ಒಳ ಮೀಸಲಾತಿ ಅನ್ಯಾಯ ಖಂಡಿಸಿ ಕೊಳ್ಳೇಗಾಲದಲ್ಲಿ ತಾಲೂಕು ಪರಿಶಿಷ್ಟ ಜಾತಿಗಳ ಬಲಗೈ ಸಮುದಾಯಗಳ ಒಕ್ಕೂಟ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಕೊಳ್ಳೇಗಾಲ: ಒಳ ಮೀಸಲಾತಿ ಅನ್ಯಾಯ ಖಂಡಿಸಿ ಪಟ್ಟಣದಲ್ಲಿ ತಾಲೂಕು ಪರಿಶಿಷ್ಟ ಜಾತಿಗಳ ಬಲಗೈ ಸಮುದಾಯಗಳ ಒಕ್ಕೂಟದಿಂದ ಗುರುವಾರ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು.
ಎಂಜಿಎಸ್‌ವಿ ಜೂನಿಯರ್ ಕಾಲೇಜು ಮೈದಾನದಲ್ಲಿ ಕೊಳ್ಳೇಗಾಲ ಮತ್ತು ಹನೂರು ತಾಲೂಕಿನ ವಿವಿಧ ಗ್ರಾಮಗಳ ಮುಖಂಡರು, ಪಟ್ಟಣದ ಭೀಮನಗರ ಯಜಮಾನರು, ಮುಖಂಡರು, ವಿವಿಧ ಬಡಾವಣೆ ಜನರು, ಅಂಬೇಡ್ಕರ್ ಸಂಘಟನೆಗಳ ಹೋರಾಟಗಾರರು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಬಸ್ ನಿಲ್ದಾಣದ ರಸ್ತೆ ಮಾರ್ಗವಾಗಿ ಡಾ.ವಿಷ್ಣುವರ್ಧನ್ ರಸ್ತೆ, ಡಾ.ರಾಜ್ ಕುಮಾರ್ ರಸ್ತೆಯಲ್ಲಿ ಸಾಗಿ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಂಬೇಡ್ಕರ್ ವೃತ್ತ ಮತ್ತು ಬ್ರದರನ್ ಚರ್ಚ್ ವೃತ್ತದಲ್ಲಿ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ನಂತರ ತಾಲೂಕು ಕಚೇರಿ ಮುಂಭಾಗ ಸಮಾವೇಶಗೊಂಡು ಒಳ ಮೀಸಲಾತಿ ಅನ್ಯಾಯವನ್ನು ಖಂಡಿಸಿದರು.
ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಅಕ್ರೋಶ: ಪ್ರತಿಭಟನೆ ಮೆರವಣಿಗೆಯ ಉದ್ದಕ್ಕೂ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಎಚ್.ಸಿ.ಮಹದೇವಪ್ಪ, ಗೃಹಮಂತ್ರಿ ಜಿ.ಪರಮೇಶ್ವರ್ ಹಾಗೂ ನಾಗಮೋಹನ್ ದಾಸ್ ಅವರ ಚಿತ್ರಗಳಿಗೆ ಚಪ್ಪಲಿಯಲ್ಲಿ ಒಡೆದು ಬಳಿಕ ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರು ಗಂಗೋತ್ರಿಯ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಡಾ.ಕೆ.ಪಿ.ರಮೇಶ್ ಮಾತನಾಡಿ, ಅವೈಜ್ಞಾನಿಕ ಒಳ ಮೀಸಲಾತಿಯನ್ನು ಸಿಎಂ ಸಿದ್ದರಾಮಯ್ಯ, ಸಚಿವ ಎಚ್.ಸಿ. ಮಹದೇವಪ್ಪ ಅವರು ಜಾರಿ ಮಾಡಲು ಮುಂದಾಗಿದ್ದಾರೆ. ಇದರಿಂದ ಬಲಗೈ ಸಮುದಾಯಕ್ಕೆ ಅನ್ಯಾಯವಾಗಲಿದೆ. ಹೆಸರಿಗೆ ಮಾತ್ರ ದಲಿತ ನಾಯಕರು ಎಂದು ಹೇಳಿಕೊಳ್ಳುತ್ತಿದ್ದೀರಿ, ಇದನ್ನು ಸಚಿವ ಪರಮೇಶ್ವರ್, ಪ್ರಿಯಾಂಕ್ ಖರ್ಗೆ ಪ್ರಶ್ನಿಸುತ್ತಿಲ್ಲ ಎಂದು ಕಿಡಿಕಾರಿದರು.
ಒಳ ಮೀಸಲಾತಿಯಲ್ಲಿ ಎ.ಬಿ.ಸಿ ಪ್ರವರ್ಗ ಪದ್ಧತಿ ಮಾಡಿ ಎ ವರ್ಗ (ಮಾದಿಗ ಸಮುದಾಯ)ಕ್ಕೆ ಎಲ್ಲ ಅವಕಾಶವನ್ನು ನೀಡಲಾಗುತ್ತಿದೆ. ಇದ್ದರಿಂದ ಬಿ ವರ್ಗಕ್ಕೆ ಸೇರಿರುವ ಹೊಲೆಯರು, ಸಿ ವರ್ಗದ ಇತರೆ ಜಾತಿಗಳಿಗೆ ಅನ್ಯಾಯವಾಗುತ್ತಿದೆ. ಈ ವರ್ಗೀಕರಣ ಪ್ರಕ್ರಿಯೆಯೇ ಸರಿಯಿಲ್ಲ. ಇದಕ್ಕೆ ವಿರೋಧ ವ್ಯಕ್ತವಾದರೂ ಸರ್ಕಾರ ಜಾರಿ ಮಾಡಲು ಹೊರಟಿದೆ. ಈ ತಿಂಗಳೊಳಗೆ ಈ ರೋಸ್ಟರ್ ಬಿಂದುವಿನಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸದಿದ್ದರೆ, ಹೊಸ ಜಾತಿ ಪ್ರಮಾಣ ನೀಡುತ್ತಿರುವು ದನ್ನು ನಿಲ್ಲಿಸದಿದ್ದರೆ ಮತ್ತು ಆದಿ ಕರ್ನಾಟಕ, ಆದಿ ದ್ರಾವಿಡ, ಆದಿ ಆಂಧ್ರ ಯಾವ ಪ್ರವರ್ಗಕ್ಕೂ ಸೇರದಿರುವುದನ್ನು ಸರಿಪಡಿಸದಿದ್ದರೆ ಮುಂದಿನ ದಿನಗಳಲ್ಲಿ ಚಾಮರಾಜನಗರ ಜಿಲ್ಲೆಯಿಂದ ತೆರಳಿ ವಿಧಾನಸೌದ ಮುತ್ತಿಗೆ ಹಾಕುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಹೋರಾಟಗಾರ ಚೋರನಳ್ಳಿ ಶಿವಣ್ಣ ಮಾತನಾಡಿ, ಸಂವಿಧಾನದಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾತಿ ನೀಡುವ ಅವಕಾಶವಿದೆ. ಒಳ ಮೀಸಲಾತಿ ನೀಡಲು ಅವಕಾಶವಿಲ್ಲ. ಆದರೂ ಸರ್ಕಾರ ಒಳ ಮೀಸಲಾತಿ ಕಾಯ್ದೆ ಜಾರಿ ಮಾಡಲು ಹೊರಟಿರುವುದು ಸರಿಯಲ್ಲ ಎಂದರು. ಮುಖಂಡ ಮುಳ್ಳೂರು ಶಿವಮಲ್ಲು ಮಾತನಾಡಿದರು. ಬಳಿಕ ಹೋರಾಟಗಾರರು ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಉಪವಿಭಾಗ ಅಧಿಕಾರಿ ದಿನೇಶ್ ಕುಮಾರ್ ಮೀನಾ ಅವರಿಗೆ ಮನವಿ ನೀಡಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಕಾರ್ಯಾಧ್ಯಕ್ಷ ಬಿ.ಪುಟ್ಟಸ್ವಾಮಿ, ಎಚ್.ಕೆ.ಟ್ರಸ್ಟ್ ಕಾರ್ಯದರ್ಶಿ ಪ್ರೇಮಲತಾ, ಡಾ.ಬಿ.ಆರ್.ಅಂಬೇಡ್ಕರ್ ಸಂಘದ ಅಧ್ಯಕ್ಷ ಆನಂದಮೂರ್ತಿ, ಉಪಾಧ್ಯಕ್ಷ ಕಿರಣ್, ಕಾರ್ಯದರ್ಶಿ ಪಾಪಣ್ಣ, ಸಹ ಕಾರ್ಯದರ್ಶಿ ಶಶಿಧರ್, ಖಜಾಂಚಿ ರಾಜೇಶ್, ಮುಖಂಡರಾದ ಎಸ್.ಸಿದ್ದಪ್ಪಾಜಿ, ಶಂಕರ್ ಚೇತನ್, ದಿಲೀಪ್ ಸಿದ್ದಪ್ಪಾಜಿ, ಓಲೆ ಮಹದೇವ, ಅಣಗಳ್ಳಿ ಬಸವರಾಜು, ನಟರಾಜು ಮಾಳಿಗೆ, ಮುಳ್ಳೂರು ಕಮಲ್, ಶೇಖರ್ ಬುದ್ಧ, ವಕೀಲರ ಸಂಘದ ಅಧ್ಯಕ್ಷ ಬಸವರಾಜು, ಮುಳ್ಳೂರು ಶಿವಮಲ್ಲು, ಚೇತನ್ ದೊರೆ, ವರದರಾಜು, ಡಾ.ಗುರುಮೂರ್ತಿ, ಕಾರ್ತಿಕ್ ತಗಡೂರು, ಚೊರನಹಳ್ಳಿ ಶಿವಣ್ಣ, ಯಡದೊರೆ ಮಹದೇವ, ಶಿವಶಂಕರ್ ಮಹಿಳಾ ಸಂಘಟನೆಯ ಶಿವಮ್ಮ ಮತ್ತಿತರಿದ್ದರು.