ಚಾಮರಾಜನಗರದ ಶ್ರೀಭುವನೇಶ್ವರಿ ವೃತ್ತದಲ್ಲಿ ಕರವೇ ಮುಖಂಡರು ಪ್ರತಿಭಟನೆ ನಡೆಸಿದರು. 
ಚಾಮರಾಜನಗರ

ತಮಿಳುನಾಡಿಗೆ ಕಾವೇರಿ ನೀರು ಬಿಡುವುದನ್ನು ಖಂಡಿಸಿ ಕರವೇ ವತಿಯಿಂದ ಧರಣಿ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಭುವನೇಶ್ವರ ವೃತ್ತದಲ್ಲಿ ಪ್ರತಿಭಟನೆ
  • ತಮಿಳುನಾಡಿಗೆ ನೀರು ಹರಿಸದಂತೆ ಆಗ್ರಹ
ಚಾಮರಾಜನಗರ: ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ತಮಿಳುನಾಡಿಗೆ ನೀರು ಬಿಡುವ ಆದೇಶವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀ ಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ಪ್ರತಿಭಟನೆ ನಡೆಸಿದರು. ಕಾವೇರಿ ನೀರು ನಿಯಂತ್ರಣ ಸಮಿತಿ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆ ಕೂಗಿ, ಕಪ್ಪು ಪಟ್ಟಿ ಧರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಕ್ವಾಲಿಟಿ ನವೀನ್ ಮಾತನಾಡಿ, ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರ ತಮಿಳುನಾಡಿಗೆ ಪ್ರತಿದಿನ 3 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡುವಂತೆ ಆದೇಶ ಮಾಡಿರುವುದು ರಾಜ್ಯದ ಪಾಲಿಗೆ ಮರಣ ಶಾಸನವಾಗಿದೆ. ಕೂಡಲೇ ಕಾವೇರಿ ನೀರು ನಿಯಂತ್ರಣ ಸಮಿತಿ ಈ ಆದೇಶವನ್ನು ವಾಪಸ್ ಪಡೆಯಬೇಕು. ಇಲ್ಲವಾದರೇ ಮುಂದಿನ ದಿನಗಳಲ್ಲಿ ರಾಜ್ಯವನ್ನು ಬಂದ್ ಮಾಡುವ ಮೂಲಕ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಈ ಬಾರಿ ಅಗತ್ಯ ಮಳೆಯಾಗದೇ ಬರದ ಛಾಯೇ ನಿರ್ಮಾಣವಾಗಿದೆ. ರೈತರು ಕೃಷಿಗೆ ನೀರು ಇಲ್ಲದೇ ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಮಗೆ ಕುಡಿಯಲು ನೀರು ಸಮಸ್ಯೆ ಇರುವಾಗ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡಬಾರದು. ಲ
ರಾಜ್ಯ ಕಾಂಗ್ರೆಸ್ ಸರ್ಕಾರ ಕಾವೇರಿ ನೀರು ನಿಯಂತ್ರಣ ಸಮಿತಿಯ ಆದೇಶವನ್ನು ತಿರಸ್ಕಾರ ಮಾಡಬೇಕು. ಯಾವುದೇ ಕಾರಣಕ್ಕೂ ತಮಿಳುನಾಡಿಗೆ ನೀರು ಹರಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಸಂಘಟನೆಯ ತಾಲೂಕು ಪ್ರಧಾನ ಕಾರ್ಯದರ್ಶಿ ಅರ್ಜುನ್, ಉಪಾಧ್ಯಕ್ಷರಾದ ಉಮೇಶ್ ಸ್ಟ್ರೀಟ್, ಬಾಬು ರಾಮಸಮುದ್ರ, ಅವಿನಾಶ್, ಕಾರ್ಮಿಕ ಘಟಕದ ಅಧ್ಯಕ್ಷ ಹರೀಶ್ ನಾಯಕ್, ಕೃಷ್ಣನಾಯಕ್, ಕಿರಣ್ ಸಾಣೇಗಾಲ, ರಾಜೇಂದ್ರ, ಟೌನ್ ಅಧ್ಯಕ್ಷ ಮಹೇಂದ್ರ ಉಪ್ಪಾರ್, ಮನೋಜ್, ಮಹಾದೇವಸ್ವಾಮಿ, ದೊರೆಸ್ವಾಮಿ, ಗಣೇಶ್, ನಲ್ಲೂರು ನಟರಾಜ್, ಮಹದೇವಸ್ವಾಮಿ, ಚಂದ್ರು,ರಿಜ್ವಾನ್, ಸಫಾನ್, ಅದ್ನಾನ, ಸಾಹಿದ್ ಹಾಗೂ ಇತರರು ಭಾಗವಹಿಸಿದ್ದರು.