ಹನೂರಿನಲ್ಲಿ ಆಯೋಜಿಸಿದ್ದ ಕೆಂಪೇಗೌಡ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಪ್ರಥಮ ಸ್ಥಾನ ಪಡೆದ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಕ್ಲಾಸಿಕ್ ಕ್ರಿಕೆಟರ್ಸ್‌ ತಂಡಕ್ಕೆ ಬಹುಮಾನ ವಿತರಿಸಲಾಯಿತು. ಪ್ರಶಾಂತ್‌ಗೌಡ, ರಾಜುಗೌಡ, ಆನಂದಕುಮಾರ್, ನಾಗೇಂದ್ರ ಇತರರಿದ್ದರು. 
ಚಾಮರಾಜನಗರ

ಕೆ.ಎಂ.ದೊಡ್ಡಿ ಕ್ಲಾಸಿಕ್ ಕ್ರಿಕೆಟರ್ಸ್‌ ತಂಡ ಪ್ರಥಮ

ರವಿಕುಮಾರ್ ಪಿ. ಕೆ

ಪ್ರಮುಖ ಮುಖ್ಯಾಂಶಗಳು

  • ವಿಭಾಗೀಯ ಮಟ್ಟದ ಕೆಂಪೇಗೌಡ ಕ್ರಿಕೆಟ್ ಲೀಗ್ ಪಂದ್ಯ

ಹನೂರು:

ಪಟ್ಟಣದ ಶ್ರೀಮಹದೇಶ್ವರ ಕ್ರೀಡಾಂಗಣದಲ್ಲಿ ನಾಡಪ್ರಭು ಕೆಂಪೇಗೌಡ ಜಯಂತಿ ಅಂಗವಾಗಿ ಅಭಿಮಾನಿ ಬಳಗದ ವತಿಯಿಂದ ಆಯೋಜಿಸಿದ್ದ ವಿಭಾಗೀಯಮಟ್ಟದ ಕೆಂಪೇಗೌಡ ಕ್ರಿಕೆಟ್ ಲೀಗ್ ಪಂದ್ಯದಲ್ಲಿ ಮಂಡ್ಯ ಜಿಲ್ಲೆಯ ಕೆ.ಎಂ.ದೊಡ್ಡಿ ಕ್ಲಾಸಿಕ್ ಕ್ರಿಕೆಟರ್ಸ್‌ ತಂಡ ಪ್ರಥಮ ಸ್ಥಾನ ಪಡೆಯಿತು.

ಮೂರು ದಿನಗಳ ಕಾಲ ಆಯೋಜಿಸಿದ್ದ ಈ ಟೂರ್ನಿಯಲ್ಲಿ ಹನೂರಿನ ಟೀಮ್ ವಾರಿಯರ್ಸ್‌, ಎಂಬಿಎಂ, ಕೌದಳ್ಳಿಯ ಇಬ್ರಾಹಿಂ ಕ್ರಿಕೆಟರ್ಸ್‌, ತಿ.ನರಸೀಪುರದ ಕನ್ನಡ ತಾಯಿ ಮಕ್ಕಳು, ನವಚೇತನ, ಗುಂಡ್ಲುಪೇಟೆಯ ರಿವೇಂಜ್ ಬುಲ್ಸ್, ಚಾಮರಾಜನಗರದ ಪಿಆರ್‌ಕೆ, ಕುದೇರಿನ ದೋಸ್ತ್, ಎಚ್.ಡಿ ಕೋಟೆಯ ಕಬಿನಿ, ನಂಜನಗೂಡಿನ ಇಲೆವೆನ್, ಮಂಡ್ಯದ ಕ್ಲಾಸಿಕ್ ಹಾಗೂ ಕೆ.ಆರ್.ಪೇಟೆಯ ಹನುಮಾನ್ ಕ್ರಿಕೆಟರ್ಸ್‌ ತಂಡಗಳು ಭಾಗವಹಿಸಿದ್ದವು.
ಭಾನುವಾರ ಸಂಜೆ ನಡೆದ ಫೈನಲ್ ಪಂದ್ಯದಲ್ಲಿ ತಿ.ನರಸೀಪುರದ ಕನ್ನಡ ತಾಯಿ ಮಕ್ಕಳ ತಂಡ 6 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 63 ಗಳಿಸಿದರೆ, ಕೆ.ಎಂ.ದೊಡ್ಡಿಯ ಕ್ಲಾಸಿಕ್ ಕ್ರಿಕೆಟರ್ಸ್‌ ತಂಡ 5.5 ಓವರ್‌ಗಳಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿ 64 ರನ್ ಗಳಿಸಿ ವಿಜಯ ಸಾಧಿಸಿತು.
ಪ್ರಥಮ ಸ್ಥಾನ ಪಡೆದ ಕ್ಲಾಸಿಕ್ ತಂಡಕ್ಕೆ 1 ಲಕ್ಷ ರೂ, ದ್ವಿತೀಯ ಸ್ಥಾನ ಪಡೆದ ಕನ್ನಡ ತಾಯಿ ಮಕ್ಕಳ ತಂಡಕ್ಕೆ 50 ಸಾವಿರ ರೂ.ನಗದು ಹಾಗೂ ಟ್ರೋಪಿ ನೀಡಿ ಗೌರವಿಸಲಾಯಿತು. ಕೆ.ಎಂ.ದೊಡ್ಡಿ ಕ್ಲಾಸಿಕ್ ಕ್ರಿಕೆಟರ್ಸ್‌ ತಂಡದ ಸುಪ್ರೀತ್ ಅತ್ತುತ್ಯಮ ಆಟಗಾರ ಪ್ರಶಸ್ತಿಗೆ ಭಾಜನರಾದರು.
ಮೈಸೂರು ನಗರ ಪಾಲಿಕೆ ಸದಸ್ಯ ಪ್ರಶಾಂತ್‌ಗೌಡ, ಪಪಂ ಮಾಜಿ ಅಧ್ಯಕ್ಷ ರಾಜುಗೌಡ, ಉಪಾಧ್ಯಕ್ಷ ಆನಂದ್‌ಕುಮಾರ್, ಪಿಎಸಿಸಿ ನಿರ್ದೇಶಕ ಲಿಂಗೇಗೌಡ, ಲಯನ್ಸ್ ಕ್ಲಬ್ ಉಪಾಧ್ಯಕ್ಷ ನವನೀತ್‌ಗೌಡ, ಒಕ್ಕಲಿಗರ ಸಂಘದ ಜಿಲ್ಲಾಧ್ಯಕ್ಷ ನಾಗೇಂದ್ರ, ಇನ್‌ಸ್ಪೆಕ್ಟರ್ ಆನಂದಮೂರ್ತಿ ಮತ್ತಿತರರಿದ್ದರು.