ಭದ್ರಯ್ಯನಹಳ್ಳಿ ಸಮೀಪದ ಕುನ್ನಪ್ಪಶೆಟ್ಟಿ ದೊಡ್ಡಿಯಲ್ಲಿ ಕೈಪಂಪ್ ದುರಸ್ತಿಪಡಿಸುವಂತೆ ಒತ್ತಾಯಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಹನೂರು: ತಾಲೂಕಿನ ಶೆಟ್ಟಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭದ್ರಯ್ಯನಹಳ್ಳಿ ಸಮೀಪದ ಕುನ್ನಪ್ಪಶೆಟ್ಟಿ ದೊಡ್ಡಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಕೈಪಂಪ್ ದುರಸ್ತಿ ಮಾಡಿಸುವಲ್ಲಿ ಪಿಡಿಒ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿ ಶುಕ್ರವಾರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ವೇಳೆ ಗ್ರಾಮಸ್ಥರು ಮಾತನಾಡಿ, ನಾವು ಅರಣ್ಯ ಪ್ರದೇಶದ ಅಂಚಿನಲ್ಲಿ ವಾಸಿಸುತ್ತಿದ್ದು, ಕುಡಿಯುವ ನೀರಿನ ಸೌಕರ್ಯ ಇಲ್ಲದ ಕಾರಣ ಕೈಪಂಪನ್ನೇ ಅವಲಂಬಿಸಿದ್ದೇವೆ. ಕೈಪಂಪ್ ಕೆಟ್ಟು 3 ತಿಂಗಳಾಗಿದೆ. ಇದರಿಂದ ಕುಡಿಯುವ ನೀರಿಗಾಗಿ ನಿತ್ಯ 3 ಕಿಮೀ ದೂರುವಿರುವ ಭದ್ರಯ್ಯನಹಳ್ಳಿ ಗ್ರಾಮಕ್ಕೆ ತೆರಳಿ ನೀರನ್ನು ಹೊತ್ತು ತರಬೇಕಾಗಿದೆ. ಇದೀಗ 3 ದಿನಗಳಿಂದ ಇಲ್ಲಿಯೂ ಸಮರ್ಪಕವಾಗಿ ನೀರು ದೊರಕುತ್ತಿಲ್ಲ. ಗ್ರಾಮದ ಅಕ್ಕಪಕ್ಕದಲ್ಲೂ ಪಂಪ್‌ಸೆಟ್ ಇರುವ ಜಮೀನು ಇಲ್ಲ. ಇದರಿಂದ ಕುಡಿಯುವ ನೀರಿಗೆ ಪರದಾಡುತ್ತಿದ್ದೇವೆ ಎಂದು ದೂರಿದರು.
ಕೈಪಂಪ್ ದುರಸ್ತಿಪಡಿಸುವಂತೆ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಪಿಡಿಒಗೆ ಹಲವು ಬಾರಿ ಮನವಿ ಮಾಡಿದರೂ ಕಿಂಚಿತ್ತೂ ಗಮನಹರಿಸುತ್ತಿಲ್ಲ. ಇದರಿಂದ ನಿತ್ಯ ಸಮಸ್ಯೆ ಎದುರಿಸುವಂತಾಗಿದೆ. ಈ ಬಗ್ಗೆ ಕ್ರಮವಹಿಸುವಲ್ಲಿ ಪಿಡಿಒ ಸಂಪೂರ್ಣ ನಿರ್ಲಕ್ಷ್ಯ ವಹಿಸಿದ್ದಾರೆ. ಹಾಗಾದರೆ ಕುಡಿಯುವ ನೀರಿಗಾಗಿ ನಾವು ಎಲ್ಲಿಗೆ ಹೋಗುವುದು? ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿ ಕೈಪಂಪ್ ದುರಸ್ತಿಪಡಿಸುವುದರ ಮೂಲಕ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು. ಇಲ್ಲವಾದಲ್ಲಿ ಗ್ರಾಪಂ ಕಚೇರಿ ಮುಂಭಾಗ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಗ್ರಾಮಸ್ಥರಾದ ಕರಿಯಪ್ಪ ಶೆಟ್ಟಿ, ಸಿದ್ದರಾಜು, ಸಿದ್ದಪ್ಪ, ದುಂಡಯ್ಯ, ಶಾಂತರಾಜು, ಮಾದಮ್ಮ, ಸೆಲ್ವಿ, ಶಂಕರಮ್ಮ ಇನ್ನಿತರರಿದ್ದರು.