ಲೊಕ್ಕನಹಳ್ಳಿಯಲ್ಲಿ ಚಿರತೆ ದಾಳಿಯಿಂದ ಗಾಯಗೊಂಡ ಕುರಿ.  
ಚಾಮರಾಜನಗರ

ಚಿರತೆ ದಾಳಿಗೆ 2 ಕುರಿಗಳು ಮೃತ

ಎ. ಆರ್. ರಘುರಾಮ
ಹನೂರು :: ತಾಲೂಕಿನ ಲೊಕ್ಕನಹಳ್ಳಿ ಗ್ರಾಮದಲ್ಲಿ ಬುಧವಾರ ರಾತ್ರಿ ಚಿರತೆ ದಾಳಿಗೆ 2 ಕುರಿಗಳು ಮೃತಪಟ್ಟಿದ್ದು, ಮತ್ತೆರೆಡು ಗಾಯಗೊಂಡಿವೆ.
ಗ್ರಾಮದ ರಾಜಶೇಖರ್ ಅವರು ಮನೆ ಮುಂಭಾಗ ಕುರಿಗಳನ್ನು ಕಟ್ಟಿ ಹಾಕಿದ್ದರು. ರಾತ್ರಿ ಸಮೀಪದ ಅರಣ್ಯ ಪ್ರದೇಶದಿಂದ ಲಗ್ಗೆ ಇಟ್ಟ ಚಿರತೆ 2 ಕುರಿಗಳನ್ನು ಬಲಿ ಪಡೆದಿದ್ದು, ಇನ್ನೆರಡು ಕುರಿಗಳನ್ನು ಗಾಯಗೊಳಿಸಿದೆ. ಕುರಿಗಳ ಚೀರಾಟದ ಶಬ್ದ ತಿಳಿದ ರಾಜಶೇಖರ್ ಹಾಗೂ ಸ್ಥಳೀಯರು ಹೊರಕ್ಕೆ ಆಗಮಿಸಿ ಶಬ್ದ ಮಾಡಿದಾಗ ಚಿರತೆ ಸ್ಥಳದಿಂದ ಅರಣ್ಯ ಪ್ರದೇಶದತ್ತ ಓಟ ಕಿತ್ತಿದೆ.
ಸುದ್ದಿ ತಿಳಿಸಲಾಗಿ ಗುರುವಾರ ಅರಣ್ಯ ಇಲಾಖೆಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದು ಇಲಾಖೆಯಿಂದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ಈ ಭಾಗದ ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ಗ್ರಾಮದತ್ತ ಆಗಮಿಸಿ ಸಾಕು ಪ್ರಾಣಿಗಳನ್ನು ಬಲಿ ಪಡೆಯುತ್ತಿದೆ. ಇದರಿಂದ ಆತಂಕಕ್ಕೆ ಒಳಗಾಗಿದ್ದೇವೆ. ಆದ್ದರಿಂದ ಚಿರತೆಯನ್ನು ಸೆರೆ ಹಿಡಿಯುವಂತೆ ಒತ್ತಾಯಿಸಿದರು. ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗುವುದೆಂದು ಸಿಬ್ಬಂದಿ ತಿಳಿಸಿದರು.