ಕೊಳ್ಳೇಗಾಲ ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಬೆಂಗಳೂರಿನ ಜಿ.ಆರ್.ಫಿಲಂಸ್ ವತಿಯಿಂದ ಉಚಿತವಾಗಿ ಕಲಿಕಾ ಸಾಮಗ್ರಿಗಳು ಹಾಗೂ ಶೂ ಮತ್ತು ಟಿ-ಶರ್ಟ್ ವಿತರಿಸಲಾಯಿತು. ಗಣೇಶ್‌ರಾವ್ ಕೇಸರ್ಕರ್, ಎಂ.ಮಂಜುಳಾ, ರವೀಂದ್ರ, ಚೆಲುವರಾಜ್, ಮಿಮಿಕ್ರಿ ಗೋಪಿ, ಮೋಹನ್, ಜಿ.ಕುಮಾರಪ್ಪ, ನಂಜುಂಡಸ್ವಾಮಿ, ವಾಸು ಇತರರಿದ್ದರು.
ಕೊಳ್ಳೇಗಾಲ: ತಾಲೂಕಿನ ಹೊಂಡರಬಾಳು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಬೆಂಗಳೂರಿನ ಜಿ.ಆರ್.ಫಿಲಂಸ್ ವತಿಯಿಂದ ಉಚಿತವಾಗಿ ಕಲಿಕಾ ಸಾಮಗ್ರಿ ಹಾಗೂ ಶೂ ಮತ್ತು ಟಿ-ಶರ್ಟ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಹೊಂಡರಬಾಳು ಶಂಕಿನಮಠದ ಶ್ರೀನೀಲಕಂಠ ಶಿವಾಚಾರ್ಯಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಶಾಲೆ ದತ್ತು ಪಡೆದಿರುವ ಚಿತ್ರನಟ ಗಣೇಶ್‌ರಾವ್ ಕೇಸರ್ಕರ್ ಶಾಲೆಯ ಎಲ್ಲ ಮಕ್ಕಳಿಗೆ ಶೂ, ಟಿ-ಶರ್ಟ್ ವಿತರಿಸಿ ಮಾತನಾಡಿ, ಹೊಂಡರಬಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಮ್ಮ ತಂದೆ ಹೆಸರಿನಲ್ಲಿ 3 ವರ್ಷಗಳ ಹಿಂದೆ ಶಾಲೆಯನ್ನು ದತ್ತು ಪಡೆದ ಬಳಿಕ ಶಾಲೆ ಕಟ್ಟಡಕ್ಕೆ ಬಣ್ಣ ಬಳಿಸಲಾಗಿದೆ. ಕಳೆದ ವರ್ಷವೂ ಸ್ಮಾರ್ಟ್ ತರಗತಿಗಳನ್ನು ತೆರೆಯಲಾಯಿತು. ಅದೇ ರೀತಿ ಈ ವರ್ಷ ಶೂ, ಟಿ-ಶರ್ಟ್ ವಿತರಿಸಲಾಗಿದೆ ಎಂದರು.
ಖಾಸಗಿ ಶಾಲೆಯ ವ್ಯಾಮೋಹ ಹೆಚ್ಚಾಗಿದೆ. ಸರ್ಕಾರಿ ಶಾಲೆಯಲ್ಲೂ ನುರಿತ ಶಿಕ್ಷಕರಿದ್ದು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯಲಿದೆ. ಹಾಗಾಗಿ ಸರ್ಕಾರಿ ಶಾಲೆಗಳನ್ನು ಉಳಿಸಬೇಕೆಂದು ನಮ್ಮ ಊರಿನ ಸರ್ಕಾರಿ ಶಾಲೆಯನ್ನು ದತ್ತು ಪಡೆದು ಮಕ್ಕಳಿಗೆ ಬೇಕಾದ ಪುಸ್ತಕ, ಬಟ್ಟೆ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುತ್ತಾ ಬಂದಿರುವುದಾಗಿ ತಿಳಿಸಿದರು. ಪಾಲಕರು ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಬೇಕು. ಶಿಕ್ಷಣದಿಂದ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾಗಲು ಸಾಧ್ಯ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಮಂಜುಳಾ ಮಾತನಾಡಿ, ಚಿತ್ರನಟ ಗಣೇಶ್‌ರಾವ್ ಕೇಸರ್ಕರ್ ಅವರು ಓದಿದ ಶಾಲೆಯನ್ನು ದತ್ತು ಪಡೆದು ಇಲಾಖೆಯ ನಿಯಮದಂತೆ ನಡೆಸಿಕೊಂಡು ಬರುತ್ತಿದ್ದಾರೆ. ಪ್ರತಿ ವರ್ಷವೂ ಕಲಿಕಾ ಸಾಮಗ್ರಿ ಮತ್ತು ಸ್ಮಾರ್ಟ್ ಕ್ಲಾಸ್ ಸೇರಿದಂತೆ ವಿಶೇಷವಾದ ಸೌಕರ್ಯಗಳನ್ನು ನೀಡಿದ್ದಾರೆ. ಸಮಾಜಕ್ಕೆ ತಮ್ಮ ಕೈಲಾದಷ್ಟು ಸೇವೆ ಮಾಡುತ್ತಿದ್ದಾರೆ ಎಂದರು.
ಪೊಲೀಸ್ ವೃತ್ತ ನಿರೀಕ್ಷಕ ರವೀಂದ್ರ, ಪಿಎಸ್‌ಐ ಚಲುವರಾಜ್, ಮಿಮಿಕ್ರಿ ಗೋಪಿ, ನಿವೃತ್ತ ಪ್ರಾಂಶುಪಾಲ ಮೋಹನ್, ಜಿ.ಕುಮಾರಪ್ಪ, ನಂಜುಂಡಸ್ವಾಮಿ, ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸವಿತಾ, ಇಸಿಒ ವಿಜಯಕುಮಾರ್, ಮುಖಂಡರಾದ ವೀರಭದ್ರಸ್ವಾಮಿ, ಮುಳ್ಳೂರು ನಾಗರಾಜು, ಕೃಷ್ಣಪ್ಪ, ಎಸ್‌ಡಿಎಂಸಿ ಅಧ್ಯಕ್ಷೆ ಪುಷ್ಪರಾಣಿ ಇತರರಿದ್ದರು.