ಗುಂಡ್ಲುಪೇಟೆ ತಾಲೂಕಿನ ತೆರಕಣಾಂಬಿ ಗ್ರಾಮದಲ್ಲಿ ಕೆಟ್ಟುನಿಂತ ಬಸ್ ಅನ್ನು ಸಾರ್ವಜನಿಕರು ತಳ್ಳುತ್ತಿದ್ದ ಸಂದರ್ಭ.
- ಸಾರ್ವಜನಿಕರ ಆಕ್ರೋಶ
- ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್
ಗುಂಡ್ಲುಪೇಟೆ: ಪಟ್ಟಣದ ಸಾರಿಗೆ ಡಿಪೋಗೆ ಸೇರಿದ ಬಸ್ಸುಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿದ್ದು, ಪ್ರಯಾಣಿಕರು ಪರದಾಡುವಂತಾಗಿದೆ.
ಬುಧವಾರ ತಾಲೂಕಿನ ಬೊಮ್ಮಲಾಪುರದಿಂದ ಪ್ರಯಾಣಿಕರನ್ನು ಕರೆತರುತ್ತಿದ್ದ ಸಾರಿಗೆ ಬಸ್ ತೆರಕಣಾಂಬಿ ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ಸರ್ಕಲ್ ಬಳಿ ತಿರುಗಿಸುತ್ತಿದ್ದ ಇಂಜಿನ್ ಏಕಾಏಕಿ ಬಂದ್ ಆಗಿದೆ. ಇದರಿಂದ ಸ್ವಲ್ಪಹೊತ್ತು ಈ ಮಾರ್ಗದಲ್ಲಿ ಜಿಲ್ಲಾ ಕೇಂದ್ರಕ್ಕೆ ಹೋಗುತ್ತಿದ್ದ ವಾಹನಗಳ ಸಂಚಾರಕ್ಕೆ ತೀವ್ರ ಅಡಚಣೆಯುಂಟಾಯಿತು. ಬಸ್ ಚಾಲನೆ ಮಾಡಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದ ಪರಿಣಾಮ ಚಾಲಕ ಪ್ರಯಾಣಿಕರನ್ನು ಕೆಳಗಿಳಿಸಿ ಸಾರ್ವಜನಿಕರ ನೆರವಿನಿಂದ ಬಸ್ ತಳ್ಳುತ್ತಿದ್ದುದನ್ನು ಸಾರ್ವಜನಿಕರು ತಮ್ಮ ಮೊಬೈಲ್‌ಗಳಲ್ಲಿ ಸೆರೆಹಿಡಿದು ತಳ್ಳು ನೂಕು ಓ ಐಸಾ..., ತಳ್ಳೋ ಮಾಡೆಲ್ ಗಾಡಿ ಇದು ತಳ್ಳಿಬಿಡಪ್ಪಾ ಎಂಬ ಕನ್ನಡದ ಹಳೆಯ ಚಿತ್ರಗಳ ಹಾಡುಗಳೊಂದಿಗೆ ಸಂಯೋಜಿಸಿ ರಾಜ್ಯ ಸಾರಿಗೆ ಸಂಸ್ಥೆಯ ದುಸ್ಥಿತಿ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡುತ್ತಿದ್ದಾರೆ.
ಸಾರಿಗೆ ಅಧಿಕಾರಿಗಳ ನಿರ್ಲಕ್ಷೃಕ್ಕೆ ಸಾರ್ವಜನಿಕರ ಆಕ್ರೋಶ: ಇತ್ತೀಚೆಗೆ ಪ್ರತಿದಿನವೂ ಪಟ್ಟಣದ ಡಿಪೋಗೆ ಸೇರಿದ ಬಸ್ಸುಗಳು ಒಂದಲ್ಲ ಒಂದು ಕಡೆ ಕೆಟ್ಟು ನಿಲ್ಲುತ್ತಿವೆ. ಬಸ್ ಕೆಟ್ಟಿರುವ ಬಗ್ಗೆ ಮಾಹಿತಿ ನೀಡಲು ಕರೆ ಮಾಡಿದರೆ ಡಿಪೋ ಮ್ಯಾನೇಜರ್ ಕರೆ ಸ್ವೀಕರಿಸುವುದಿಲ್ಲ, ಬದಲಿ ಬಸ್ ಕಳಿಸುವ ವ್ಯವಸ್ಥೆ ಮಾಡುತ್ತಿಲ್ಲ. ಇದರಿಂದ ಬೇರೆ ಬಸ್ಸು ಬರುವವರೆಗೆ ಕಾದು ನಿಲ್ಲುವಂತಾಗಿದೆ.
ಸ್ಕ್ರಾೃಪ್ ಗಾಡಿಗಳ ಸಂಚಾರ, ಪ್ರಯಾಣಿಕರಿಗೆ ಸಂಚಕಾರ: ಪಟ್ಟಣದ ಸಾರಿಗೆ ಡಿಪೋದಲ್ಲಿ 142 ಬಸ್ಸುಗಳಿದ್ದು, 136 ಮಾರ್ಗಗಳಿಗೆ ಸಂಚರಿಸುತ್ತಿವೆ. ಹೆಚ್ಚಿನ ಬಸ್ಸುಗಳಲ್ಲಿ ನಾನಾ ಸಮಸ್ಯೆಗಳಿದ್ದರೂ ಅವುಗಳನ್ನು ಸರಿಯಾಗಿ ರಿಪೇರಿ ಮಾಡಿಸದೆ ಗ್ರಾಮಾಂತರ ಪ್ರದೇಶಗಳಿಗೆ ಓಡಿಸಲಾಗುತ್ತಿದೆ. ಇವುಗಳಲ್ಲಿ 20 ರಿಂದ 30 ಸ್ಕ್ರಾೃಪ್ ಹಂತದಲ್ಲಿರುವ ಪರಿಣಾಮ ಕೆಟ್ಟು ನಿಲ್ಲುತ್ತಿವೆ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಸಿಬ್ಬಂದಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಚಾಲಕನಿಂದ ಮಾಹಿತಿ ಪಡೆಯಲಾಗುವುದು ಎಂದು ಡಿಪೋ ಮ್ಯಾನೇಜರ್ ತ್ಯಾಗರಾಜು ವಿಜಯವಾಣಿಗೆ ತಿಳಿಸಿದ್ದಾರೆ.