ಕೊಳ್ಳೇಗಾಲದ ದಕ್ಷಿಣ ಬಡಾವಣೆಯಲ್ಲಿರುವ ಶ್ರೀಮಹದೇಶ್ವರ ಕಲ್ಯಾಣ ಮಂಟಪ ಮುಂಭಾಗದ ರಸ್ತೆಯಲ್ಲಿ ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಬೃಹದಾಕಾರದ ಮರ ಬಾಗಿರುವುದು.
ಕೊಳ್ಳೇಗಾಲ: ಪಟ್ಟಣದ ದಕ್ಷಿಣ ಬಡಾವಣೆಯಲ್ಲಿರುವ ಶ್ರೀಮಹದೇಶ್ವರ ಕಲ್ಯಾಣ ಮಂಟಪ ಮುಂಭಾಗದ ರಸ್ತೆಯಲ್ಲಿ ಬಾಗಿದ ಸ್ಥಿತಿಯಲ್ಲಿರುವ ಬೃಹದಾಕಾರದ ಮರ ಅಪಾಯಕ್ಕೆ ಆಹ್ವಾನ ನೀಡುತ್ತಿದೆ.
ಹಲವು ವರ್ಷಗಳ ಹಳೇ ಮರ ಇದಾಗಿದ್ದು ಬೇರು ಸಡಿಲಗೊಂಡಿದೆ. ಮರದ ಮೇಲೆ ರೆಂಬೆ, ಕೊಂಬೆಗಳು ಒಣಗಿದ್ದು ಯಾವಾಗ ಬೇಕಾದರೂ ಅಪಾಯ ಸಂಭವಿಸಬಹುದು. ಈ ರಸ್ತೆಯಲ್ಲಿ ಕಲ್ಯಾಣ ಮಂಟಪ, ಮೂರು ಮಹಡಿಯ ಕಾಂಪ್ಲೆಕ್ಸ್ ಕಟ್ಟಡವಿದ್ದು ಇದರಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಪ್ರಾದೇಶಿಕ ಕಚೇರಿ, ಬಟ್ಟೆ ಅಂಗಡಿಗಳು, ಸೈಬರ್ ಸೆಂಟರ್, ಟೀ, ಜ್ಯೂಸ್ ಅಂಗಡಿ ಇನ್ನಿತರ ಅಂಗಡಿಗಳಿದ್ದು ದಿನವಿಡೀ ವಾಹನ, ಜನ-ಜಂಗುಳಿ ಇರುತ್ತದೆ.
ಕಲ್ಯಾಣ ಮಂಟಪದ ಕಡೆಗೆ ಬಾಗಿದ ಸ್ಥಿತಿಯಲ್ಲಿರುವ ಮರವು ಯಾವಾಗ ಬೇಕಾದರೂ ಬೀಳಬಹುದಾಗಿದ್ದು ಸಾರ್ವಜನಿಕರು ಆತಂಕದಲ್ಲಿಯೇ ಈ ರಸ್ತೆಯಲ್ಲಿ ಸಂಚಾರಿಸುತ್ತಿದ್ದಾರೆ. ರಸ್ತೆಯಲ್ಲಿ ಜನರು ನಡೆದು ಹೋಗುವವರ ಮೇಲೆ ಒಣಗಿದ ಸಣ್ಣ ರೆಂಬೆಗಳು ಬಿದ್ದಿರುವ ಉದಾಹರಣೆಗಳಿವೆ. ಮಳೆ, ಗಾಳಿಯಲ್ಲಂತೂ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಿದೆ. ಹಾಗಾಗಿ ಮರ ಕಟಾವಿಗೆ ಅರಣ್ಯಾಧಿಕಾರಿಗಳು ಕೂಡಲೇ ಕ್ರಮವಹಿಸಬೇಕು. ಮುಂದಾಗುವ ಅನಾಹುತಗಳಿಗೆ ಅಧಿಕಾರಿಗಳೇ ಹೊಣೆಗಾರರಾಗಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ಮರ ಕಟಾವಿಗೆ ಅರಣ್ಯ ಇಲಾಖೆ ಹರಾಜು ಪ್ರಕ್ರಿಯೆ ನಡೆಸಿದ್ದು ಕಟಾವಿಗೂ ಅನುಮತಿಯನ್ನು ನೀಡಲಾಗಿದೆ. ಟೆಂಡರ್‌ದಾರರು ಮರ ಕಟಾವಿಗೆ ಮುಂದಾಗಿಲ್ಲ. ಈ ಬಗ್ಗೆ ಕ್ರಮವಹಿಸಿ ಕ್ರಮವಹಿಸಲಾಗುತ್ತದೆ.
ನಂದೀಶ್, ಡಿಆರ್‌ಎಫ್‌ಒ, ಅರಣ್ಯ ಇಲಾಖೆ