ಪೊನ್ನಾಚಿ ಗ್ರಾಮದಲ್ಲಿ ಮಂಗಳವಾರ ಕೆಟ್ಟು ನಿಂತ ಸಾರಿಗೆ ಬಸ್.  
ಚಾಮರಾಜನಗರ

ಪೊನ್ನಾಚಿಯಲ್ಲಿ ಕೆಟ್ಟು ನಿಂತ ಕೆಎಸ್‌ಆರ್‌ಟಿಸಿ

ಹನೂರು: ತಾಲೂಕಿನ ಪೊನ್ನಾಚಿ ಗ್ರಾಮದಲ್ಲಿ ಮಂಗಳವಾರ ಕೆಎಸ್‌ಆರ್‌ಟಿಸಿ ಬಸ್ ಕೆಟ್ಟು ನಿಂತ ಪರಿಣಾಮ ಪ್ರಯಾಣಿಕರು ತೊಂದರೆ ಅನುಭವಿಸಿದರು.
ಪೊನ್ನಾಚಿ ಭಾಗದಲ್ಲಿ 10ಕ್ಕೂ ಹೆಚ್ಚು ಗ್ರಾಮಗಳಿದ್ದು, ಇದೀಗ ಕೆಲವು ಗ್ರಾಮಗಳಲ್ಲಿ ಮಾರಿ ಹಬ್ಬ ಆರಂಭವಾಗಿದ್ದು, ವಿವಿಧ ಊರುಗಳಿಂದ ನೆಂಟರಿಷ್ಟರು ಆಗಮಿಸಲಿದ್ದಾರೆ. ಗ್ರಾಮಸ್ಥರು ಕೆಲಸದ ನಿಮಿತ್ತ ಹನೂರು, ಕೊಳ್ಳೇಗಾಲ ಹಾಗೂ ಇತರ ಕಡೆಗಳಿಗೆ ತೆರಳಲಿದ್ದು, ಮುಂಜಾನೆ 6 ಗಂಟೆಗೆ ಗ್ರಾಮದಿಂದ ತೆರಳುವ ಸಾರಿಗೆ ಬಸ್ ಅನ್ನು ಈ ಭಾಗದ ಹೆಚ್ಚಿನ ಜನರು ಅವಲಂಬಿಸಿದ್ದಾರೆ. ಆದರೆ ಈ ಬಸ್ ಬೆಳಗ್ಗೆ ಕೆಟ್ಟು ನಿಂತಿತ್ತು. ಇದರಿಂದ ಗ್ರಾಮಸ್ಥರು ಒಂದೂವರೆ ಗಂಟೆಗಳ ಕಾಲ ಕಾದು ನಿಂತು ಖಾಸಗಿ ಬಸ್ ಮೂಲಕ ತೆರಳಿದರು. ಅಲ್ಲದೆ ಮಹಿಳೆಯರು ಹಣ ನೀಡಿ ತೆರಳಬೇಕಾಯಿತು.
ಗ್ರಾಮಕ್ಕೆ ಸಂಚರಿಸುವ ಸಾರಿಗೆ ಬಸ್ ಸುಸ್ಥಿತಿಯಲ್ಲಿಲ್ಲ. ಇದರಿಂದ ಆಗಾಗ್ಗೆ ಕೆಟ್ಟು ನಿಲ್ಲುತ್ತಿದೆ. ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಜನರು ಸಮಸ್ಯೆ ಎದುರಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ಇತ್ತ ಗಮನಹರಿಸಿ ಸುಸ್ಥಿತಿಯಲ್ಲಿರುವ ಬಸ್ ಬಿಡುವಂತೆ ಗ್ರಾಮದ ಸಾಮಾಜಿಕ ಕಾರ್ಯಕರ್ತ ಪೊನ್ನಾಚಿ ರಾಜು ಒತ್ತಾಯಿಸಿದ್ದಾರೆ.