ಕೊಳ್ಳೇಗಾಲ ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯ ವಾಟರ್ ಟ್ಯಾಂಕ್ ಮುಂಭಾಗ ಗುಂಡಿ ಬಿದ್ದು ವಾಹನ ಸಂಚಾರಕ್ಕೆ ತೊಂದರೆಯಾಗಿರುವುದು. 
ಚಾಮರಾಜನಗರ

ಡಾ.ರಾಜ್ ಕುಮಾರ್ ರಸ್ತೆ ಗುಂಡಿಮಯ

ಕೊಳ್ಳೇಗಾಲ: ಪಟ್ಟಣದ ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಗುಂಡಿ ಬಿದ್ದಿರುವುದರಿಂದ ವಾಹನಗಳ ಸಂಚಾರಕ್ಕೆ ತೊಂದರೆಯಾಗಿದೆ.
ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯ ಪ್ರಮುಖ ರಸ್ತೆ ಇದಾಗಿದ್ದು ಒಂದೂವರೆ ವರ್ಷದಿಂದ ರಸ್ತೆ ಹಳ್ಳ ಬಿದ್ದು ಸಂಚಾರಕ್ಕೆ ಯೋಗ್ಯವಿಲ್ಲದಂತಾತಿತ್ತು. ಈ ಹಿನ್ನೆಲೆ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್‌ಎಸ್) ಪಕ್ಷ ಪದಾಧಿಕಾರಿಗಳು ನಗರಸಭೆ ಮುಂಭಾಗ ಪ್ರತಿಭಟನೆ ನಡೆಸಿದ್ದರು. ಬಳಿಕ ಗುಂಡಿಗಳಿಗೆ ತೇಪೆ ಹಾಕಲಾಗಿತ್ತು. ಆದರೀಗ ಪಂಪ್‌ಹೌಸ್ ಎದುರು ಹಾಗೂ ಹಲವೆಡೆ ಗುಂಡಿ ಬಿದ್ದಿದ್ದು ವಾಹನ ಸವಾರರು ಹೈರಾಣಾಗಿದ್ದಾರೆ. ನಗರಸಭೆ ಅಧಿಕಾರಿಗಳು ಎಚ್ಚೆತ್ತು ಗುಂಡಿಗಳನ್ನು ಮುಚ್ಚಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಡಾ.ರಾಜ್ ಕುಮಾರ್ ರಸ್ತೆ ಸದಾ ವಾಹನ ಸಂಚಾರದಿಂದ ಕೂಡಿರುತ್ತದೆ. ಈ ರಸ್ತೆಯಲ್ಲಿ ಬಟ್ಟೆ ಅಂಗಡಿಗಳು, ಮಾಂಸದ ಅಂಗಡಿಗಳು, ಮೆಡಿಕಲ್ ಸ್ಟೋರ್‌ಗಳು, ಸ್ಟೇಷನರೀಸ್ ಇನ್ನಿತರ ಅಗತ್ಯ ವಸ್ತುಗಳ ಮಾರಾಟ ಅಂಗಡಿಗಳು ಹೆಚ್ಚಾಗಿರುವುದರಿಂದ ವಾಹನ ಹಾಗೂ ಜನ ದಟ್ಟಣೆ ಹೆಚ್ಚಾಗಿರುತ್ತದೆ.
ಕಳೆದ ವರ್ಷವಷ್ಟೇ ಡಾ.ರಾಜ್ ಕುಮಾರ್ ರಸ್ತೆಗೆ ಪ್ಯಾಚಿಂಗ್ ಕಾಮಗಾರಿ ನಡೆಸಲಾಗಿತ್ತು. ಆದರೀಗ ತೇಪೆ ಕಾಮಗಾರಿ ಮಾಡಿದ್ದ ಸ್ಥಳದಲ್ಲಿ ಗುಂಡಿ ಬಿದ್ದಿಲ್ಲ. ಮಾರ್ಗ ಮಧ್ಯೆ ಬೇರೆ ಕಡೆಗಳಲ್ಲಿ ಗುಂಡಿಗಳು ಹೊಸದಾಗಿ ಬಿದ್ದಿದೆ. ಈಗಾಗಲೇ ಡಾ.ಬಿ.ಆರ್.ಅಂಬೇಡ್ಕರ್ ಮತ್ತು ಡಾ.ರಾಜ್ ಕುಮಾರ್ ರಸ್ತೆ ವಿಸ್ತರಣೆಗೆ ಸರ್ವೇ ಪ್ರಕ್ರಿಯೆ ನಡೆಯುತ್ತಿದೆ. ಆದರೂ ಗುಂಡಿ ಮುಚ್ಚುವ ಕೆಲಸವನ್ನು ಮಾಡಿಸಲಾಗುತ್ತದೆ.
ನಾಗೇಂದ್ರ, ಇಂಜಿನಿಯರ್ ನಗರಸಭೆ
ನಮ್ಮ ಹೋರಾಟದ ಫಲವಾಗಿ ಕಳೆದ ವರ್ಷವಷ್ಟೇ ಗುಂಡಿ ಮುಚ್ಚುವ ಕಾಮಗಾರಿ ನಡೆದಿತ್ತು. ಈ ರಸ್ತೆಯಲ್ಲೇ ಮತ್ತೆ ಕೆಲವು ಕಡೆಗಳಲ್ಲಿ ಗುಂಡಿ ಬಿದ್ದಿದೆ. ಈ ರಸ್ತೆ ವಿಸ್ತರಣೆ ಮಾಡುತ್ತೇವೆ ಎಂದು 3 ವರ್ಷದಿಂದ ಜನರ ಕಣ್ಣೊರೆಸುವ ಕೆಲಸ ಮಾಡುತ್ತಿದ್ದಾರೆ. ಕೆಲ ದಿನಗಳ ಬಳಿಕ ಮತ್ತೆ ಪ್ರತಿಭಟನೆ ನಡೆಸುತ್ತೇವೆ.
ಗಣೇಶ್, ಗೌರವಾಧ್ಯಕ್ಷ, ಚಾಮರಾಜನಗರ ಜಿಲ್ಲಾ ಘಟಕ, ಕೆಆರ್‌ಎಸ್ ಪಕ್ಷ