ಚಾಮರಾಜನಗರದ ಜಿಲ್ಲಾಡಳಿತ ಭವನದ ಮುಂಭಾಗ ಕರವೇ ಸಂಘನೆಯ ಸದಸ್ಯರು ಬುಧವಾರ ಪ್ರತಿಭಟನೆ ನಡೆಸಿದರು. ಎಚ್.ಎನ್.ಮಂಜೇಶ್, ರಾಜೇಂದ್ರ ನಾಯಕ್, ಅರ್ಜುನ್, ರಾಘವೇಂದ್ರ, ಹೇಮಂತ್, ಸಂತೋಷ್, ಆಯಾಜ್ ಕನ್ನಡಿಗ, ರಮೇಶ್ ನಾಯಕ್, ಮಹದೇವಸ್ವಾಮಿ, ಭಾಗ್ಯಲಕ್ಷ್ಮಿ ಮತ್ತು ಇತರರಿದ್ದರು. 
ಚಾಮರಾಜನಗರ

ರಾಜ್ಯಪಾಲರ ವಿರುದ್ಧ ಕರವೇ ಪ್ರತಿಭಟನೆ

ಪ್ರಮುಖ ಮುಖ್ಯಾಂಶಗಳು

  • ಹಿಂದಿ ಹೇರಿಕೆ ಮಾಡುತ್ತಿದ್ದಾರೆ ಎಂದು ಆರೋಪ
  • ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆ ಹಿಂದಿಗೆ ಗ್ರೇಡಿಂಗ್ ವ್ಯವಸ್ಥೆ
ಚಾಮರಾಜನಗರ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಗ್ರೇಡಿಂಗ್ ವ್ಯವಸ್ಥೆ ಜಾರಿಗೆ ತಂದ ನಿರ್ಧಾರವನ್ನು ಮರು ಪರಿಶೀಲಿಸುವಂತೆ ರಾಜ್ಯಪಾಲ ತಾವರ್ ಚಂದ್ ಗೆಹ್ಲೋಟ್ ಪತ್ರ ಬರೆದಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಸದಸ್ಯರು ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಡಳಿತ ಭವನದ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು, ರಾಜ್ಯಪಾಲರು ಹಿಂದಿ ಸಾಮ್ರಾಜ್ಯಶಾಹಿಗಳ ಪರವಾಗಿ ವರ್ತಿಸುತ್ತಿದ್ದಾರೆ. ಕರ್ನಾಟಕ ವಿರೋಧಿ ಧೋರಣೆ ತಳೆದಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯಪಾಲರ ಮರು ಪರಿಶೀಲನೆಯ ಪತ್ರದ ಹಿಂದೆ ಕರ್ನಾಟಕದಲ್ಲಿ ಹಿಂದಿ ಹೇರಿಕೆಯನ್ನು ಶಾಶ್ವತವಾಗಿ ನಡೆಸುವ ಹುನ್ನಾರವಿದೆ. ರಾಜ್ಯಪಾಲರು ತಮ್ಮ ಕಾರ್ಯವೈಖರಿಯನ್ನು ಮೀರಿ ಕನ್ನಡಿಗರ ಆಶೋತ್ತರಗಳಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಕರ್ನಾಟಕದಲ್ಲಿ ರಾಜ್ಯಪಾಲರಾಗಿ ಉಳಿಯುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದ ಆಡಳಿತದಲ್ಲಿ ರಾಜ್ಯಪಾಲರು ಮೂಗು ತೂರಿಸುವುದು ಆಕ್ಷೇಪಾರ್ಹ ಬೆಳವಣಿಗೆ. ರಾಜ್ಯ ಸರ್ಕಾರವನ್ನು ಕರ್ನಾಟಕದ ಜನತೆ ಆಯ್ಕೆ ಮಾಡಿದ್ದಾರೆ. ನಾಡಿನ ಜನರ ಬೇಕು ಬೇಡಗಳನ್ನು ರಾಜ್ಯ ಸರ್ಕಾರ ತೀರ್ಮಾನ ಮಾಡಲಿದೆ. ಹೀಗಿರುವಾಗ ರಾಜ್ಯಪಾಲರು ಸರ್ಕಾರದ ಜನಪರ ನಿರ್ಧಾರಗಳನ್ನು ಬೆಂಬಲಿಸಬೇಕು. ಆದರೆ ರಾಜ್ಯಪಾಲರು ಹಿಂದಿ ಮಾಫಿಯಾ ಪರವಾಗಿ ಕಾರ್ಯ ನಿರ್ವಹಿಸುತ್ತಿರುವಂತೆ ತೋರುತ್ತಿದೆ. ಹೀಗಾಗಿ ಅವರನ್ನು ಕೇಂದ್ರ ಸರ್ಕಾರ ಕೂಡಲೇ ವಜಾ ಮಾಡಬೇಕೆಂದು ಆಗ್ರಹಿಸಿದರು.
ಬೆಂಗಳೂರು ಸ್ಥಳೀಯ ಭಾಷೆಗಳ ಸಂರಕ್ಷಣಾ ಸಂಘವೆಂಬ ಅನಾಮಧೇಯ ಸಂಘಟನೆಯ ಮನವಿಗೆ ತುರ್ತಾಗಿ ರಾಜ್ಯಪಾಲರು ಪ್ರತಿಕ್ರಿಯಿಸಿ ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿರುವುದು ದೊಡ್ಡ ಹುನ್ನಾರ. ಕರ್ನಾಟಕಕ್ಕೆ ವಲಸೆ ಬರುತ್ತಿರುವ ಹಿಂದಿ ಭಾಷಿಕರಿಗಾಗಿ ಸುರಕ್ಷಿತ ತಾಣ ಮಾಡಿಕೊಡುವ ದೂರಗಾಮಿ ಉದ್ದೇಶ ಇದಾಗಿದೆ. ಹಿಂದಿ ಮಾಫಿಯಾ ಎಷ್ಟು ಬಲಶಾಲಿಯಾಗಿದೆ ಎನ್ನುವುದು ಇದರಿಂದಲೇ ತಿಳಿಯುತ್ತದೆ ಎಂದು ಕಿಡಿಕಾರಿದರು.
ರಾಜ್ಯಪಾಲರ ಪತ್ರವನ್ನು ರಾಜ್ಯ ಸರ್ಕಾರ ತಿರಸ್ಕರಿಸಬೇಕು. ತೃತೀಯ ಭಾಷೆ ಗ್ರೇಡಿಂಗ್ ವ್ಯವಸ್ಥೆಯ ನಿರ್ಧಾರವನ್ನು ಸರ್ಕಾರ ಕೈಗೊಂಡಿದೆ. ಇದನ್ನು ಬದಲಿಸುವ ಪ್ರಯತ್ನವನ್ನು ಯಾರೇ ಮಾಡಿದರೂ ಪ್ರತಿಭಟನೆ ಮಾಡಬೇಕಾಗುತ್ತದೆ. ರಾಜ್ಯಪಾಲ ಗೆಹ್ಲೋಟ್ ಅವರು ಹಿಂದಿ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಅಲ್ಲೆಲ್ಲ ತೃತೀಯ ಭಾಷೆಯಾಗಿ ಕನ್ನಡ ಕಲಿಸಲು ಸಾಧ್ಯವೇ?. ಹಾಗೆಯೇ ಕರ್ನಾಟಕದಲ್ಲಿ ತೃತೀಯ ಭಾಷೆಯಾಗಿ ಹಿಂದಿ ಹೇರಲು ಪ್ರಯತ್ನ ಮಾಡಬಾರದು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕರವೇ ಜಿಲ್ಲಾಧ್ಯಕ್ಷ ಎಚ್.ಎನ್.ಮಂಜೇಶ್, ಉಪಾಧ್ಯಕ್ಷ ರಾಜೇಂದ್ರ ನಾಯಕ್, ಕಾರ್ಯದರ್ಶಿ ಅರ್ಜುನ್, ಪ್ರಧಾನ ಸಂಚಾಲಕ ರಾಘವೇಂದ್ರ, ಸಂಘಟನಾ ಕಾರ್ಯದರ್ಶಿ ಹೇಮಂತ್, ಚಾಮರಾಜನಗರ ತಾಲೂಕು ಅಧ್ಯಕ್ಷ ಸಂತೋಷ್, ಕೊಳ್ಳೇಗಾಲ ಅಧ್ಯಕ್ಷ ಆಯಾಜ್ ಕನ್ನಡಿಗ, ಗುಂಡ್ಲುಪೇಟೆ ಅಧ್ಯಕ್ಷ ರಮೇಶ್ ನಾಯಕ್, ಯಳಂದೂರು ಅಧ್ಯಕ್ಷ ಮಹದೇವಸ್ವಾಮಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಭಾಗ್ಯಲಕ್ಷ್ಮಿ, ಚಾ.ನಗರ ಅಧ್ಯಕ್ಷೆ ಸುಮಾ, ಕೊಳ್ಳೇಗಾಲ ಅಧ್ಯಕ್ಷೆ ರಾಜೇಶ್ವರಿ ಮತ್ತು ಇತರರು ಭಾಗವಹಿಸಿದ್ದರು.