೆ ಇಲ್ಲದ ಪರಿಣಾಮ ಬಿಸಿಲಿನಲ್ಲಿಯೇ ಕಾದು ನಿಲ್ಲಬೇಕಿದೆ. ಇದರಿಂದ ವಯೋವೃದ್ಧರು ಹಾಗೂ ಮಹಿಳೆಯರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ. ಕುಡಿಯುವ ನೀರಿನ ಸೌಕರ್ಯ ಒದಗಿಸದಿರುವುದು ಎಷ್ಟರ ಮಟ್ಟಿಗೆ ಸರಿ? ಇನ್ನು ಮುಂದಾದರೂ ಈ ಬಗ್ಗೆ ಕ್ರಮವಹಿಸಿ ಮೂಲ ಸೌಕರ್ಯವನ್ನು ಒದಗಿಸುವುದರ ಮೂಲಕ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಆಕ್ರೋಶವ್ಯಕ್ತಪಡಿಸಿದರು.
ಈ ವೇಳೆ ಶಿರಸ್ತೇದಾರ್ ಮಾದೇಶ್ ಕೂಡಲೇ ಕುಡಿಯುವ ನೀರಿನ ಸೌಕರ್ಯ ಒದಗಿಸಲಾಗುವುದು ಎಂದು ತಿಳಿಸಿದರು.