ಪೊನ್ನಾಚಿಯಲ್ಲಿ ನಡೆದ ಶ್ರೀ ಬಸವೇಶ್ವರ ಸ್ವಾಮಿ ಕೊಂಡೋತ್ಸವದ ಸಂದರ್ಭ ನೆರೆದಿದ್ದ ಭಕ್ತರು.  
ಚಾಮರಾಜನಗರ

ಪೊನ್ನಾಚಿಯಲ್ಲಿ ಬಸವೇಶ್ವರ ಸ್ವಾಮಿ ಕೊಂಡೋತ್ಸವ

ಎ. ಆರ್. ರಘುರಾಮ
ಹನೂರು : ತಾಲೂಕಿನ ಕಾಡಂಚಿನ ಗ್ರಾಮ ಪೊನ್ನಾಚಿಯಲ್ಲಿ ಗ್ರಾಮದೇವತೆ ಮಾರಮ್ಮ ಜಾತ್ರೆಯ ಹಿನ್ನಲೆಯಲ್ಲಿ ಸೋಮವಾರ ತಡರಾತ್ರಿ ಸಾವಿರಾರು ಭಕ್ತರ ಸಮ್ಮುಖದಲ್ಲಿ ಶ್ರೀ ಬಸವೇಶ್ವರ ಸ್ವಾಮಿಯ ಕೊಂಡೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಜಾತ್ರೆಯ ಅಂಗವಾಗಿ ದೇಗುಲವನ್ನು ತಳಿರು, ತೋರಣ, ವಿವಿಧ ಪುಷ್ಪ ಹಾಗೂ ವಿದ್ಯುತ್ ದೀಪಾಲಂಕಾರದಿಂದ ಕಂಗೊಳಿಸುವಂತೆ ವ್ಯವಸ್ಥೆ ಮಾಡಲಾಗಿತ್ತು. ಸಂಜೆ 6 ರಿಂದ 8 ಗಂಟೆಯವರೆಗೆ ದೇವಿಗೆ ಭಕ್ತರಿಂದ ಹಾಲರವಿ ಸೇವೆ ನೆರವೇರಿತು. ರಾತ್ರಿ 12 ರಲ್ಲಿ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಪೊನ್ನಾಚಿ ಆಲಂಬಾಡಿ ಮಠದ ವೀರಪ್ಪ ಸ್ವಾಮೀಜಿ, ಕಿರಿಯ ಶ್ರೀ ಮಹಾಂತೇಶ ಸ್ವಾಮೀಜಿ ಸಮ್ಮುಖದಲ್ಲಿ ಕೊಂಡೋತ್ಸವವು ವಿಜೃಂಭಣೆಯಿಂದ ನೆರವೇರಿತು.
ಉಪವಾಸವಿದ್ದ ಅರ್ಚಕರು, ವೀರಗಾಸೆ ವೇಷಧಾರಿಗಳು ಕಾವಿ ವಸ್ತ್ರವನ್ನು ಧರಿಸಿ, ಹಣೆಗೆ ವಿಭೂತಿ ಹಚ್ಚಿ ಸತ್ತಿಗೆ, ಸೂರಿಪಾನಿ ಮಂಗಳ ವಾದ್ಯ ಹಾಗೂ ಭಕ್ತರೊಂದಿಗೆ ಗ್ರಾಮದ ಬಾವಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮೆರವಣಿಗೆಯ ಮೂಲಕ ದೇಗುಲದ ಮುಂಭಾಗದಲ್ಲಿ ಸಿದ್ಧಪಡಿಸಲಾಗಿದ್ದ ಕೊಂಡದ ಬಳಿ ಆಗಮಿಸಿದರು. ಈ ವೇಳೆ ಈಡುಗಾಯಿ ಒಡೆದು ಆರತಿ ಬೆಳಗಿಸಲಾಯಿತು.
ಬಳಿಕ ಅರ್ಚಕರು, ವೀರಗಾಸೆ ವೇಷಧಾರಿಗಳು ಖಡ್ಗವನ್ನು ಹಿಡಿದು ವೀರಾವೇಷದಿಂದ ಕೊಂಡವನ್ನು ಹಾಯ್ದರು. ನೆರೆದಿದ್ದ ಭಕ್ತರು ಜಯಘೋಷವನ್ನು ಮೊಳಗಿಸುವುದರ ಮೂಲಕ ಕೊಂಡ ಹಾಯುವವರಲ್ಲಿ ಉತ್ಸಾಹ ಮೂಡಿಸಿದರು. ಬಳಿಕ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಮಹಾ ಮಂಗಳಾರತಿ ಬೆಳಗಿಸಲಾಯಿತು.
ಮ.ಬೆಟ್ಟ, ಕೌದಳ್ಳಿ, ರಾಮಾಪುರ, ಹನೂರು ಸೇರಿದಂತೆ ಬೆಂಗಳೂರು, ಮೈಸೂರು, ಮಂಡ್ಯ ಹಾಗೂ ಇನ್ನಿತರೆ ಜಿಲ್ಲೆಯಿಂದಲೂ ಭಕ್ತರು ಆಗಮಿಸಿದ್ದರು. ನಿರಂತರ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಮಂಗಳವಾರ ಭಕ್ತರಿಂದ ದೇವಿಗೆ ತಂಪುಸೇವೆ ನೆರವೇರಿತು.