ಕೊಳ್ಳೇಗಾಲ ನಗರಸಭೆ ದುರಾಡಳಿತ ಹಾಗು ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷತೆ ಖಂಡಿಸಿ ಬಹುಜನ ಸಮಾಜ ಪಾರ್ಟಿ ಕೊಳ್ಳೇಗಾಲ ಶಾಖೆ ಪಟ್ಟಣದ ನಗರಸಭೆ ಕಚೇರಿ ಮುಂಭಾಗ ನಡೆಸುತ್ತಿದ್ದ ಪ್ರತಿಭಟನೆ ಸ್ಥಳಕ್ಕೆ ತಹಸೀಲ್ದಾರ್ ಬಸವರಾಜು ಅವರು ಭೇಟಿ ನೀಡಿ ಮನವಿ ಆಲಿಸಿದರು. ಎಂ.ಕೃಷ್ಣಮೂರ್ತಿ, ನಾಗಯ್ಯ, ಬಾಮಾ ಕೃಷ್ಣಮೂರ್ತಿ, ವಕೀಲ ಪುಟ್ಟಸ್ವಾಮಿ, ರವಿ, ಶಂಕರ್ ಇತರರಿದ್ದರು. 
ಚಾಮರಾಜನಗರ

ಬಹುಜನ ಸಮಾಜ ಪಾರ್ಟಿಯಿಂದ ಪ್ರತಿಭಟನೆ

ಕೊಳ್ಳೇಗಾಲ: ಕೊಳ್ಳೇಗಾಲ ನಗರಸಭೆ ದುರಾಡಳಿತ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ ಖಂಡಿಸಿ ಶುಕ್ರವಾರ ಬಹುಜನ ಸಮಾಜ ಪಾರ್ಟಿ ಕೊಳ್ಳೇಗಾಲ ಶಾಖೆ ವತಿಯಿಂದ ಪಟ್ಟಣದ ನಗರಸಭೆ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿತು.
ಬಹುಜನ ಸಮಾಜ ಪಾರ್ಟಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಮಾತನಾಡಿ, ಚಾಮರಾಜನಗರ ಸಂಸದರು, ಕೊಳ್ಳೇಗಾಲ ಶಾಸಕರು ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ಪರಿಶೀಲಿಸಿದರೆ ಆಡಳಿತ ಚುರುಕುಗೊಳ್ಳುತ್ತಿತ್ತು. ಇದ್ಯಾವುದನ್ನು ಮಾಡದ ಕಾರಣ ಅಧಿಕಾರಿಗಳು, ನೌಕರರು ಬೇಜವಾಬ್ದಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆಡಳಿತ ವ್ಯವಸ್ಥೆ ನಿಂತ ನೀರಾಗಿದೆ. ಇ-ಖಾತೆ, ಆಸ್ತಿ ನವೀಕರಣ ಟ್ರೇಡ್ ಲೆಸೆನ್ಸ್, ಜನನ ಮತ್ತು ಮರಣ ಪತ್ರ, ಸ್ಲಂ ಬಡಾವಣೆಗಳಿಗೆ ಹಕ್ಕುಪತ್ರ ವಿತರಣೆ ವಿಳಂಬ, ಹದಗೆಟ್ಟ ರಸ್ತೆ, ಯುಜಿಡಿ ಸಮಸ್ಯೆ ಹೀಗೆ ಹಲವು ಸಮಸ್ಯೆಗಳಿಂದ ಕೊಳ್ಳೇಗಾಲ ನಾಗರಿಕರು ಪರಿತಪಿಸುವಂತಾಗಿದೆ ಎಂದು ದೂರಿದರು.
ಪ್ರಸ್ತುತ ನಗರಸಭೆ ಅಧ್ಯಕ್ಷರಾಗಲಿ, ಸದಸ್ಯರಾಗಲಿ ಅಧಿಕಾರಿಗಳಿಗೆ ನಗರಸಭೆಯಲ್ಲಿ ಒತ್ತಡವಿಲ್ಲ. ಕೊಳ್ಳೇಗಾಲ ನಗರಸಭೆಗೆ ಜಿಲ್ಲಾಧಿಕಾರಿಗಳೇ ಆಡಳಿತಾಧಿಕಾರಿಗಳಾಗಿದ್ದಾರೆ. ಆಗಿದ್ದರೂ ಸಾರ್ವನಿಕರ ಕೆಲಸಗಳು ಆಗತ್ತಿಲ್ಲ ಏಕೆ?. ನಗರಸಭೆಯಿಂದ ನಾಗರಿಕರಿಗೆ ಸಿಗುವ ಎಲ್ಲ ಸೇವೆ ಗಳಿಗೆ ನಾಗರಿಕರಿಂದ ತೆರಿಗೆ, ಶುಲ್ಕ ಕಟ್ಟಿಸಿಕೊಳ್ಳಲಾಗುತ್ತಿದೆ. ಯಾವುದನ್ನು ಉಚಿತವಾಗಿ ನೀಡುತ್ತಿಲ್ಲ. ಆದರೂ ಕಾಲಮಿತಿಯೊಳಗೆ ಸಾರ್ವಜನಿಕರ ಕೆಲಸ ವಾಗುತ್ತಿಲ್ಲ. ಅಧಿಕಾರಿಗಳು, ನೌಕರರು ಜನರಿಂದ ಲಂಚ ಅಪೇಕ್ಷೆ ಇಟ್ಟುಕೊಂಡರೆ ಯಾವುದೇ ಕೆಲಸ ಮಾಡಲು ಸಾಧ್ಯವಿಲ್ಲ. ಇಂತಹ ಅಧಿಕಾರಿಗಳ ಮೇಲೆ ಕ್ರಮವಾ ಗಬೇಕು. ಮಾನವೀಯ ದೃಷ್ಟಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕಿದೆ. ಬಹುಜನ ಸಮಾಜ ಪಾರ್ಟಿ ಕೊಳ್ಳೇಗಾಲ ಪಟ್ಟಣದಲ್ಲಿರುವ ಸಮಸ್ಯೆಗಳನ್ನು ಪಟ್ಟಿ ಮಾಡಲಿದೆ. ಕೂಡಲೇ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಕರೆಯಬೇಕು ಎಂದು ಆಗ್ರಹಿಸಿದರು.
ತಾಲೂಕು ಉಸ್ತುವಾರಿ ರಂಗಸ್ವಾಮಿ (ರವಿ) ಮಾತನಾಡಿ, ಕಾವೇರಿ ಟು ಮೂಲಕ ಇ-ಸ್ವತ್ತು ಅರ್ಜಿಯನ್ನು ಸ್ವೀಕರಿಸಿ ಸಿನೀಯರಿಟಿ ಪ್ರಕಾರ ಇ-ಸ್ವತ್ತನ್ನು ನೀಡಬೇಕು ಎಂದು ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ಶಂಕರ್ ಮಾತನಾಡಿ, ನಗರಸಭೆಯಲ್ಲಿ ಸಾರ್ವ ಜನಿಕರ ಕೆಲಸಗಳ ವಿಳಂಬವಾಗುತ್ತಿದೆ. ಹೀಗೆ ಮುಂದುವರಿದರೆ ಪಕ್ಷದ ವತಿಯಿಂದ ಉಗ್ರ ಹೋರಾಟ ಮಾಡುತ್ತೇವೆ ಎಂದರು.
ಮನವಿ ಸ್ವೀಕರಿಸಿದ ತಹಸೀಲ್ದಾರ್ ಬಸವರಾಜು ಮಾತನಾಡಿ, ಕೊಳ್ಳೇಗಾಲ ನಗರಸಭೆಯಲ್ಲಿ ನಾಗರಿಕರ ಸೇವೆಗಳು ವಿಳಂಬವಾಗುತ್ತಿವೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಾರ್ವಜನಿಕರ ಸಭೆ ಆಗಬೇಕು ಇನ್ನಿತರ ಬೇಡಿಕೆಯನ್ನು ಒಳಗೊಂಡಂತೆ ಪ್ರತಿಭಟನೆ ನಡೆಸಲಾಗಿದೆ. ಪ್ರತಿಭಟನಾಕಾರರು ನೀಡಿದ ಮನವಿಯನ್ನು ಜಿಲ್ಲಾಧಿಕಾರಿ ಗಮನಕ್ಕೆ ತರಲಾಗುತ್ತದೆ ಎಂದರು.
ಕಾಂಗ್ರೆಸ್‌ನಿಂದ ದಲಿತರಿಗೆ ದ್ರೋಹ: 2023ರ ವಿಧಾನ ಸಭಾ ಚುನಾವಣೆ, 2024ರ ಲೋಕಸಭಾ ಚುನಾವಣೆಯಲ್ಲಿ ಎಸ್ಸಿ-ಎಸ್ಟಿ ಸಮುದಾಯ, ಮುಸಲ್ಮಾನರು ಕಾಂಗೆಸ್‌ಗೆ ಅತೀ ಹೆಚ್ಚುಮತ ನೀಡಿದ್ದರು. ಹೈಕಮಾಂಡ್ ಆದೇಶದಂತೆ ಸಿದ್ದರಾಮಯ್ಯ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭ ದಲಿತ ಮುಖ್ಯಮಂತ್ರಿ ಆಗಬೇಕೆಂಬ ಆಶಯವನ್ನು ದಲಿತರು ಹೊಂದಿದ್ದರು. ಆದರೆ, ಕಾಂಗ್ರೆಸ್ ಹೈಕಮಾಂಡ್ ದಲಿತರಿಗೆ ದ್ರೋಹ ಮಾಡಿದೆ. ಪಕ್ಷದಲ್ಲಿ ಮಲ್ಲಿಕಾರ್ಜುನ ಖರ್ಗೆ ಜಿ.ಪರಮೇಶ್ವರ್, ಕೆ.ಎಚ್.ಮುನಿಯಪ್ಪ ಹಿರಿಯರಾಗಿದ್ದರೂ ಸಿಎಂ ಆಗುವ ಅವಕಾಶ ನೀಡಲಿಲ್ಲ. ದಲಿತರು ವೋಟ್ ಬ್ಯಾಂಕ್ ಆಗಿದ್ದಾರೆ. ದಲಿತರಿಗೆ ಪ್ರಧಾನಿಯಾಗಲು, ಮುಖ್ಯಮಂತ್ರಿಯಾಗಲು ಅವಕಾಶ ಕೊಡುತ್ತಿಲ್ಲ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷ ದಲಿತರಿಗೆ ಅನ್ಯಾಯ ಮಾಡುತ್ತಿದೆ. ಸಿದ್ದರಾಮಯ್ಯ ಅವರ ರಾಜೀನಾಮೆ ಬಳಿಕ ಶಾಸಕಾಂಗ ಸಭೆ ಕರೆಯದೆ ಡಿ.ಕೆ.ಶಿವಕುಮಾರ್ ಅವರನ್ನು ಮುಖ್ಯಮಂತ್ರಿ ಎಂದು ಘೋಷಿಸಲು ಹೊರಟ್ಟಿದ್ದಾರೆ. ಕೂಡಲೇ ಶಾಸಕರ ಸಭೆ ಕರೆದು ದಲಿತರನ್ನೆ ಮುಖ್ಯ ಮಂತ್ರಿ ಮಾಡಬೇಕು. ಇಲ್ಲವೇ ದಲಿತರನ್ನು, ಮುಸಲ್ಮಾನರನ್ನು ಕಾಂಗ್ರೆಸ್ ಪಕ್ಷ ವೋಟ್ಯ ಬ್ಯಾಂಕ್ ಮಾಡಿಕೊಂಡಿದೆ ಎಂದು ಘೋಷಿಸಲಿ ಎಂದು ಬಿಎಸ್ಪಿ ರಾಜ್ಯಾಧ್ಯಕ್ಷ ಎಂ.ಕೃಷ್ಣಮೂರ್ತಿ ಹೇಳಿದರು.
ಬಿಎಸ್ಪಿ ರಾಜ್ಯ ಕಾರ್ಯದರ್ಶಿ ನಾಗಯ್ಯ, ಜಿಲ್ಲಾಧ್ಯಕ್ಷ ಬಾಮಾ ಕೃಷ್ಣಮೂರ್ತಿ, ಜಿಲ್ಲಾ ಉಸ್ತುವಾರಿ ವಕೀಲ ಪುಟ್ಟಸ್ವಾಮಿ ಮಾತನಾಡಿದರು.
ರಾಜ್ಯ ಸಮಿತಿ ಸದಸ್ಯ ಮಣಿ, ತಾಲೂಕು ಅಧ್ಯಕ್ಷ ಶಂಕರ್, ತಾಲೂಕು ಅಧ್ಯಕ್ಷ ಶಂಕರ್ ಚೇತನ್, ಟೌನ್ ಅಧ್ಯಕ್ಷ ಶಶಿಧರ್, ಪ್ರಧಾನ ಕಾರ್ಯದರ್ಶಿ ಶಿವು ಉತ್ತಂಬಳ್ಳಿ, ಮಹಿಳಾ ಸಂಘಟನೆಯ ಕವಿತಾ, ಶಿವಮ್ಮ, ನಗರಸಭೆ ಮಾಜಿ ಸದಸ್ಯ ಕೆ.ಕೆ.ಮೂರ್ತಿ, ಮಧುಚಂದ್ರ, ಮುಖಂಡ ಮಹದೇವಸ್ವಾಮಿ, ರೈತ ಮುಖಂಡ ದಶರಥ, ರಾಮಕೃಷ್ಣ, ಕೆಆರ್‌ಎಸ್ ಪಕ್ಷದ ಗಣೇಶ್, ಎಸ್‌ಡಿಪಿಐ ಸಂಘ ಟನೆಯ ಇಮ್ರಾನ್, ಪ್ರಗತಿಪರ ಒಕ್ಕೂಟ ಸಂಚಾಲಕ ದಿಲೀಪ್ ಸಿದ್ದಪ್ಪಾಜಿ ಸೇರಿದಂತೆ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಇದ್ದರು.